ಬೆಂಗಳೂರು: ಉತ್ತಮ ಸಾರಿಗೆ ವ್ಯವಸ್ಥೆಯಲ್ಲಿ ದೇಶದಲ್ಲೇ ನಂಬರ್ ಒನ್ ಸಾರಿಗೆ ಸಂಸ್ಥೆ ಅಂದರೆ ಅದು ಕೆಎಸ್ಆರ್ಟಿಸಿ. ವರ್ಷದಲ್ಲಿ ಏನಿಲ್ಲಾ ಎಂದರೂ ಹತ್ತಾರು ಪ್ರಶಸ್ತಿಗಳನ್ನ ಮುಡಿಗೇರಿಸಿಕೊಳ್ಳುತ್ತೆ ಈ ಸಾರಿಗೆ ಸಂಸ್ಥೆ. ಯಾವುದೇ ಹೊಸ ಯೋಜನೆ ಬಂದರೂ ಅದು ಮೊದಲು ಚಾಲನೆ ಸಿಗೋದೇ ಕೆಎಸ್ಆರ್ಟಿಸಿಯಲ್ಲಿ. ಇಂತಹ ನಿಗಮವೇ ಇದೀಗ ನಷ್ಟದಲ್ಲಿ ಸಿಲುಕಿದೆ ಎಂದರೆ ನಂಬಲೇಬೇಕು.
ಹೌದು.., ಕೆಎಸ್ಆರ್ಟಿಸಿ ಮೇಲಿಂದ ಮೇಲೆ ನಷ್ಟ ಹಾದಿಯಲ್ಲಿದ್ದು, ಲಾಭದ ಹಳಿಗೆ ಬಾರದಷ್ಟು ಸಾಲದ ಹೊರೆ ಹೊತ್ತುಕೊಂಡಿದೆ. ಇದೀಗ ನಷ್ಟದಿಂದ ಪಾರಾಗಲು ಪೀಣ್ಯ ಬಸವೇಶ್ವರ ಬಸ್ ನಿಲ್ದಾಣವನ್ನ ಬ್ಯಾಂಕ್ನಲ್ಲಿ ಅಡಮಾನ ಇಡಲು ಮುಂದಾಗಿದೆ. ನಾನಾ ಕಾರಣಗಳಿಂದ ಕೆಎಸ್ಆರ್ಟಿಸಿ ಕೋಟ್ಯಂತರ ರೂಪಾಯಿ ನಷ್ಟದಲ್ಲಿ ಮುಳುಗಿದೆ. ಮುಳುಗುವ ಹುಡಗಿನಂತಾಗಿರುವ ಕೆಎಸ್ಆರ್ಟಿಸಿ ಪರಿಸ್ಥಿತಿ ಹೀಗಿದ್ದರೂ ಸಹ ಸರ್ಕಾರ ನೆರವಿಗೆ ಬಂದಿಲ್ಲವಂತೆ.
ಈ ಹಿಂದಿನ ಸಚಿವರುಗಳ ನಿರ್ಲಕ್ಷ್ಯ ಹಾಗೂ ಅನಗತ್ಯ ನಿರ್ಧಾರದಿಂದ ಕೆಎಸ್ಆರ್ಟಿಸಿ ಸಾಲದ ಸುಳಿಯಲ್ಲಿ ಸಿಲುಕಿದೆ ಎನ್ನುವ ಆರೋಪಗಳು ಕೂಡಾ ಕೇಳಿಬಂದಿವೆ. ನೌಕರರಿಗೆ ಸಂಬಳ ನೀಡಲು, ಸ್ಪೇರ್ ಪಾರ್ಟ್ಸ್, ಬ್ಯಾಟರಿ, ಡಿಸೇಲ್ ಖರೀದಿಗೂ ನಿಗಮದ ಬಳಿ ಹಣವಿಲ್ಲವಂತೆ. ಹೀಗಾಗಿ ಹದಗೆಟ್ಟ ಆರ್ಥಿಕ ಪರಿಸ್ಥಿತಿಯಿಂದ ಪಾರಾಗಲು ಬ್ಯಾಂಕ್ನಲ್ಲಿ ಪೀಣ್ಯ ಬಸವೇಶ್ವರ ಬಸ್ ನಿಲ್ದಾಣವನ್ನ ಅಡಮಾನ ಇಡಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.
ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ರಾಷ್ಟ್ರೀಕೃತ ಬ್ಯಾಂಕ್ಗಳು, ನಮ್ಮ ಷರತ್ತುಗಳ ಅನ್ವಯ 220 ಕೋಟಿ ಸಾಲ ನೀಡುವಂತೆ ಕೆಎಸ್ಆರ್ಟಿಸಿ ಕಳೆದ ಜನವರಿಯಲ್ಲಿ ಜಾಹೀರಾತು ನೀಡಿತ್ತು. ತಮ್ಮ ಷರತ್ತು ಅನ್ವಯ ಆಸಕ್ತ ಶೆಡ್ಯೂಲ್ಡ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳು ಸಾಲ ನೀಡಲು ಈಗ ಮುಂದೆ ಬಂದಿವೆ. ಹೀಗಾಗಿ ಹಲವು ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಪೀಣ್ಯ ಬಸವೇಶ್ವರ ನಿಲ್ದಾಣ ಅಡಮಾನ ಇಟ್ಟು ಸಾಲ ಪಡೆಯಲು ನಿಗಮ ಮುಂದಾಗಿದೆ ಎನ್ನಲಾಗ್ತಿದೆ.
ಆಡಳಿತ ವೈಫಲ್ಯ ಹಾಗೂ ದುಂದುವೆಚ್ಚಕ್ಕೆ ನಿಯಂತ್ರಣ ಹಾಕಲು ಸಾಧ್ಯವಾಗದೇ ಇರೋದ್ರಿಂದ, ಇದೀಗ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ. ಈಗಾಗಲೆ ಮಾಡಿರುವ ಕೋಟಿ ಕೋಟಿ ಸಾಲಕ್ಕೆ ಬಡ್ಡಿ ಕಟ್ಟೋದಕ್ಕೆ ಆಗದೆ ಸಾರಿಗೆ ನಿಗಮ ಪರದಾಡುತ್ತಿದೆ. ಇದೀಗ ಮಾಡಿರುವ ಸಾಲ ಮರುಪಾವತಿ ಮಾಡಲು ಮತ್ತೆ ಸಾಲ ಪಡೆಯುತ್ತಿದೆ.
ಸಾಲಕ್ಕಾಗಿ ಈಗಾಗಲೇ ಬಿಎಂಟಿಸಿಯು ಕೇಂದ್ರ ಕಚೇರಿ ಇರುವ ಶಾಂತಿನಗರದ ಟಿಟಿಎಂಸಿಯನ್ನೇ ಬಿಎಂಟಿಸಿ ಸಹ ಅಡಮಾನ ಇಟ್ಟಿದೆ. ಇದೇ ಹಾದಿಯನ್ನ ತುಳಿದಿರುವ ಕೆಎಸ್ಆರ್ಟಿಸಿ ಕೂಡ ಪೀಣ್ಯ ಬಸ್ ನಿಲ್ದಾಣ ಅಡಮಾನ ಇಡಲಿದೆ. ಒಟ್ಟಿನಲ್ಲಿ ಆಡಳಿತ ವೈಫಲ್ಯ, ನಿಯಂತ್ರಣಕ್ಕೆ ಬಾರದ ಅಕ್ರಮಗಳಿಂದ ನಿಗಮ ದಿವಾಳಿಯಾಗಿದೆ. 2013 ರಿಂದಲ್ಲೂ ಆರ್ಥಿಕವಾಗಿ ಚೇತರಿಕೆ ಕಂಡಿಲ್ಲ. ನಿಗಮ ಹೀಗೆ ಮುಂದುವರೆದರೆ ಬೀಗ ಹಾಕಿದರೂ ಅಚ್ಚರಿ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.