ಶಿವಮೊಗ್ಗ: ನಾನು ಸದ್ಯ ಆರೋಗ್ಯವಾಗಿದ್ದೇನೆ. ಮುಂದಿನ ತಿಂಗಳು ಚಿಕಿತ್ಸೆಗಾಗಿ ಯುಎಸ್ಗೆ ಹೊಗಿ ಬಂದು ಜನವರಿಯಿಂದ ಪುನಃ ಶೂಟಿಂಗ್‌ನಲ್ಲಿ ಇರ್ತಿನಿ ಎಂದು ನಟ ಶಿವರಾಜ್ಕುಮಾರ್ ಹೇಳಿದರು. ಭೈರತಿ ರಣಗಲ್ ಚಿತ್ರ ಪ್ರದರ್ಶನವಾಗುತ್ತಿರುವ ನಗರದ ಮಲ್ಲಿಕಾರ್ಜುನ ಚಿತ್ರಮಂದಿರಕ್ಕೆ ನಟ ಶಿವ ರಾಜ್ಕುಮಾರ್ ಅವರು ಪತ್ನಿ ಗೀತಾರೊಂದಿಗೆ ಭೇಟಿ ನೀಡಿ ಮಾತನಾಡಿದರು.
ಭೈರತಿ ರಣಗಲ್ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ಚೆನ್ನಾಗಿರುವುದರಿಂದ ಜನ ಥಿಯೇಟರ್ಗೆ ಬರುತ್ತಿದ್ದಾರೆ. ಮಫ್ತಿ ಪಾತ್ರವನ್ನು ಜನ ತುಂಬಾ ಮೆಚ್ಚಿಕೊಂಡಿದ್ದರು. ಇಂತಹ ಸ್ವಿಕ್ವೆಲ್ ಪಾತ್ರ ಮಾಡಬೇಕೆಂದು ಬಹಳ ದಿನಗಳಿಂದ ಇತ್ತು. ಮಫ್ತಿ 7 ವರ್ಷಗಳ ಹಿಂದೆ ಮಾಡಿದ ಪಾತ್ರವಾಗಿದೆ. ಈಗ ಈ ಪಾತ್ರವನ್ನು ತುಂಬ ಅಚ್ಚುಕಟ್ಟಾಗಿ ನರ್ತನ್ ಮಾಡಿದ್ದಾರೆ ಇದರಿಂದ ಜನ ಚಿತ್ರಕ್ಕೆ ಇಷ್ಟೊಂದು ರೆಸ್ಪಾನ್ಸ್ ನೀಡುತ್ತಿದ್ದಾರೆ ಎಂದರು.
ನವೆಂಬರ್ 29 ರಿಂದ ತೆಲುಗು ಮತ್ತು ತಮಿಳಿನಲ್ಲಿ ಚಿತ್ರ ಬಿಡುಗಡೆ ಆಗುತ್ತಿದೆ. ಎಲ್ಲಾ ಕಡೆ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಇಂದು ಶಿರಸಿ, ನಾಳೆ ಹುಬ್ಬಳ್ಳಿಗೆ ಹೋಗುತ್ತಿದ್ದೇವೆ. ನಾಡಿದ್ದು, ರಾಣೆಬೆನ್ನೊರು ಆ ಮೇಲೆ ತುಮಕೂರಿಗೆ ಹೋಗಿ ಬೆಂಗಳೂರಿಗೆ ತೆರಳುತ್ತೇನೆ. ಹೊರ ದೇಶ ಯುಎಸ್, ದುಬೈ, ಜರ್ಮನಿ ಎಲ್ಲಾ ಕಡೆ ಒಳ್ಳೆ ಓಪನಿಂಗ್ ತೆಗೆದುಕೊಂಡಿದೆ ಎಂದು ಹೇಳಿದರು.
ಇದು ಬಹಳ ಆಳವಾದ ಸಿನಿಮಾ, ಜನಗಳಿಗೆ ಮುಟ್ಟುವ ಸಿನಿಮಾವಾಗಿದೆ. ಇಲ್ಲಿ ಬಹಳ ಸೂಕ್ಷ್ಮವಾದ ಪಾಯಿಂಟ್ಸ್ಗಳಿವೆ. ಈ ಚಿತ್ರವನ್ನು ನಾವು ಕರ್ಮಷಿಯಲ್ಗಾಗಿ ಮಾಡಿದ್ದಲ್ಲ. ಚಿತ್ರದಲ್ಲಿ ಮನರಂಜನೆ ಜೊತೆಗೆ ಒಳ್ಳೆಯ ಪಾಯಿಂಟ್‌ಗಳಿವೆ. ಮುಂದಿನ ಚಿತ್ರ 45 ಮುಗಿದಿದೆ. ರಿಲೀಸ್ಗೆ ರೆಡಿ ಇದೆ. ಮುಂದಿನ ವರ್ಷಕ್ಕೆ ಬರುತ್ತದೆ. ಇನ್ನೊಂದು ಚಿತ್ರ ಇದೆ, ಅದಕ್ಕೆ ಹೆಸರಿಟ್ಟಿಲ್ಲ ಎಂದು ಮಾಹಿತಿ ನೀಡಿದರು.
ತೆಲುಗಿನ ನಟ ರಾಮಚರಣ್ ಜೊತೆ ಸಿನಿಮಾ ಮಾಡ್ತಾ ಇದ್ದೀನಿ. ನಮ್ಮದೆ ಪ್ರೊಡಕ್ಷನ್ನಿಂದ ಎ ಫಾರ್ ಆನಂದ್ ತಯಾರಿಯಲ್ಲಿದ್ದೇವೆ. ಅದು ಮಕ್ಕಳ ಚಿತ್ರ, ವಿಭಿನ್ನವಾಗಿರುತ್ತದೆ. ಮುಂದಿನ ಫೆಬ್ರವರಿಯಲ್ಲಿ ನನ್ನ ಮಗಳು ನಿವೇದಿತಾರಿಂದ ಫೈಯರ್ ಪ್ಲೆ ಬಿಡುಗಡೆಯಾಗಲಿದೆ. ಪ್ರತಿ ವರ್ಷ ಒಂದೊಂದು ಸಿನಿಮಾ ಬಿಡುಗಡೆಯಾಗಲಿದೆ. ಈಸೂರು ದಂಗೆ ಚಿತ್ರ ಮಾಡಬೇಕೆಂದು ಇದೆ. ಆದರೆ ಅದಕ್ಕೆ ತುಂಬಾ ತಯಾರಿ ಬೇಕಿದೆ ಎಂದರು.
ನರ್ತನ್ ನಿರ್ದೇಶನದ ಭೈರತಿ ರಣಗಲ್ ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಅವರು ಸಿನಿಮಾ ಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ.
ಇದನ್ನೂ ಓದಿ: 'ಮೇಘ ಚಿತ್ರದ ಕಥೆ 8 ಬಾರಿ ಕೇಳಿದೆ': ಕನ್ನಡತಿ ನಟ ಕಿರಣ್ ರಾಜ್; ಟ್ರೇಲರ್ ನೋಡಿ