ಬೆಂಗಳೂರು : ನಿಗಮ ಮಂಡಳಿ ಸದಸ್ಯರ ನೇಮಕಕ್ಕೆ ಕಾಂಗ್ರೆಸ್ ಚಾಲನೆ ನೀಡಲು ನಿರ್ಧರಿಸಿದ್ದು, ಆದಷ್ಟು ಶೀಘ್ರವೇ ಅರ್ಜಿ ಸ್ವೀಕಾರ ಆರಂಭಿಸಲು ತೀರ್ಮಾನಿಸಿದೆ.
ಕಳೆದ ಲೋಕಸಭೆಯಲ್ಲಿ ಎದುರಾದ ಹೀನಾಯ ಸೋಲು ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಯ ಉತ್ತಮ ಗೆಲುವಿನಿಂದಾಗಿ ಪಾಠ ಕಲಿತಿರುವ ಕಾಂಗ್ರೆಸ್ ಪಕ್ಷ, ತನ್ನ ನಿಷ್ಠಾವಂತ, ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿದ, ಪಕ್ಷಕ್ಕಾಗಿ ಸಾಕಷ್ಟು ಸಮಯದಿಂದ ದುಡಿದು ಅಧಿಕಾರ ವಂಚಿತರಾದ ಕಾರ್ಯಕರ್ತರಿಗೆ ಪ್ರಾಶಸ್ತ್ಯ ನೀಡಲು ಮುಂದಾಗಿದೆ.
ಈ ನಿಟ್ಟಿನಲ್ಲಿ ಪಕ್ಷದ ಒಳಿತಿಗಾಗಿ ದುಡಿದ ನಿಷ್ಠಾವಂತ ಕಾರ್ಮಿಕರನ್ನು ಗುರುತಿಸಿ ಅವರಿಗೆ ಅವಕಾಶ ನೀಡಲು ಮುಂದಾಗಿದ್ದು, ಪಕ್ಷದ ನಾಯಕರಿಗೆ ಅಂತಹ ಕಾರ್ಯಕರ್ತರನ್ನು ಗುರುತಿಸುವಂತೆ ಸೂಚಿಸಿದೆ. ಇದರಿಂದ ದೊಡ್ಡ ಕಾರ್ಯಕರ್ತರ ಪಡೆ ನಿರ್ಮಿಸುವ ಕನಸು ಕಾಂಗ್ರೆಸ್ ಪಕ್ಷದ್ದಾಗಿದೆ.
ಸದ್ಯ 600 ನಿಗಮ ಮಂಡಳಿ ಸದಸ್ಯ ಸ್ಥಾನ ಖಾಲಿಯಿದ್ದು, ಇದರಲ್ಲಿ ಶೇ.50:50ರಷ್ಟು ಸ್ಥಾನ ಹಂಚಿಕೆ ಮಾಡಿಕೊಳ್ಳಲು ಕಾಂಗ್ರೆಸ್, ಜೆಡಿಎಸ್ ತೀರ್ಮಾನಿಸಿದ್ದು, ಇಲ್ಲಿಯೂ ಕೂಡಾ ಮೈತ್ರಿ ಧರ್ಮಪಾಲನೆಯನ್ನು ಮುಂದುವರೆಸಿದೆ. ಈಗಾಗಲೇ ಪಕ್ಷದ ಶಾಸಕರಿಗೆ ಬೆಂಬಲಿಗರ ಹೆಸರು ಸೂಚಿಸಲು ತಿಳಿಸಿದ್ದಾರೆ. ಅತೀ ಶೀಘ್ರದಲ್ಲೇ ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸ್ವೀಕಾರ ಆರಂಭಿಸಲಾಗುತ್ತದೆ.