ಬೆಂಗಳೂರು : 2011 ನೇ ಸಾಲಿನ 362 ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೇಮಕಾತಿ ಆದೇಶ ನೀಡಿರುವುದನ್ನು ಸಿಂಧುಗೊಳಿಸುವುದು ಮತ್ತು ಆಯ್ಕೆ ಪಟ್ಟಿಯನ್ನು ಕಾನೂನು ಬದ್ಧಗೊಳಿಸುವ ಉದ್ದೇಶದಿಂದ 2022ನೇ ಸಾಲಿನ ಕರ್ನಾಟಕ ಸಿವಿಲ್ ಸೇವೆಗಳ (2011 ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಇಂದು ಅಂಗೀಕಾರ ದೊರೆಯಿತು.
ರಾಜ್ಯ ಸರ್ಕಾರದ ಈ ಮಹತ್ವದ ನಿರ್ಧಾರದಿಂದಾಗಿ ಕೆಪಿಎಸ್‍ಸಿ ಮೂಲಕ ನೇಮಕಗೊಂಡಿದ್ದ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಶೀಘ್ರವೇ ಕೈ ಸೇರಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ವಿಧೇಯಕವನ್ನು ಮಂಡಿಸಿದರು.
ಬಳಿಕ ಮಾತನಾಡಿದ ಅವರು, 2011ರಲ್ಲಿ ಕೆಪಿಎಸ್‍ಸಿ ಮೂಲಕ ಗ್ರೂಪ್ ಎ, ಬಿ ಸೇರಿದಂತೆ ಒಟ್ಟು 362 ಹುದ್ದೆಗಳನ್ನು ನೇಮಕ ಮಾಡಲಾಗಿತ್ತು. ಆದರೆ ನೇಮಕಾತಿ ಸಂದರ್ಭದಲ್ಲಿ ಕೆಪಿಎಸ್‍ಸಿ ಸದಸ್ಯರು ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡಿ ಸಾಕಷ್ಟು ಅಕ್ರಮ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಸರ್ಕಾರ ನೇಮಕಾತಿ ಆದೇಶವನ್ನು ಸಂಪೂರ್ಣವಾಗಿ ರದ್ದುಪಡಿಸಿ ಸಿಐಡಿ ತನಿಖೆಗೆ ಆದೇಶ ಮಾಡಿತ್ತು. ಸಿಐಡಿಯ ಮಧ್ಯಂತರ ವರದಿಯಲ್ಲಿ ಮೇಲ್ನೋಟಕ್ಕೆ ನೇಮಕಾತಿ ವೇಳೆ ಸಾಕಷ್ಟು ಅಕ್ರಮ ನಡೆದಿರುವುದು ಕಂಡುಬಂದಿದೆ. ಹೀಗಾಗಿ ನೇಮಕಾತಿ ಪ್ರಕ್ರಿಯೆಯನ್ನು ನಿಷ್ಕ್ರಿಯಗೊಳಿಸಬೇಕೆಂದು ಸೂಚಿಸಿತ್ತು.
ಕೊನೆಗೆ ಆಯ್ಕೆಗೊಂಡಿದ್ದ ಅಭ್ಯರ್ಥಿಗಳು ಕೆಎಟಿ ಮೊರೆ ಹೋಗಿದ್ದರು. ಅಂತಿಮವಾಗಿ ಹೈಕೋರ್ಟ್ ಮಧ್ಯಪ್ರವೇಶಿಸಿ ಸರ್ಕಾರದ ನಿಲುವೇನು ಎಂದು ಪ್ರಶ್ನೆ ಮಾಡಿತ್ತು. ಆಯ್ಕೆಯಾದ ಅಭ್ಯರ್ಥಿಗಳ ಹಿತ ಕಾಪಾಡುವುದಾಗಿ ತಮ್ಮ ನಿಲುವು ತಿಳಿಸಿದ್ದೆವು. ಇದರ ನಡುವೆ ಅಕ್ರಮದಲ್ಲಿ ಶಾಮೀಲಾಗಿದ್ದ ಕೆಪಿಎಸ್‍ಸಿ ಸದಸ್ಯರನ್ನು ವಿಚಾರಣೆಗೆ ಒಳಪಡಿಸುವ ಅಧಿಕಾರವನ್ನು ಸರ್ಕಾರ ನೀಡಲಿಲ್ಲ. ಈ ಎಲ್ಲಾ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಅಂತಿಮವಾಗಿ ಅಭ್ಯರ್ಥಿಗಳಿಗೆ ನೇಮಕಾತಿ ಸಿಂಧುಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಶಾಸನಸಭೆಗೆ ಇರುವ ಅಧಿಕಾರವನ್ನು ಸಂವಿಧಾನದ ಚೌಕಟ್ಟಿನಲ್ಲಿ ಬಳಸಿ ಈ ವಿಧೇಯಕವನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.
ಬಳಿಕ ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶೆಂಪುರ್ ಮಾತನಾಡಿ, ಈ ವಿಧೇಯಕವನ್ನು ನಾವು ಸ್ವಾಗತಿಸುತ್ತೇವೆ. 2011ರಲ್ಲಿ ಕೆಪಿಎಸ್‍ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸಿದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಅಭ್ಯರ್ಥಿಗಳ ಪರವಾಗಿ ಸಾಕಷ್ಟು ಪ್ರಯತ್ನಪಟ್ಟಿದ್ದರು. ಹಾಗಾಗಿ ಈ ವಿಧೇಯಕಕ್ಕೆ ನಾವು ಬೆಂಬಲ ಸೂಚಿಸುತ್ತೇವೆ ಎಂದೇಳಿದರು.
ಇದನ್ನೂ ಓದಿ: ಬಜರಂಗದಳ ಕಾರ್ಯಕರ್ತ ಕೊಲೆ ಪ್ರಕರಣ : ಬೆಂಗಳೂರಿನಿಂದ 200ಕ್ಕೂ ಹೆಚ್ಚು ಪೊಲೀಸರು ಸ್ಥಳಕ್ಕೆ ದೌಡು