ರಾಮನಗರ: ಚನ್ನಪಟ್ಟಣ ಉಪಚುನಾವಣೆ ಫಲಿತಾಂಶದಿಂದ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಕೂಡ್ಲೂರು ಪಂಚಾಯಿತಿಯ ಶ್ರೀರಾಂಪುರ ಗ್ರಾಮದ ಜೆಡಿಎಸ್ ಕಾರ್ಯಕರ್ತ ಮಂಜುನಾಥ್ ಅವರ ನಿವಾಸಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. ಈ ವೇಳೆ ಯುವಕನಿಗೆ ಯುವಕನಿಗೆ ಧೈರ್ಯ ತುಂಬಿ, ದುಡುಕಿನ ನಿರ್ಧಾರ ಕೈಗೊಳ್ಳದಂತೆ ಕಿವಿಮಾತು ಹೇಳಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ಎಂದ ಮೇಲೆ ಸೋಲು-ಗೆಲುವು ಸಾಮಾನ್ಯ. ಸೋಲೇ ಗೆಲುವಿನ ಮೆಟ್ಟಿಲು. ಹೀಗಾಗಿ ಯಾರೂ ಧೃತಿಗೆಡಬಾರದು, ನಾವೆಲ್ಲರೂ ಪಕ್ಷದ ಜತೆ ನಿಂತು ಕೆಲಸ ಮಾಡೋಣ, ಹೋರಾಟ ಮಾಡೋಣ ಎಂದು ತಿಳಿಸಿದರು. ಇದೇ ವೇಳೆ ಚನ್ನಪಟ್ಟಣ ತಾಲೂಕು ಜೆಡಿಎಸ್ ಅಧ್ಯಕ್ಷರಾದ ಶ್ರೀ ಜಯಮುತ್ತು, ಮುಖಂಡರಾದ ಕುಕ್ಕೂರ ದೊಡ್ಡಿ ಜಯರಾಮ್ ಸೇರಿದಂತೆ ಅನೇಕ ಸ್ಥಳೀಯ ಮುಖಂಡರು ಅವರ ಜೊತೆಯಲ್ಲಿದ್ದರು.
ಅಧಿಕಾರಕ್ಕೆಂದು ದೇವೇಗೌಡ ಎಂದೂ ರಾಜಕಾರಣ ಮಾಡಿಲ್ಲ- ಮಾಜಿ ಪ್ರಧಾನಿಗಳಾದ ದೇವೇಗೌಡರು ಅಧಿಕಾರಕ್ಕಾಗಿ ಎಂದೂ ರಾಜಕಾರಣ ಮಾಡಿಲ್ಲ, ಮಾಡುವುದೂ ಇಲ್ಲ. ಇದನ್ನು ಆ ವ್ಯಕ್ತಿ ಅರ್ಥ ಮಾಡಿಕೊಳ್ಳಬೇಕು ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಸಿ. ಪಿ ಯೋಗೇಶ್ವರ್ಗೆ ತಿರುಗೇಟು ಕೊಟ್ಟಿದ್ದಾರೆ. ಈಗ ದೇವೇಗೌಡರ ವಯಸ್ಸು 92 ವರ್ಷ. ದೇಶ ಮತ್ತು ರಾಜ್ಯ ಕಟ್ಟಲು ಅವರ ಮಾರ್ಗದರ್ಶನ ಬೇಕು ಎಂದು ಅನೇಕ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ದಾರೆ. ಹಾಗಾಗಿ ಇಲ್ಲಿ ಅಧಿಕಾರದ ದಾಹಕ್ಕೆ, ಅಧಿಕಾರಕ್ಕೆ ಅಂಟಿಕೊಂಡು ದೇವೇಗೌಡರು ರಾಜಕಾರಣ ಮಾಡುತ್ತಿಲ್ಲ ಎಂದರು.
ದೇವೇಗೌಡರು ರಾಜಕೀಯ ನಿವೃತ್ತಿ ಘೋಷಿಸಲಿ ಎಂಬ ಸಿ.ಪಿ ಯೋಗೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ದೇವೇಗೌಡರ 62 ವರ್ಷಗಳ ಅವರ ರಾಜಕೀಯ ಬದುಕಿನಲ್ಲಿ ಏನನ್ನೂ ಅಪೇಕ್ಷೆ ಇಟ್ಟುಕೊಂಡವರಲ್ಲ. ಅಷ್ಟು ಸುದೀರ್ಘ ರಾಜಕೀಯ ಜೀವನದಲ್ಲಿ ಅವರು ಕೇವಲ ಮೂರೂವರೆ ವರ್ಷ ಮಾತ್ರ ಅಧಿಕಾರದಲ್ಲಿ ಇದ್ದರು. ಈಗೇನು ಅವರು ಮತ್ತೆ ಪ್ರಧಾನಿ ಆಗಲಿಕ್ಕೆ ರಾಜಕೀಯ ಮಾಡುತ್ತಿದ್ದಾರೆಯೇ? ಅವರು ನಿವೃತ್ತಿ ಹೊಂದಬೇಕಾ? ಎಂದು ಅವರು ಕಿಡಿಕಾರಿದರು.
ಚನ್ನಪಟ್ಟಣದಲ್ಲಿ ಯಾವುದೇ ಕಾರ್ಯಕರ್ತನಿಂತರೂ ನಮಗೆ ಸಾಂಪ್ರದಾಯಿಕವಾಗಿ ಕನಿಷ್ಠ 60 ಸಾವಿರ ಮತಗಳು ಬರುತ್ತಿದ್ದವು. ಈಗ ಆ ಪ್ರಮಾಣ 87 ಸಾವಿರಕ್ಕೆ ಹೋಗಿ ಮುಟ್ಟಿದೆ. ಜನ ನಮ್ಮನ್ನು ಕೈ ಬಿಟ್ಟಿಲ್ಲ ಎಂದು ತಿಳಿಸಿದರು.
ನಮ್ಮ ಅವಶ್ಯಕತೆ ಆ ಸಮುದಾಯಕ್ಕೆ ಇಲ್ಲ ಅನಿಸುತ್ತೆ - ಒಂದು ಸಮುದಾಯದ ಪರವಾಗಿ ದೇವೇಗೌಡರು ಈ ಹಿಂದೆ ಅನೇಕ ಹೋರಾಟಗಳನ್ನು ಮಾಡಿದ್ದರು. ಅವರ ಪರವಾಗಿ ಅನೇಕ ನಿರ್ಣಯಗಳನ್ನು ಕೈಗೊಂಡಿದ್ದರು. ಮೀಸಲಾತಿ ನೀಡಿದ್ದರು. ಆದರೆ, ಈ ಚುನಾವಣೆಯಲ್ಲೂ ಆ ಸಮುದಾಯವನ್ನು ಕಡೆಗಣಿಸಬಾರದು, ಅವರನ್ನು ವಿಶ್ವಾಸಕ್ಕೆ ತಗೊಂಡು ಹೋಗಬೇಕು ಅಂತ ಪ್ರಯತ್ನ ಮಾಡಿದ್ದೆವು. ಆದರೆ ನಮ್ಮ ಅವಶ್ಯಕತೆ ಅವರಿಗೆ ಇಲ್ಲ ಅಂತ ಆ ಸಮುದಾಯದವರು ನಿನ್ನೆ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಬೇರೆ ಸಮುದಾಯಗಳನ್ನು ಯಾವ ರೀತಿ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಯಾವ ಅರ್ಥದಲ್ಲಿ ಮಾತಾಡಿದ್ದಾರೋ ಗೊತ್ತಿಲ್ಲ: ಜಿ. ಟಿ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ನಿಖಿಲ್ ಅವರು, ಅವರು ಹಿರಿಯರು, ರಾಜಕೀಯದಲ್ಲಿ ಅವರಿಗೆ ಬಹಳ ಅನುಭವ ಇದೆ. ಅವರು ಯಾವ ಅರ್ಥದಲ್ಲಿ ಮಾತಾಡಿದ್ದಾರೋ ಗೊತ್ತಿಲ್ಲ. ಅವರು ನಮ್ಮ ಪಕ್ಷದ ಕೋರ್ ಕಮಿಟಿ ನಾಯಕರು, ಅವರಿಗೆ ಯಾವ ಗೌರವ ಕೊಡಬೇಕೋ ಅದನ್ನು ನಾವು ಕೊಡುತ್ತೇವೆಂದು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ : ಆ ಸಮುದಾಯಕ್ಕೆ ನಮ್ಮ ಅವಶ್ಯಕತೆ ಇಲ್ಲ, ಬೇರೆ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕೆಲಸ: ನಿಖಿಲ್ ಕುಮಾರಸ್ವಾಮಿ