ಬೆಂಗಳೂರು: ಎಂಎಸ್‌ಎಂಇ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಘೋಷಿಸಿರುವ ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ಕಾಸಿಯಾ (ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ) ಸ್ವಾಗತಿಸುತ್ತದೆ ಎಂದು ಕಾಸಿಯಾ ಅಧ್ಯಕ್ಷ ರಾಜು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಕಷ್ಟದಲ್ಲಿರುವ ಎಂಎಸ್‌ಎಂಇಗಳಿಗೆ ಘೋಷಿಸಿರುವ 20,000 ಕೋಟಿ ರೂ.ಗಳ ನೆರವು ಎನ್ಪಿಎ ಖಾತೆಗಳಿಗೆ ಸಹಕಾರಿಯಾಗಲಿದೆ. ಇಲ್ಲದಿದ್ದರೆ ಅವುಗಳ ಕಾರ್ಯಾಚರಣೆ ಕಷ್ಟಸಾಧ್ಯವಾಗುತ್ತಿತ್ತು. ಇದರಿಂದ ಸುಮಾರು 2 ಲಕ್ಷ ಎಂಎಸ್‌ಎಂಇಗಳಿಗೆ ಪ್ರಯೋಜನವಾಗಲಿದೆ ಮತ್ತು ಈ ಕಷ್ಟದ ಸಮಯದಲ್ಲಿ ಅಗತ್ಯವಿರುವ ಅರ್ಹ ಘಟಕಗಳಿಗೆ ಈಕ್ವಿಟಿ ಬೆಂಬಲವನ್ನು ಒದಗಿಸುವ ನಿಧಿಯಾಗಿದೆ. ಇಪಿಎಫ್ ಕೊಡುಗೆಯನ್ನ ಇನ್ನೂ 3 ತಿಂಗಳು ವಿಸ್ತರಿಸಿರುವ ಸರ್ಕಾರದ ಕ್ರಮ ಸ್ವಾಗತಾರ್ಹ. ಟೆಂಡರ್ ನಿಯಮಗಳನ್ನ ಸಡಿಲಿಸಿರುವುದು ಮತ್ತು ಎನ್ಬಿಎಫ್ಸಿಗಳಲ್ಲಿ ಈಕ್ವಿಟಿಯನ್ನು ಸೇರಿಸಿರುವುದರಿಂದ ಸರ್ಕಾರದ ಖರೀದಿ ವಿಷಯದಲ್ಲಿ ಎಂಎಸ್‌ಎಂಇಗಳಿಗೆ ಸಹಾಯ ಮಾಡುವ ಸರ್ಕಾರದ ನಡೆಗಳು ಆಶಾದಾಯಕವಾಗಿವೆ.
ಎಂಎಸ್‌ಎಂಇ ಹೊಸ ವ್ಯಾಖ್ಯಾನದ ಘೋಷಣೆಯನ್ನ ನಾವು ಸ್ವಾಗತಿಸುತ್ತೇವೆ ಮತ್ತು ಎಂಎಸ್‌ಎಂಇಗಳಿಗೆ ಸರ್ಕಾರ ಮತ್ತು ಅಧೀನ ಸಂಸ್ಥೆಗಳಿಂದ ಬಾಕಿ ಇರುವ ಪಾವತಿಗಳನ್ನ 45 ದಿನಗಳಲ್ಲಿ ಬಿಡುಗಡೆ ಮಾಡುವ ಸರ್ಕಾರದ ಘೋಷಣೆಯನ್ನು ಸಹ ನಾವು ಸ್ವಾಗತಿಸುತ್ತೇವೆ ಎಂದರು.