ಆನೇಕಲ್ : ಕರ್ನಾಟಕ-ತಮಿಳು ಗಡಿ ಭಾಗದ ಹೊಸೂರಿನಲ್ಲಿ ಕೋಟೆ ಮಾರಿಯಮ್ಮನ ಜಾತ್ರೆ ಬಹಳ ಅದ್ದೂರಿಯಾಗಿ ನಡೆಯಿತು. ವಿಶೇಷವಾದ ಪವಾಡ ಸದೃಷ ದೃಶ್ಯ ನೋಡುಗರ ಮೈ ಝಲ್ ಎನ್ನಿಸುವಂತಿದ್ದವು.
ಕ್ರೇನ್ ಕೊಕ್ಕೆಯಲ್ಲಿ ಬೆನ್ನಿನ ಚರ್ಮಕ್ಕೆ ಕಬ್ಬಿಣದ ಕೊಕ್ಕೆ ಸಿಕ್ಕಿಸಿ ಇಡೀ ದೇಹವೇ ತೊಗಲಿನ ಆಧಾರದಲ್ಲಿ ನೇತಾಡುತ್ತಿದ್ದ ದೃಶ್ಯಗಳು ಕಂಡು ಬಂದಿವು. ವರ್ಷಕ್ಕೊಮ್ಮೆ ನಡೆಯುವ ಆಚರಣೆ ನೋಡಲು ಸಾವಿರಾರು ಜನ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿ ಸೇರುತ್ತಾರೆ. ಈ ಹೊಸೂರು-ಡೆಂಕಣಿಕೋಟೆ ರಸ್ತೆಯ ಕೋಟೆ ಮಾರಿಯಮ್ಮನ ಜಾತ್ರೆ ಎಂದು ಕರೆಸಿಕೊಳ್ಳುವ ಈ ಹರಕೆಯ ಪರಿಷೆ ಸುತ್ತಲೂ ನೂರಾರು ಹಳ್ಳಿಗಳಿಗೂ ಪ್ರಸಿದ್ಧಿ.
ಕಬ್ಬಿಣದ ಕೊಕ್ಕೆಗೆ ಮೈಯೊಡ್ಡಿ ಕುಣೀತಿರೋರನ್ನ ನೋಡಿದರೆ ಮೈ ಜುಮ್ಮೆನ್ನುತ್ತೆ. ಕೇವಲ ಸೂಜಿ ಚುಚ್ಚಿಕೊಂಡರೆ ಸಹಿಸಕ್ಕಾಗಲ್ಲ ಇನ್ನ ಕ್ರೇನ್ ಮೂಖಾಂತರ ಇಡೀ ದೇಹವನ್ನ ನೇತು ಹಾಕಿಕೊಂಡ್ರೆ ಹೇಗೆ ಎಂದು ಅನೇಕರು ಬಾಯಿ ಮೇಲೆ ಬೆರಳಿಟ್ಟುಕೊಳ್ಳುತ್ತಾರೆ.
ಕೋಟೆ ಮಾರಿಯಮ್ಮನ ಜಾತ್ರೆಗೆ ಹೆಚ್ಚಾಗಿ ದ್ರಾವಿಡ ಸಮುದಾಯದವರೇ ಹೆಚ್ಚಾಗಿ ಬರುತ್ತಾರೆ. ಹೀಗಾಗಿ ದೇವಾಲಯದ ಮುಂಭಾಗದಲ್ಲಿ ಬಲಿ ಕಂಬವನ್ನ ಶಾಶ್ವತವಾಗಿ ನಿಲ್ಲಿಸಿ ಬಲಿ ಅರ್ಪಿಸಲಾಗುತ್ತದೆ. ಜಮೀನು ಲೇವಾದೇವಿಗಾರರು, ಕಂಕಣಕೂಡಿ ಬರದವರು,ಸಮಸ್ಯೆಗಳಿಂದ ನರಳುತ್ತಿದ್ದವರು ದೇವರ ಹತ್ತಿರ ಮನಸ್ಸಿನಲ್ಲೇ ಹರಕೆ ಒಪ್ಪಿಸಿ ಕೋಟೆ ಮಾರಿಯಮ್ಮನ ಮಡಿಲಿಗೆ ಕೋರಿಕೆ ಹಾಕುತ್ತಾರೆ. ವರ್ಷದೊಳಗೆ ನೆರವೇರಿದ್ರೆ ಅಂತಹ ಹರಕೆಯಂತೆ ಮುಂದಿನ ವರ್ಷ ಪೂರೈಸುತ್ತಾರೆ.