ಬೆಂಗಳೂರು : ಈ ಬಾರಿಯ ವಿಧಾಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಕಮಾಲ್ ಮಾಡಿದೆ. ಭರ್ಜರಿ ಬಹುಮತ ಪಡೆಯುವ ಮೂಲಕ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಜೆಡಿಎಸ್ ಪಕ್ಷವನ್ನು ಭಾರಿ ಅಂತರದಲ್ಲಿ ಮಣಿಸಿದೆ. ಈ ನಡುವೆ ಕಾಂಗ್ರೆಸ್ಗೆ ಸಿಎಂ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಮಧ್ಯಾಹ್ನದ ಭೋಜನ ಮುಗಿಸಿ ದಿಲ್ಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಿಂದ ಡಿಕೆಶಿ ದೆಹಲಿಗೆ ತೆರಳಲಿದ್ದು, ಇದಕ್ಕೂ ಮುನ್ನ ತಮ್ಮ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ಹಮ್ಮಿಕೊಂಡಿರುವ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಮನೆಯಿಂದ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್, ಇಂದು ನನ್ನ ಜನ್ಮ ದಿನವಿದೆ. ನಾನು ದೇವರನ್ನು ನಂಬಿ ದೆಹಲಿಗೆ ಹೋಗುತ್ತೇನೆ. ಒನ್ ಲೈನ್ ನಿರ್ಣಯ ಈಗಾಗಲೇ ಹೇಳಿದ್ದೇವೆ. ಇದಾದ ಮೇಲೆ ಕೆಲವರು ವೈಯಕ್ತಿಕ ಅಭಿಪ್ರಾಯ ತಿಳಿಸಿದ್ದಾರೆ. ನನ್ನ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ಗೆ 135 ಸ್ಥಾನ ಬಂದಿದೆ. ನನ್ನ ಬಳಿ ಪಕ್ಷ ಸಂಘಟನೆ ಮಾಡಲು ಬಹಳ ಬತ್ತಳಿಕೆಗಳು ಇದ್ದವು. ದೆಹಲಿಗೆ ನನ್ನ ಹಾಗೂ ಸಿದ್ದರಾಮಯ್ಯ ಅವರನ್ನು ಕರೆದಿದ್ದಾರೆ. ವೈಯಕ್ತಿಕ ನಂಬರ್ ನಮಗಿಲ್ಲ, 135 ನಮ್ಮ ಪಕ್ಷದ ನಂಬರ್ ಎಂದು ಹೇಳಿದ್ರು.
ನಾನು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತುಕೊಟ್ಟಿದ್ದೆ. ಯಾರ ಕ್ಲೇಮ್ ಬಗ್ಗೆಯೂ ನಾನು ಮಾತನಾಡುವುದಿಲ್ಲ. ನಾನು ಸಿಂಗಲ್ ಮ್ಯಾನ್. ನಾನು ಧೈರ್ಯದಲ್ಲಿ, ವಿಶ್ವಾಸದಲ್ಲಿ ನಂಬಿಕೆಯಿಟ್ಟವನು. ಹಿಂದಿನ ಐದು ವರ್ಷಗಳಲ್ಲಿ ಏನಾಗಿದೆ ಎಂದು ಈಗ ಹೇಳಲ್ಲ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಹೇಳುತ್ತೇನೆ ಎಂದರು.
ಸೋತಾಗ ಧೈರ್ಯದಿಂದ ಇರಬೇಕು, ಗೆದ್ದಾಗ ಉದಾರ ಮನಸ್ಸಿನಿಂದ ಇರಬೇಕು ಎಂದು ಗಾಂಧೀಜಿ ಹೇಳಿದ್ದರು. ನಮ್ಮ 15 ಜನ ಶಾಸಕರು ಪಕ್ಷ ಬಿಟ್ಟು ಹೋದ ಸಂದರ್ಭದಲ್ಲೂ ಈ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುತ್ತಿದ್ದೆ. ಖರ್ಗೆ ಅವರಿಗೆ ರಾಜ್ಯ ರಾಜಕಾರಣದ ಬಗ್ಗೆ ಅರಿವಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಮೇಲೆ ವಿಶ್ವಾಸ ಇದೆ. ಈ ವಿಚಾರವನ್ನು ಅವರಿಗೆ ಬಿಡುತ್ತೇವೆ ಎಂದು ಸಿಎಂ ವಿಚಾರದ ಬಗ್ಗೆ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದರು.
ಸಿಎಂ ಸ್ಥಾನಕ್ಕೆ ಎಲ್ಲರೂ ಆಸೆ ಪಡಲಿ. ನಾವು ಒಂದು ನಿರ್ಧಾರವನ್ನು ಮಾಡಿದ್ದೇವೆ. ನನಗೆ ಯಾವ ಶಾಸಕರು ಏನು ಮಾಡಿದ್ದಾರೆ ಗೊತ್ತಿಲ್ಲ. ನನ್ನ ಜೊತೆಗೆ 135 ಶಾಸಕರು ಇದ್ದಾರೆ, ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ 135 ಶಾಸಕರನ್ನು ಸೋನಿಯಾ ಗಾಂಧಿ ಅವರಿಗೆ ಅರ್ಪಿಸಿದ್ದೇನೆ. ನನ್ನ ಹತ್ರ ಯಾರೂ ಇಲ್ಲ. ಕಾಂಗ್ರೆಸ್ ಪಾರ್ಟಿಯಲ್ಲಿ 135 ಜನ ಇದ್ದಾರೆ. ನನ್ನ ಸೇರಿಸಿ 135 ಶಾಸಕರು ಕಾಂಗ್ರೆಸ್ ನಲ್ಲಿ ಇದ್ದಾರೆ ಎಂದು ಡಿಕೆಶಿ ಪುನರುಚ್ಚರಿಸಿದ್ದಾರೆ.
ಇದನ್ನೂ ಓದಿ : ಎಲ್ಲ ಶಾಸಕರೊಂದಿಗೆ 4-5 ಗಂಟೆಗಳ ಕಾಲ ಚರ್ಚೆ ನಡೆಸಿ ಅಭಿಪ್ರಾಯ ತೆಗೆದುಕೊಂಡಿದ್ದೇವೆ: ಭನ್ವರ್ ಜಿತೇಂದ್ರ ಸಿಂಗ್