ಬೆಂಗಳೂರು: ಖಾದಿ ತೊಟ್ಟಮೇಲೆ ಅದರ ಖದರ್ರೇ ಬೇರೆ, ಈ ಬಟ್ಟೆಗಿರುವ ಮಹತ್ವವೇ ಅಂತಹದ್ದು. ಇಂತಹ ಖಾದಿ ಎಂಪೋರಿಯಂನ ಸ್ಥಿತಿ ಹೇಗಿದೆ ಅಂದ್ರೆ, ಅಂಗಡಿಯೊಂದರಲ್ಲಿ ದಿನಕ್ಕೆ 70 ಸಾವಿರ ದಿಂದ ಒಂದು ಲಕ್ಷದವರೆಗೆ ಮಾರಾಟವಾಗಿದೆಯಂತೆ.
ಹೌದು. ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ನಂತರವೂ ಖಾದಿ ಬಳಕೆ ಹೆಚ್ಚಾಗಿತ್ತು. ಆದರೆ ನಂತರ ಪಾಶ್ಚಿಮಾತ್ಯ ಸಂಸ್ಕೃತಿ ಗಳಿಂದ ಖಾದಿ ಮೂಲೆ ಗುಂಪು ಸೇರುವ ಹಂತಕ್ಕೆ ತಲುಪಿತು. ಕಳೆದ 30 ವರ್ಷಗಳಿಂದ ನಿರಂತರವಾಗಿ ಹೊಡೆತಕ್ಕೆ ಸಿಲುಕಿದ್ದ ಖಾದಿಯ ಖದರ್ ಈಗ ಜೋರಾಗಿದೆ. ಇದಕ್ಕೆ ಕಾರಣ ರಾಜ್ಯ ಮತ್ತು ಕೇಂದ್ರ ಸರ್ಕಾರ ನೀಡಿದ ಉತ್ತೇಜನದಿಂದಾಗಿ ಖಾದಿಯ ಸ್ವರೂಪವೇ ಬದಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ಪರಿಕಲ್ಪನೆ ಈಗ ಬದಲಾಗಿದ್ದು, ಖಾದಿಗೆ ಭಾರೀ ಬೇಡಿಕೆ ಬಂದಿದೆ. ಇದಕ್ಕೆ ತಾಜಾ ಉದಾಹರಣೆ ಅಂದರೆ, ಶಾಲಾ- ಕಾಲೇಜುಗಳಲ್ಲಿ ವಾರದಲ್ಲಿ ಒಂದು ದಿನ ಖಾದಿ ಕಡ್ಡಾಯ ಮಾಡಲಾಗಿದೆ. ಶೇಷಾದ್ರಿಪುರಂ ಲಾ ಕಾಲೇಜು, ಬಿಎಸ್ ಶಾಲೆ ಜೊತೆಗೆ ಅಂಚೆ ಇಲಾಖೆಯಲ್ಲೂ ಖಾದಿ ಕಡ್ಡಾಯ ಮಾಡಲಾಗಿದೆ. ಇದರಿಂದ ಖಾದಿ ವಸ್ತ್ರಗಳ ಸ್ವರೂಪವೇ ಬದಲಾಗಿದ್ದು, ರೆಡಿಮೇಡ್ ಖಾದಿಗಳ ಮಾರಾಟ ಭರ್ಜರಿಯಾಗಿದೆ.
ಪ್ರವಾಹದ ಎಫೆಕ್ಟ್ನಿಂದ ಖಾದಿ ಧ್ವಜ ರಫ್ತಿಗೂ ಸಂಕಷ್ಟ:
ಪ್ರತಿವರ್ಷ ಬೆಳಗಾವಿ ಸೇರಿದಂತೆ ಬಾಗಲಕೋಟೆ ಭಾಗಗಳಲ್ಲಿ ಖಾದಿಯಿಂದ ತಯಾರಾದ ಧ್ವಜಗಳು ಎಲ್ಲೆಡೆ ರಫ್ತು ಆಗುತ್ತಿತ್ತು. ಆದರೆ ಈ ಬಾರಿ ಬಾಗಲಕೋಟೆಯಲ್ಲಿ ಪ್ರವಾಹ ಉಂಟಾಗಿರುವುದರಿಂದ ಖಾದಿ ಧ್ವಜದ ರಫ್ತಿಗೆ ಸಂಕಷ್ಟ ಉಂಟಾಗಿದೆ ಅಂತಾರೆ, ಖಾದಿ ಭಂಡಾರ ಮಳಿಗೆ ಮ್ಯಾನೇಜರ್ ವಿಜಯ ಕುಮಾರಿ. ಬೇಡಿಕೆ ಜಾಸ್ತಿ ಇದ್ದರೂ ಪ್ರವಾಹದಿಂದಾಗಿ ಕೊಂಚ ಮಟ್ಟಿಗೆ ಈ ಬಾರಿ ತೊಡಕು ಉಂಟಾಗಿದೆಯಂತೆ. ಆದರೂ ಖರೀದಿ ಜನ ಹೆಚ್ಚಾಗಿದ್ದು ದಿನಕ್ಕೆ 70 ಸಾವಿರ ದಿಂದ ಒಂದು ಲಕ್ಷದವರೆಗೆ ಮಾರಾಟವಾಗಿದೆಯಂತೆ.
ಇನ್ನು ಖಾದಿಗೆ ಪ್ರೋತ್ಸಾಹ ನೀಡಲೆಂದೇ ಒಂದು ತಿಂಗಳ ಕಾಲ ಖಾದಿ ಮೇಳವನ್ನು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ವಿನ್ಯಾಸದ ಮೂಲಕ ಹೊರ ಬಂದರೆ, ವಿದೇಶಗಳು ನಮ್ಮ ಸ್ವದೇಶಿ ಉಡುಪುಗಳತ್ತ ಮುಖ ಮಾಡೋದರಲ್ಲಿ ಎರಡು ಮಾತಿಲ್ಲ.