ಬೆಂಗಳೂರು: ರಾಜ್ಯದಲ್ಲಿ 'ಗಣಿಧಣಿ' ಎಂದೇ ಹೆಸರು ಮಾಡಿರುವ ಬಿಜೆಪಿಯ ಮಾಜಿ ನಾಯಕ ಗಾಲಿ ಜನಾರ್ದನ ರೆಡ್ಡಿ ಈಗ ತಮ್ಮದೇ ಆದ ಹೊಸ ಪಕ್ಷ ಹುಟ್ಟು ಹಾಕಿದ್ದಾರೆ. ಹಲವು ಆರೋಪಗಳನ್ನು ಎದುರಿಸಿರುವ ರೆಡ್ಡಿ ಒಂದು ದಶಕಕ್ಕೂ ಹೆಚ್ಚು ಕಾಲ ರಾಜಕಾರಣದಿಂದ ದೂರವೇ ಸರಿದಿದ್ದರು. ಇದೀಗ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್ಪಿಪಿ)ದ ಮೂಲಕ ಮತ್ತೆ ಅಖಾಡಕ್ಕೆ ಇಳಿದಿದ್ದು ನಿರಾಸೆ ಅನುಭವಿಸಿದ್ದಾರೆ. ಆದರೆ ಗಂಗಾವತಿಯಲ್ಲಿ ಗೆಲುವು ಸಾಧಿಸಿದ್ದಾರೆ.
ಗಂಗಾವತಿ ಕ್ಷೇತ್ರದಿಂದ ರೆಡ್ಡಿ ಸ್ಪರ್ಧೆಗೆ ಇಳಿದಿದ್ದರೆ, ಪತ್ನಿ ಲಕ್ಷ್ಮೀ ಅರುಣಾ ಅವರನ್ನು ಬಳ್ಳಾರಿ ನಗರ ಕ್ಷೇತ್ರದಲ್ಲಿ ತಮ್ಮ ಹಿರಿಯ ಸಹೋದರ ಸೋಮಶೇಖರ ರೆಡ್ಡಿ ವಿರುದ್ಧವೇ ಅದೃಷ್ಟ ಪರೀಕ್ಷೆಗೆ ಇಳಿಸಿದ್ದರು. ಆದರೆ ಇಲ್ಲಿ ಅವರಿಬ್ಬರ ವಿರುದ್ಧ ನಾರಾ ಭರತ್ ರೆಡ್ಡಿ ಗೆಲುವು ಸಾಧಿಸಿದ್ದು, ಅರುಣಾ ಲಕ್ಷ್ಮಿ ಸೋಲು ಅನುಭವಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ.
ಜನಾರ್ದನ ರೆಡ್ಡಿ ಅವರು ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ವಿರುದ್ಧ 8 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಈ ಮೂಲಕ ಅವರ ಕೆಆರ್ಪಿಪಿ ಪಕ್ಷದ ಮೊದಲ ಗೆಲುವು ಇದಾಗಿದೆ. ಪತ್ನಿ ಲಕ್ಷೀ ಅರುಣಾ ಬಳ್ಳಾರಿ ನಗರದಿಂದ ಸ್ಪರ್ಧಿಸಿ, ಭರತ್ ರೆಡ್ಡಿ ವಿರುದ್ಧ 37 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲು ಅನುಭವಿಸಿದೆ.
2008ರಲ್ಲಿ ಬಿ.ಎಸ್.ಯೂಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಜನಾರ್ದನ ರೆಡ್ಡಿ ಪ್ರಮುಖ ಪಾತ್ರ ವಹಿಸಿದ್ದರು. ಅಂದು ಸಹೋದರರಾದ ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ ಮತ್ತು ಆಪ್ತ ಸ್ನೇಹಿತ ಬಿ.ಶ್ರೀರಾಮುಲು ಕೂಡ ರೆಡ್ಡಿ ಜೊತೆಗಿದ್ದರು. ಆದರೆ, ಗಣಿ ಅಕ್ರಮ ಪ್ರಕರಣದಿಂದಾಗಿ ರಾಜಕೀಯದಿಂದ ದೂರವಾಗುವಂತಾಗಿತ್ತು. ಇದೀಗ ಕೆಆರ್ಪಿಪಿ ಪಕ್ಷ ಸ್ಥಾಪಿಸಿರುವ ಜನಾರ್ದನ ರೆಡ್ಡಿ 40 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು. ರೆಡ್ಡಿ ಅವರಿಗೆ ಬಳ್ಳಾರಿಗೆ ಪ್ರವೇಶಿಸದಂತೆ ಸುಪ್ರೀಂಕೋರ್ಟ್ ನಿರ್ಬಂಧ ಹೇರಿತ್ತು. ಹೀಗಾಗಿ ರಾಜಕೀಯಕ್ಕೆ ಮರು ಎಂಟ್ರಿ ಕೊಟ್ಟಿದ್ದರೂ ರೆಡ್ಡಿ ಬಳ್ಳಾರಿಯಿಂದ ದೂರ ಇರುವಂತಾಗಿತ್ತು.
ಬಳಿಕ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ರೆಡ್ಡಿ ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಫುಟ್‌ಬಾಲ್ ಪಕ್ಷದ ಚಿಹ್ನೆಯಾಗಿದ್ದು, ಗೆಲುವಿನ ಗೋಲ್ ತಲುಪಲು ಕಸರತ್ತು ನಡೆಸಿ್ದ್ದರು. ಆದರೆ ಒಂದೇ ಗೋಲು ಗಳಿಸುವಲ್ಲಿ ರೆಡ್ಡಿ ಯಶಸ್ವಿ ಆಗಿದ್ದಾರೆ.
ಕ್ಷೇತ್ರದಲ್ಲಿ ಇದುವರೆಗೂ ಕೇವಲ ಸ್ಥಳೀಯರ ನಡುವೆಯೇ ಜಿದ್ದಾಜಿದ್ದಿ ಉಂಟಾಗಿ ಸ್ಥಳೀಯರೇ ವಿಧಾನಸಭೆಗೆ ಪ್ರವೇಶಿಸುತ್ತಿದ್ದರು. ಅದರಲ್ಲೂ, ಕಳೆದ ಎರಡು ದಶಕಗಳಿಂದ ಇಕ್ಬಾಲ್ ಅನ್ಸಾರಿ ಹಾಗೂ ಪರಣ್ಣ ಮುನವಳ್ಳಿ ನಡುವೆ ನೇರ ಹಣಾಹಣಿ ಇದೆ. 2004ರಲ್ಲಿ ಜೆಡಿಎಸ್ನಿಂದ ಇಕ್ಬಾಲ್ ಅನ್ಸಾರಿ, 2008ರಲ್ಲಿ ಬಿಜೆಪಿಯಿಂದ ಪರಣ್ಣ ಮುನವಳ್ಳಿ, 2013ರಲ್ಲಿ ಮತ್ತೆ ಜೆಡಿಎಸ್ನಿಂದ ಇಕ್ಬಾಲ್ ಅನ್ಸಾರಿ ಗೆದ್ದಿದ್ದರು. 2018ರಲ್ಲಿ ಕಾಂಗ್ರೆಸ್ನಿಂದ ಇಕ್ಬಾಲ್ ಅನ್ಸಾರಿ ಕಣಕ್ಕಿಳಿದು ಸೋತಿದ್ದರು. ಬಿಜೆಪಿಯಿಂದ ಪರಣ್ಣ ಮುನವಳ್ಳಿ ಆಯ್ಕೆಯಾಗಿದ್ದರು. ಹೀಗೆ ಒಮ್ಮೆ ಗೆದ್ದವರು, ಮತ್ತೊಮ್ಮೆ ಗೆಲುವು ದಾಖಲಿಸಲು ಸಾಧ್ಯವಾಗಿಲ್ಲ. ಈ ಬಾರಿ ಸಹ ಅನ್ಸಾರಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದು, ಪರಣ್ಣ ಮುನವಳ್ಳಿ ಬಿಜೆಪಿಯಿಂದ ಕಣದಲ್ಲಿದ್ದರು. ಆದರೆ, ರೆಡ್ಡಿ ಕಾರಣದಿಂದ ಗಂಗಾವತಿ ರಾಜ್ಯದ ಹೈವೊಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿತ್ತು.
ಭಾವನ ವಿರುದ್ಧ ಲಕ್ಷ್ಮೀ ಸ್ಪರ್ಧೆ: ರಾಜ್ಯ ರಾಜಕಾರಣದಲ್ಲಿ ರೆಡ್ಡಿ ಸಹೋದರರು ಸಾಕಷ್ಟು ಹೆಸರು ಹೊಂದಿದ್ದರು. ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪಿಸಿದ್ದರೂ ಸಹೋದರರಾದ ಸೋಮಶೇಖರ್ ರೆಡ್ಡಿ ಮತ್ತು ಕರುಣಾಕರ ರೆಡ್ಡಿ ಇನ್ನೂ ಬಿಜೆಪಿಯಲ್ಲೇ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇದೀಗ ಬಳ್ಳಾರಿ ನಗರ ಕ್ಷೇತ್ರದಿಂದ ಸೋಮಶೇಖರ ರೆಡ್ಡಿ ವಿರುದ್ಧ ಜನಾರ್ದನರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಚುನಾವಣಾ ಕಣಕ್ಕೂ ಇಳಿದು ತಾವು ಸೋತಿದ್ದಲ್ಲದೇ ಮಾವನನ್ನು ಸೋಲಿಸಿದ್ದಾರೆ.
ಬಿಜೆಪಿಯಿಂದ ಸೋಮಶೇಖರ ರೆಡ್ಡಿ ಸ್ಪರ್ಧೆ ಮಾಡಿದ್ದರು. ಲಕ್ಷ್ಮೀ ಅರುಣಾ ತಮ್ಮ ಕೆಆರ್ಪಿಪಿಯಿಂದ ಸವಾಲು ಎಸೆದಿದ್ದರು. ಇವರಿಬ್ಬರ ಸ್ಪರ್ಧೆ ರಾಜ್ಯದ ಗಮನ ಸೆಳೆದಿತ್ತು. ಮತ್ತೊಂದೆಡೆ, ಕಾಂಗ್ರೆಸ್ನಿಂದ ನಾರಾ ಭರತ್ ರೆಡ್ಡಿ ಹಾಗೂ ಮಾಜಿ ಶಾಸಕ ಅನಿಲ್ ಲಾಡ್ ಕಾಂಗ್ರೆಸ್ ತೊರೆದು ಜೆಡಿಎಸ್ನಿಂದ ಸ್ಪರ್ಧೆಗೆ ಇಳಿದಿದ್ದರು. ಇನ್ನು ಹರಪನಹಳ್ಳಿಯಲ್ಲಿ ಮಾಜಿ ಸಚಿವ ಎಂ ಪಿ ಪ್ರಕಾಶ ಪುತ್ರಿ ಲತಾ ಮಲ್ಲಿಕಾರ್ಜುನ್ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕರುಣಾಕರ ರೆಡ್ಡಿ ಈ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದು, ಕುಟುಂಬದಲ್ಲಿ ಜನಾರ್ದನ ರೆಡ್ಡಿ ಮಾತ್ರವೇ ಗೆಲುವು ಸಾಧಿಸಿದಂತಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಕಿಂಗ್ ಮೇಕರ್ ಆಗುವುದೇ ಜೆಡಿಎಸ್?