ಬೆಂಗಳೂರು : ರಾಜ್ಯದಲ್ಲಿ ಪ್ರಭಾವಿ ವೀರಶೈವ ಲಿಂಗಾಯತ ಸಮುದಾಯದ ನಾಯಕನನ್ನಾಗಿ ಲಕ್ಷ್ಮಣ ಸವದಿಯನ್ನು ಬೆಳೆಸುವ ಪ್ರಯತ್ನಕ್ಕೆ ಕೈಹಾಕಿದ್ದ ಬಿಜೆಪಿ ಹೈಕಮಾಂಡ್, ಯಡಿಯೂರಪ್ಪ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಿ ನಂತರದ ನಡೆದ ರಾಜಕೀಯ ವಿದ್ಯಮಾನಗಳಲ್ಲಿ ಏಕಾಏಕಿ ಸವದಿಯನ್ನು ಮೂಲೆಗುಂಪು ಮಾಡಿತು. ಚುನಾವಣೆಗೆ ಸ್ಪರ್ಧಿಸವು ಟಿಕೆಟ್ ಕೂಡ ಸಿಗದೆ ಪಕ್ಷದಿಂದ ಹೊರನಡೆಯುವ ಸ್ಥಿತಿಗೆ ಸವದಿ ಅವರದ್ದಾಯಿತು.
2004, 2008, 2013 ಮೂರು ಬಾರಿ ಅಥಣಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ಲಕ್ಷ್ಮಣ ಸವದಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ನ ಮಹೇಶ್ ಕುಮಟಳ್ಳಿ ವಿರುದ್ಧ ಮೊದಲ ಬಾರಿ ಸೋತಿದ್ದರು. ಕುಮಟಳ್ಳಿ ರಾಜೀನಾಮೆ ನೀಡಿ ಬಿಜೆಪಿ ಸೇರಿದ ನಂತರ 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕುಮಟಳ್ಳಿ ಗೆಲುವಿಗೆ ಶ್ರಮಿಸಿದ್ದರು. ಆದರೆ ಈಗ ಪಕ್ಷದ ಟಿಕೆಟ್ ಎರಡನೇ ಬಾರಿ ನಿರಾಕರಣೆ ಹಿನ್ನಲೆಯಲ್ಲಿ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.
ಯಡಿಯೂರಪ್ಪ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಲಕ್ಷ್ಮಣ ಸವದಿ 2008ರಲ್ಲಿಯೇ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದು, ಸಹಕಾರ ಖಾತೆ ನಿರ್ವಹಿಸಿದ್ದರು. ನಂತರ ಪಕ್ಷದಲ್ಲಿ ಬಿ.ಎಲ್.ಸಂತೋಷ್ ಬಣ ಪ್ರಬಲವಾಗುತ್ತಿದ್ದಂತೆ ಸವದಿ ನಿಧಾನಕ್ಕೆ ಬಿಎಸ್ವೈ ಸಖ್ಯದಿಂದ ಸಂತೋಷ್ ಸಖ್ಯಕ್ಕೆ ಜಾರಿದರು. ಹಾಗಾಗಿಯೇ ಪಕ್ಷದಲ್ಲಿ ಸವದಿಗೆ ಹೆಚ್ಚಿನ ಮನ್ನಣೆಯೂ ಸಿಗುವಂತಾಯಿತು.
ಬಿಎಸ್ವೈ ಸಂಪುಟದಲ್ಲಿ ಸವದಿಗೆ ಡಿಸಿಎಂ ಸ್ಥಾನ: 2018ರಲ್ಲಿ ಸೋತಿದ್ದ ಸವದಿಗೆ ಬಿಜೆಪಿ ಹೈಕಮಾಂಡ್ ರತ್ನಗಂಬಳಿ ಹಾಸಿ ಅಧಿಕಾರದ ಅಟ್ಟಕ್ಕೇರಿಸಿದ್ದು ಸುಳ್ಳಲ್ಲ. ಪರಿಷತ್ ಸದಸ್ಯರನ್ನಾಗಿ ಮಾಡಿ ಮೈತ್ರಿ ಸರ್ಕಾರ ಪತನವಾದ ನಂತರ ರಚನೆಯಾದ ಬಿಜೆಪಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡಿತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಮೂವರು ಉಪ ಮುಖ್ಯಮಂತ್ರಿಗಳನ್ನು ಮಾಡಿತು. ಅದರಲ್ಲಿ ಲಿಂಗಾಯತ ನಾಯಕರಾಗಿ ಬೆಳೆಯಲಿ ಎನ್ನುವ ಕಾರಣಕ್ಕೆ ಹಾಗೂ ಯಡಿಯೂರಪ್ಪ ನಂತರ ಲಿಂಗಾಯತ ಸಮುದಾಯದ ನಾಯಕರನ್ನಾಗಿಸಲು ಲಕ್ಷ್ಮಣ ಸವದಿಗೆ ಮಣೆ ಹಾಕಿ ಬಿಎಸ್ವೈ ಸಂಪುಟದಲ್ಲಿ ಡಿಸಿಎಂ ಸ್ಥಾನ ನೀಡಿತು. ಮಹಾರಾಷ್ಟ್ರ ಚುನಾವಣೆಯಲ್ಲಿಯೂ ಪಕ್ಷದ ಹೈಕಮಾಂಡ್ ಜವಾಬ್ದಾರಿ ನೀಡಿತು.
ಆದರೆ ಯಡಿಯೂರಪ್ಪಗೆ ಪರ್ಯಾಯವಾಗಿ ಬೆಳೆಯಬಲ್ಲ ಶಕ್ತಿ ಸವದಿಯಲ್ಲಿ ಕಾಣದಾದಾಗ ತಮ್ಮ ಪರ್ಯಾಯ ಹುಡುಕಾಟದ ಹಾದಿ ತಪ್ಪಿದೆ ಎನ್ನುವ ನಿರ್ಧಾರಕ್ಕೆ ಬಂದ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ರಾಜೀನಾಮೆ ನಂತರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದಾಗ ಅವರ ಸಂಪುಟದಲ್ಲಿ ಮತ್ತೆ ಡಿಸಿಎಂ ಆಗುವ ನಿರೀಕ್ಷೆಯಲ್ಲಿದ್ದ ಸವದಿಗೆ ಸಚಿವ ಸ್ಥಾನ ನೀಡಲಿಲ್ಲ. ಸಂಪುಟದಿಂದ ಹೊರಗುಳಿಯಬೇಕಾಯಿತು.
ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಸವದಿ: ಕೋರ್ ಕಮಿಟಿ ಸದಸ್ಯ ಸ್ಥಾನ ನೀಡಿ ಪಕ್ಷದಲ್ಲಿ ಜವಾಬ್ದಾರಿ ನೀಡಿದ್ದರೂ 2023 ರ ಚುನಾವಣೆಗೆ ಟಿಕೆಟ್ ನೀಡಲಿಲ್ಲ. ಸೋತಿದ್ದರೂ ಪರಿಷತ್ ಸ್ಥಾನ ನೀಡಿ, ಉಪ ಮುಖ್ಯಮಂತ್ರಿ ಸ್ಥಾನ ನೀಡಿ ಆಕಾಶಕ್ಕೇರಿಸಿದ್ದ ಹೈಕಮಾಂಡ್ ಏಕಾಏಕಿ ಟಿಕೆಟ್ ಕೂಡ ನೀಡದೆ ಪಾತಾಳಕ್ಕೆ ತಳ್ಳಿತು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬೆಂಬಲವಿದ್ದರೂ ಟಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಸ್ವತಃ ಹೈಕಮಾಂಡ್ ಸವದಿಗೆ ಟಿಕೆಟ್ ನೀಡಲು ನಿರಾಕರಿಸಿದೆ. ತಾನೇ ಲಿಂಗಾಯತ ಸಮುದಾಯದ ನಾಯಕನಾಗಿ ರಾಜಕೀಯವಾಗಿ ಬೆಳೆಯಲು ಮುಂದಾಗಿದ್ದ ಹೈಕಮಾಂಡ್ ಇದೀಗ ತಾನಾಗಿಯೇ ಅದೇ ಸವದಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಪರಿಣಾಮವಾಗಿ ಸವದಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ : 'ನನ್ನ ಹೆಣ ಕೂಡ ಬಿಜೆಪಿ ಆಫೀಸ್ ಕಡೆ ಹೋಗೋದು ಬೇಡ': ಲಕ್ಷ್ಮಣ್ ಸವದಿ ಕಿಡಿನುಡಿ