ಉಡುಪಿ: ಸೌದಿ ದೊರೆ ಮತ್ತು ಇಸ್ಲಾಂ ಧರ್ಮವನ್ನು ನಿಂದಿಸಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ಆರೋಪದಡಿ ಸೌದಿಯಲ್ಲಿ ಬಂಧನಕ್ಕೊಳಗಾಗಿದ್ದ ಕುಂದಾಪುರದ ಬಿಜಾಡಿಯ ಹರೀಶ್ ಬಂಗೇರ ಕೊನೆಗೂ ತಾಯ್ನಾಡಿಗೆ ಮರಳಿದ್ದಾರೆ.
ಹರೀಶ್ ಬಂಗೇರ ಅವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದಿದ್ದ ಮೂಡುಬಿದಿರೆಯ ಯುವಕರು ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಇದರಿಂದ ಸೌದಿಯಲ್ಲಿ ಉದ್ಯೋಗದಲ್ಲಿದ್ದ ಅವರನ್ನು ಅಲ್ಲಿನ ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದ್ದರು.
ಇದನ್ನೂ ಓದಿ: ಇಂದಿನಿಂದ ಮಂಗಳೂರು-ಯುಎಇ ವಿಮಾನ ಸೇವೆ ಆರಂಭ
ಮೂಡುಬಿದಿರೆಯಿಂದ ನಕಲಿ ಫೇಸ್ಬುಕ್ ಖಾತೆ ಮೂಲಕ ಪೋಸ್ಟ್ ಮಾಡಿರುವ ಸಂಬಂಧ ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಗಳ ಬಂಧಿಸಿದ್ದರು. ಹಾಗಾಗಿ, ಹರೀಶ್ ಬಂಗೇರರ ಬಿಡುಗಡೆಗಾಗಿ ಕೇಂದ್ರ ಗೃಹ ಸಚಿವಾಲಯ ಸೌದಿ ಅಧಿಕಾರಿಗಳ ಜೊತೆ ನಿರಂತರ ಮಾತುಕತೆ ನಡೆಸಿತ್ತು. ಇದರ ಫಲವಾಗಿ ಎರಡು ವರ್ಷಗಳ ಬಳಿಕ ಹರೀಶ್ ಬಂಗೇರ ಸೌದಿ ಜೈಲಿನಿಂದ ಬಿಡುಗಡೆಯಾಗಿ ಭಾರತಕ್ಕೆ ಮರಳಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಹರೀಶ್ ಬಂಗೇರ ಅವರನ್ನು, ಪತ್ನಿ ಸಹಿತ ಕುಟುಂಬಸ್ಥರು ಸ್ವಾಗತಿಸಿ ಬರಮಾಡಿಕೊಂಡರು.