ಬೆಂಗಳೂರು: ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಹೋರಾಟಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮೂಲಕ ಪರಿಹಾರ ದೊರಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಅಭಿನಂದಿಸುತ್ತೇನೆ. ಕೊನೆಗೂ ಅವರಿಗೆ ಅರಿವಾಗಿದೆ. ಬಿಜೆಪಿ ರಾಜ್ಯದ ನಾಯಕರು ಈಶ್ವರಪ್ಪ ಸಮರ್ಥನೆ ಮಾಡಿಕೊಳ್ಳುತ್ತಿದ್ದರು. ಈಶ್ವರಪ್ಪರನ್ನ ಸಂಪುಟದಿಂದ ವಜಾ ಮಾಡಿದರೆ ಬಿಜೆಪಿಗೆ ಗೌರವ ಉಳಿದುಕೊಳ್ಳುತ್ತೆ ಎಂದರು.
ನಿನ್ನೆ ರಾಜ್ಯಪಾಲರ ಬಳಿ ಹೋಗಿ ಸಚಿವ ಕೆ ಎಸ್ ಈಶ್ವರಪ್ಪ ಅವರನ್ನು ವಜಾ ಮಾಡಿ ಎಂದು ಒತ್ತಾಯಿಸಿದ್ದೇವೆ. ರಾಜ್ಯಪಾಲರು ಏನ್ ತೀರ್ಮಾನ ಮಾಡುತ್ತಾರೆ ಅನ್ನೋದನ್ನು ನೋಡೋಣ. ರಾಷ್ಟ್ರದ ಬಾವುಟಕ್ಕೆ ಅಗೌರವ ತೋರಬಾರದು. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಬೇಕು ಅಷ್ಟೇ ಎಂದು ಹೇಳಿದರು.
ಮಹಾದಾಯಿ ಹೋರಾಟದ ಬಗ್ಗೆ ಮಾತನಾಡಿದ ಡಿಕೆಶಿ, ಫೆ. 27 ರಿಂದ ರಾಮನಗರದಿಂದ ಮೇಕೆದಾಟು ಯೋಜನೆಗೆ ಆಗ್ರಹಿಸಿ ಮತ್ತೆ ಪಾದಯಾತ್ರೆ ಆರಂಭ ಆಗುತ್ತೆ. ಈ ಹೋರಾಟಕ್ಕೆ ಯಾರಾದರೂ ಬರಬಹುದು. ಬಿಜೆಪಿ, ಜೆಡಿಎಸ್ ನಾಯಕರು ಸಹ ಈ ಪಾದಯಾತ್ರೆಗೆ ಬರಬಹುದು. ಭಾನುವಾರ ಎಲ್ಲಾ ಸಂಘ ಸಂಸ್ಥೆಗಳ ಜೊತೆ ಸಭೆ ಇದೆ. ಅವರು ಈ ಪಾದಯಾತ್ರೆಗೆ ಬರಬಹುದು. ಇಡೀ ರಾಜ್ಯದ ನಾಯಕರು, ಹಾಗೂ ಜನರು ಪಾದಯಾತ್ರೆಗೆ ಬರಬಹುದು. ಇದಾದ ಬಳಿಕ ಉಳಿದ ಹೋರಾಟಗಳ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದರು.
ಕುಮಾರಸ್ವಾಮಿ ವಿಚಾರಕ್ಕೆ ಚುಟುಕಾಗಿ ಉತ್ತರಿಸಿದ ಡಿಕೆಶಿ, ಕುಮಾರಸ್ವಾಮಿ ಅವರ ಬಳಿ ಟ್ರೈನಿಂಗ್ ತೆಗೆದುಕೊಳ್ಳತ್ತೇನೆ ಎಂದರು.
ಇದನ್ನೂ ಓದಿ : ಮನಿ ಲಾಂಡ್ರಿಂಗ್ ಕೇಸ್: ಎನ್ಸಿಪಿ ನಾಯಕ, ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಬಂಧನ
ದಲಿತ ಸಂಘರ್ಷ ಸಮಿತಿ ನಾಯಕರ ಭೇಟಿ: ದಲಿತ ಸಂಘರ್ಷ ಸಮಿತಿಯ ಬೆಂಗಳೂರು ವಿಭಾಗೀಯ ಮುಖ್ಯಸ್ಥ ಮಂಜುನಾಥ್ ಅಣ್ಣಯ್ಯ, ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಮತ್ತಿತರ ಸಮುದಾಯದ ಮುಖಂಡರು ಡಿ. ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಬುಧವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಇದಾದ ಬಳಿಕ ನಿವಾಸದ ಮುಂದೆ ಡಿಕೆಶಿ ಅವರನ್ನು ಅಭಿನಂದಿಸಿದರು.