ಬೆಂಗಳೂರು: ಬೆಂಗಳೂರು ನಗರ ವಿಧಾನಪರಿಷತ್ ಸ್ಥಾನದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಕೆಜಿಎಫ್ ಬಾಬು ಅಲಿಯಾಸ್ ಯೂಸುಫ್ ಶರೀಫ್ ಅಧಿಕಾರಿಗಳ ಜೊತೆ ಸೇರಿಕೊಂಡು 115 ಕೋಟಿ ರೂ ಬೆಲೆ ಬಾಳುವ ಸರ್ಕಾರಿ ಜಮೀನನ್ನು ಕಬಳಿಕೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ದೂರಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಹೋಬಳಿಯ ಶ್ರೀನಿವಾಸಪುರ ಗ್ರಾಮದಲ್ಲಿ ಸರ್ಕಾರಕ್ಕೆ ಸೇರಿದ 11.01 ಎಕರೆ ವಿಸ್ತೀರ್ಣದ ಸುಮಾರು 115 ಕೋಟಿ ರೂ. ಮೌಲ್ಯದ ಜಮೀನನ್ನು ಕೆಜಿಎಫ್ ಬಾಬು ಕಬಳಿಕೆ ಮಾಡಿದ್ದಾರೆ ಎಂದು ಎಸಿಬಿ ಮತ್ತು ಬಿಎಂಟಿಎಫ್ಗೆ ದೂರು ಸಲ್ಲಿಸಿದ್ದೇನೆ ಎಂದು ಹೇಳಿದರು.
ಕೆಜಿಎಫ್ ಬಾಬು ಭೂ ಕಬಳಿಕೆ ಮಾಡಿರುವ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಇಂದು ದಾಖಲೆಗಳನ್ನು ಬಿಡುಗಡೆ ಮಾಡಿ ಹಗರಣದಲ್ಲಿ ನಾಲ್ಕು ಮಂದಿ ಐಎಎಸ್ ಅಧಿಕಾರಿಗಳು, ನಾಲ್ವರು ಹಿರಿಯ ತಹಸೀಲ್ದಾರ್ಗಳು ಶಾಮೀಲಾಗಿದ್ದಾರೆ ಎಂದು ದೂರಿದರು.
ಪಶ್ಚಿಮ ಭಾಗದ 7.20 ಎಕರೆ ಪ್ರದೇಶದ ಸರ್ಕಾರಿ ಸ್ವತ್ತನ್ನು ಹರಾಜು ಪ್ರಕ್ರಿಯೆ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಮಾರಾಟ ಮಾಡಲಾಗಿದೆ. 1.01 ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಕಬಳಿಸಿ ಕೆಜಿಎಫ್ ಬಾಬು ಬೇಲಿ ಹಾಕಿಕೊಂಡಿದ್ದಾರೆ ಎಂದು ಆರೋಪಿಸಿದರು.
ಶ್ರೀನಿವಾಸಪುರದ ಸರ್ವೆ ನಂ.15ರ 7.20 ಎಕರೆ ವಿಸ್ತೀರ್ಣದ ಸರ್ಕಾರಿ ಸ್ವತ್ತಿನ ಬಗ್ಗೆ 23 - 05 - 07ರಂದು ಅಂದಿನ ಬೆಂಗಳೂರು ನಗರ ಜಿಲ್ಲಾಧಿಕಾರಿ ಎಂ.ಎ.ಸಾಧಿಕ್ ಅವರು ಅಧಿಸೂಚನೆ ಹೊರಡಿಸಿದ್ದರು. ಈ ಜಮೀನನ್ನು ಯಾವ ಸ್ಥಿತಿಯಲ್ಲಿದೆಯೋ ಅದೇ ಸ್ಥಿತಿಯಲ್ಲಿ ಹರಾಜು ಮಾಡಿ ಅಂತಿಮ ಮೊತ್ತದ ಶೇ.25ರಷ್ಟು ಹಣವನ್ನು ಡಿಡಿ ಮೂಲಕ ಹರಾಜು ಪ್ರಕ್ರಿಯೆ ಮುಗಿದ 24 ಗಂಟೆಯೊಳಗೆ ಅಧಿಕಾರಿಗಳಿಗೆ ಸಲ್ಲಿಸಬೇಕಿತ್ತು. ಉಳಿದ 75ರಷ್ಟು ಹಣವನ್ನು 10 ದಿನದೊಳಗೆ ಪಾವತಿಸಬೇಕು ಎಂದು ಅಧಿಸೂಚನೆಯಲ್ಲಿ ಹೇಳಲಾಗಿತ್ತು ಎಂದು ಮಾಹಿತಿ ನೀಡಿದರು.
ಹರಾಜು ಪ್ರಕ್ರಿಯೆಯಲ್ಲಿ ಜಿಲ್ಲಾಧಿಕಾರಿಗಳು 7.5 ಕೋಟಿಗೆ ನಿಗದಿಪಡಿಸಿ ಇದರಲ್ಲಿ ನಾಲ್ಕು ಮಂದಿ ಭಾಗವಹಿಸಿದ್ದಾರೆ. ನಿಯಮಾನುಸಾರವಾಗಿ ಅರ್ಜಿ ಸಲ್ಲಿಸಿದ್ದ ನಾಲ್ವರಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕೊಡದೆ ಜಿಲ್ಲಾಧಿಕಾರಿ ಎಂ.ಎ.ಸಾಧಿಕ್ ಅವರು ಬಾಬು ಪರವಾಗಿ ಕೆಲಸ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
2014ರಲ್ಲಿ ಪಾಲಿಕೆಗೆ ಹಸ್ತಾಂತರವಾಗಿದ್ದ 30 ಕೋಟಿ ಮೌಲ್ಯದ 2.21 ವಿಸ್ತೀರ್ಣದ ಜಮೀನಿಗೆ ಅನಧಿಕೃತವಾಗಿ ಬಾಬು ಬೇಲಿ ಹಾಕಿಕೊಂಡಿದ್ದಾರೆ. ಈ ಕುರಿತು ಘನತ್ಯಾಜ್ಯ ಸಂಸ್ಕರಣಾ ಘಟಕದ ನಿರ್ವಹಣೆಗಾಗಿ ಇದನ್ನು ಪಾಲಿಕೆಗೆ ಹಸ್ತಾಂತರಿಸಲಾಗಿತ್ತು. ಇದರಲ್ಲಿ ಪಾಲಿಕೆ ಅಧಿಕಾರಿಗಳು ಶಾಮೀಲಾಗಿ ಆ ಜಮೀನನ್ನು ವಶಪಡಿಸಿಕೊಂಡಿಲ್ಲ ಎಂದು ದೂರಿದರು.
ಇದನ್ನೂ ಓದಿ:ರಾಜ್ಯದ ರಾಜಕಾರಣಿಗಳಲ್ಲೇ ಅತ್ಯಂತ ಶ್ರೀಮಂತ ಯೂಸುಫ್ ಷರೀಫ್(ಕೆಜಿಎಫ್ ಬಾಬು)..