ಬೆಂಗಳೂರು: ಸಾಮಾಜಿಕ ಜಾಲತಾಣಗಳಿಂದ ಕೆಜಿಎಫ್-2 ಸಿನಿಮಾದ ಸಂಗೀತವನ್ನು ತೆರವುಗೊಳಿಸುವಂತೆ ನಿರ್ದೇಶಿಸಿದ್ದ ಹೈಕೋರ್ಟ್ ವಿಭಾಗೀಯ ಪೀಠದ ಆದೇಶವನ್ನು ಕಾಂಗ್ರೆಸ್ ಪಾಲಿಸಿಲ್ಲ ಎಂದು ಆರೋಪಿಸಿ ಎಂಆರ್ಟಿ ಮ್ಯೂಸಿಕ್ ಸಂಸ್ಥೆ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಪಕ್ಷದ ಮುಖಂಡರಿಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಕಾಂಗ್ರೆಸ್ ಪಕ್ಷವು ನ್ಯಾಯಾಲಯದ ಆದೇಶವನ್ನು ಪಾಲಿಸಿಲ್ಲ. ತನ್ನ ಎಲ್ಲ ಸಾಮಾಜಿಕ ಜಾಲತಾಣಗಳ ಖಾತೆಯಿಂದ ಕೆಜಿಎಫ್-2 ಸಿನಿಮಾದ ಮುದ್ರಿತ ಸಂಗೀತ ತೆರವು ಮಾಡಿಲ್ಲ. ಬದಲಿಗೆ ಹೆಚ್ಚುವರಿಯಾಗಿ ಸಂಗೀತ ಬಳಸಿದೆ ಎಂದು ಆಕ್ಷೇಪಿಸಿ ಎಂಆರ್ಟಿ ಮ್ಯೂಸಿಕ್ ಸಂಸ್ಥೆ ನ್ಯಾಯಾಂಗ ನಿಂದನೆಗೆ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಮಾಧ್ಯಮ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಮತ್ತು ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಸುಪ್ರಿಯಾ ಶ್ರೀನಾಥೆ ಅವರಿಗೆ ಮುಖ್ಯ ಪೀಠವು ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಜನವರಿ 12ಕ್ಕೆ ಮುಂದೂಡಿತು.
(ಓದಿ: ಕೆಜಿಎಫ್ 2 ಚಿತ್ರದ ಹಾಡು ಹಕ್ಕುಸ್ವಾಮ್ಯ ಪಡೆಯದೇ ಬಳಕೆ: ರಾಹುಲ್ ಗಾಂಧಿ ಸೇರಿ ಮೂವರ ವಿರುದ್ಧ ಕೇಸ್)
ಕೃತಿಚೌರ್ಯ ಆರೋಪದಲ್ಲಿ ಕಾಂಗ್ರೆಸ್ ಮತ್ತು ಭಾರತ್ ಜೋಡೋ ಅಧಿಕೃತ ಟ್ವಿಟರ್ ಖಾತೆ ರದ್ದು ಮಾಡುವಂತೆ ನವೆಂಬರ್ 8ರಂದು ಬೆಂಗಳೂರಿನ 85ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ಆದೇಶಿತ್ತು. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಪಿ ಎನ್ ದೇಸಾಯಿ ಅವರ ನೇತೃತ್ವದ ವಿಭಾಗೀಯ ಪೀಠ, ಮೇಲ್ಮನವಿದಾರರಾದ ಕಾಂಗ್ರೆಸ್ ತನ್ನ ಎಲ್ಲಾ ಸಾಮಾಜಿಕ ಜಾಲತಾಣಗಳ ಖಾತೆಯಿಂದ ಕೃತಿಸ್ವಾಮ್ಯ ಉಲ್ಲಂಘಿಸಿರುವ ವಿಷಯಗಳನ್ನು ತೆಗೆದು ಹಾಕಬೇಕು ಎಂಬ ಷರತ್ತಿಗೆ ಒಳಪಟ್ಟು ವಿಚಾರಣ ನ್ಯಾಯಾಲಯದ ಆದೇಶವನ್ನು ರದ್ದು ಪಡಿಸಿತ್ತು.
(ಓದಿ: ಕಾಂಗ್ರೆಸ್ ವಿರುದ್ಧ ಪ್ರಕರಣ: ಲಹರಿ ವೇಲು ವಿರುದ್ಧ ಕಿಡಿಕಾರಿದ ನಟಿ ರಮ್ಯಾ)