ಬೆಂಗಳೂರು : ಈಗಾಗಲೇ ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ನಾವು ಸಮರ್ಥಿಸುವುದಿಲ್ಲ ಎಂದು ಹೇಳಿಯಾಗಿದೆ. ಈಗಲೂ ಅವರು ಮತ್ತೆ ಅದನ್ನೇ ಸಮರ್ಥಿಸಿಕೊಳ್ಳುತ್ತಿದ್ದರೆ ಗಮನಿಸಿ ಮಾತನಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ವಿರುದ್ಧ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಸತೀಶ್ ಜಾರಕಿಹೊಳಿ ಯಾವುದೋ ಪುಸ್ತಕದಲ್ಲಿದೆ ಎಂದು ಹೇಳಿದ್ದಾರೆ. ಯಾವ ಪುಸ್ತಕದಲ್ಲಿದೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಇದನ್ನು ಪಕ್ಷದ ಅಧ್ಯಕ್ಷನಾಗಿ ನಾನು ಖಂಡಿಸುತ್ತೇನೆ. ಬಿಜೆಪಿ ರಾಜಕೀಯವಾಗಿ ಹೋರಾಟ ಮಾಡುತ್ತಿದೆ. ಅದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸುತ್ತೋಲೆ ವಾಪಸ್ ಪಡೆಯಬೇಕು : ದೇಶದ ಪ್ರಧಾನಿಗಳು ರಾಜ್ಯಕ್ಕೆ ಬರುತ್ತಿದ್ದಾರೆ. ಸರ್ಕಾರದವರು ಶಾಲಾ ಕಾಲೇಜು ಮಕ್ಕಳನ್ನು ಕರೆ ತರುವುದಕ್ಕೆ ಸುತ್ತೋಲೆ ಹೊರಡಿಸಿದ್ದಾರೆ. ಇದನ್ನು ವಾಪಸ್ ಪಡೆಯಬೇಕು ಎಂದು ಡಿಕೆಶಿ ಆಗ್ರಹಿಸಿದರು.
ವಿದ್ಯಾರ್ಥಿಗಳನ್ನು ಕರೆತರುವ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಬಿಜೆಪಿಯವರಿಗೆ ಇಂತಹ ಗತಿ ಬಂತಾ. ಡಬಲ್ ಇಂಜಿನ್ ಸರ್ಕಾರದ ಸಾಧನೆ ತೋರಿಸಿ ಕಾರ್ಯಕ್ರಮ ಮಾಡಿ. ಇದೇನು ಎಜುಕೇಷನ್ ಪ್ರೊಗ್ರಾಮಾ. ಕುರ್ಚಿ ತುಂಬಿಸೋದಕ್ಕೆ ಹೀಗೆ ಮಾಡ್ತಿದ್ದಾರೆ. ಅವರ ಪಕ್ಷ ದಿವಾಳಿಯಾಗಿದೆ ಅನ್ನೋದಕ್ಕೆ ಇದೇ ಸಾಕ್ಷಿ. ಪ್ರಧಾನಿಗಳಿಗೂ ಇದು ಅವಮಾನ ಎಂದು ಟೀಕಿಸಿದರು.
ಸಿಎಂ ಸ್ಥಾನಕ್ಕೆ ಬಿಜೆಪಿಯಲ್ಲಿ ಜನ ಇಲ್ಲ ಎಂದಾಯಿತು : ಪಕ್ಷಕ್ಕೆ ಬರುವಂತೆ ಡಿಕೆಶಿಗೆ ಮುನ್ನಿರತ್ನ ಆಹ್ವಾನ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ಆಹ್ವಾನ ನೀಡಿದ್ದಕ್ಕೆ ಬಹಳ ಸಂತೋಷ. ಅಂದರೆ ಅವರ ಪಕ್ಷದಲ್ಲಿ ಜನ ಇಲ್ಲ ಎಂದಾಯಿತಲ್ಲ. ಸಿಎಂ ಸ್ಥಾನಕ್ಕೆ ಜನ ಇಲ್ಲಾ ಎಂದಾಯಿತು ವ್ಯಂಗ್ಯವಾಡಿದರು.
ನನಗೂ ಖಾಸಗಿ ವಿಚಾರಗಳು ಇವೆ : ಬಾದಾಮಿಗೆ ಭೇಟಿ ನೀಡಿದ ವಿಚಾರವಾಗಿ ಮಾತನಾಡಿ, ನನಗೆ ರಾಜಕೀಯದಂತೆ ಖಾಸಗಿ ವಿಚಾರಗಳೂ ಇರುತ್ತವೆ. ಖಾಸಗಿ ಕೆಲಸಕ್ಕೆ ನಾನು ಬಾಗಲಕೋಟೆಗೆ ಹೋಗಿದ್ದು ನಿಜ. ಅಲ್ಲೇ ರಸ್ತೆಯಲ್ಲಿ ಬಾಳೆಹಣ್ಣು ಬಿಸ್ಕಿಟ್ ತಿನ್ನೋದಕ್ಕೆ ಎಂದು ವಾಹನ ನಿಲ್ಲಿಸಿದ್ದೆ. ಯಾರೋ ಯುವಕ ಫೋಟೋ ತಗೋತಿನಿ ಅಂದ. ಕಾರಲ್ಲೇ ಕುಳಿತು ಫೋಟೋ ತೆಗೆದುಕೊಂಡ. ನಾನು ಖಾಸಗಿ ವಿಷಯಗಳಿಗೆ ಓಡಾಡಲೇಬಾರದು ಅಂತ ಇದೆಯಾ? ಎಂದು ಡಿಕೆಶಿ ಪ್ರಶ್ನಿಸಿದರು.
ಇದನ್ನೂ ಓದಿ : ಕಾಂಗ್ರೆಸ್ನಲ್ಲಿ ಯಾಕಿಷ್ಟು ಅಸ್ಪಷ್ಟತೆ: ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನೆ