ಬೆಂಗಳೂರು: ಕೆಪಿಎಲ್ ಪಂದ್ಯಾವಳಿಯ ಮ್ಯಾಚ್ ಫಿಕ್ಸಿಂಗ್ ಆರೋಪ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜತೀನ್ ಬಂಧಿತ ಆರೋಪಿ. ಈತ 2018ರಲ್ಲಿ ನಡೆದ ಕೆಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ಈಗಾಗ್ಲೇ ಬಂಧಿತನಾಗಿರುವ ಭಾವೇಶ್ ಬಾಫ್ನಾ ಜೊತೆ ಸೇರಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ತಿದ್ದ. ಸದ್ಯ ಈಗಾಗ್ಲೇ ಭಾವೇಶ್ ಭಾಪ್ನನನ್ನ ಸಿಸಿಬಿ ತಂಡ ಬಂಧಿಸಿದ್ದು, ಈತನ ಬಂಧನವಾಗುತ್ತಿದ್ದಂತೆ ಅಂತಾರಾಷ್ಟ್ರೀಯ ಬುಕ್ಕಿಯಾಗಿರುವ ಆರೋಪಿ ಜತೀನ್ ತಲೆಮರೆಸಿಕೊಂಡಿದ್ದ. ಹೀಗಾಗಿ ಆರೋಪಿ ವಿರುದ್ಧ ಸಿಸಿಬಿ ಪೊಲೀಸರು ಲುಕ್ ಔಟ್ ನೊಟೀಸ್ ಜಾರಿ ಮಾಡಿದ್ದರು. ಸದ್ಯ ಆರೋಪಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದ ಮಾಹಿತಿ ಮೇರೆಗೆ ತಕ್ಷಣ ಸಿಸಿಬಿ ವಶಕ್ಕೆ ಪಡೆದಿದೆ.
ಇನ್ನು ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ಕುರಿತು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ, ಕೆಪಿಎಲ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ತನಿಖೆ ಮಾಡಿದ್ದೇವೆ. 3 ತಿಂಗಳಲ್ಲಿ ಅನೇಕ ಪ್ರಕರಣ ದಾಖಲಿಸಿ ಮಾಲೀಕರು, ಆಟಗಾರರನ್ನು ಅರೆಸ್ಟ್ ಮಾಡಿದ್ದೇವೆ. ಸದ್ಯ ಇಂಟರ್ ನ್ಯಾಷನಲ್ ಬುಕ್ಕಿ ಜತಿನ್ನನ್ನ ಬಂಧನ ಮಾಡಿದ್ದು, ಈತ ಕೆಪಿಎಲ್ ಘಟನೆ ಬೆಳಕಿಗೆ ಬರ್ತಿದ್ದ ಹಾಗೆ ತಲೆಮರೆಸಿಕೊಂಡಿದ್ದ. ಹೀಗಾಗಿ ಈತನ ವಿರುದ್ಧ ಎಲ್ಒಸಿ ಹೊರಡಿಸಿದ್ದು, ಜತಿನ್ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ವಶಕ್ಕೆ ಪಡೆಯಲಾಗಿದೆ. ಸದ್ಯ 2 ದಿನ ವಿಚಾರಣೆ ಮಾಡಿ ಇಂದು ಕೂಡ ವಿಚಾರಣೆ ಮುಂದುವರೆಸಿದ್ದೇವೆ ಎಂದು ತಿಳಿಸಿದ್ದಾರೆ.