ಬೆಂಗಳೂರು : ರಾಜ್ಯದಲ್ಲಿ ನವೆಂಬರ್ 16ರವರೆಗೂ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಹಾಗಾಗಿ, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಒಳನಾಡಿನಲ್ಲಿ ಭಾರೀ ಮಳೆಯ ಮುನ್ಸೂಚನೆ ಇಲ್ಲ ಎಂದು ಬೆಂಗಳೂರಿನ ಹವಾಮಾನ ಕೇಂದ್ರದ ಹವಾಮಾನ ತಜ್ಞರಾದ ಸದಾನಂದ ಅಡಿಗ ತಿಳಿಸಿದರು.
ನಗರದಲ್ಲಿ ಇಂದು ಬೆಳಗ್ಗೆ ಗರಿಷ್ಠ ಉಷ್ಣಾಂಶ 21.8 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 20.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. 6.7 ಮಿ.ಮೀ ಮಳೆಯಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 21.6 ಮಿ.ಮೀ, ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 9.1 ಮಿ.ಮೀ ಮಳೆಯಾಗಿದೆ ಎಂದು ಮಾಹಿತಿ ನೀಡಿದರು.
ನಿನ್ನೆ ತಮಿಳುನಾಡಿನ ಪ್ರದೇಶದಲ್ಲಿ ವಾಯುಭಾರ ಕುಸಿತ ಮತ್ತಷ್ಟು ದುರ್ಬಲಗೊಂಡು, ಮೇಲ್ಮೈ ಸುಳಿಗಾಳಿ ರೂಪದಲ್ಲಿ ಇರುವುದರಿಂದ ಇಂದು ಮತ್ತು ನಾಳೆ ಗರಿಷ್ಠ ಉಷ್ಣಾಂಶ ಸ್ವಲ್ಪ ಏರಿಕೆಯಾಗಲಿದೆ.
ಆದರೆ, ಬೆಂಗಳೂರಿನಲ್ಲಿ ಎರಡೂ ದಿನವೂ ಮೋಡ ಕವಿದ ವಾತಾವರಣ ಇರಲಿದೆ. ಆದರೆ, ಒಂದೆರಡು ಬಾರಿ ಮಾತ್ರ ಮಳೆಯಾಗಲಿದ್ದು, ನಾಳೆ ಕೆಲವು ಬಾರಿ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ಐದು ದಿನ ಭಾರೀ ಮಳೆಯ ಮುನ್ಸೂಚನೆ ಇರುವುದಿಲ್ಲ ಎಂದರು.
ನಿನ್ನೆ ತಮಿಳುನಾಡಿನಲ್ಲಾದ ವಾಯುಭಾರ ಕುಸಿತ ಇಂದು ದುರ್ಬಲಗೊಂಡಿರುವ ಹಿನ್ನಲೆ, ಮೇಲ್ಮೈ ಸುಳಿಗಾಳಿಯು ಆಂಧ್ರಪ್ರದೇಶ ಒಡಿಶಾ ಮೂಲಕ ಪಶ್ಚಿಮ ಬಂಗಾಳದ ತನಕ ಟ್ರಫ್ ಹಾದು ಹೋಗಲಿದೆ. ಆಗ್ನೇಯ ಅರಬ್ಬೀ ಸಮುದ್ರದ ಮೇಲೆ ಮೇಲ್ಮೈ ಸುಳಿಗಾಳಿ ಇದೆ ಎಂದರು.
ಕರಾವಳಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆ ಮಳೆಯಾಗಿದೆ. ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಕಡೆ ಮಳೆಯಾಗಿದೆ. ಚಿಕ್ಕಬಳ್ಳಾಪುರದಲ್ಲಿ 4 ಸೆಂ.ಮೀ, ತುಮಕೂರಿನಲ್ಲಿ 3 ಸೆಂ.ಮೀ, ಮೈಸೂರು, ಗೌರಿಬಿದನೂರಿನಲ್ಲಿ 3 ಸೆಂ.ಮೀ ಮಳೆಯಾಗಿದೆ.
ಕರಾವಳಿಯಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ. ನಾಳೆಯಿಂದ ಮಳೆ ಪ್ರಮಾಣದಲ್ಲಿ ಏರಿಕೆ ಕಂಡು ಬರಲಿದೆ. 14, 15, 16,17ರಂದು ಮಳೆಯಾಗಲಿದೆ. ನಾಳೆ ಮತ್ತು ನಾಡಿದ್ದು ಯೆಲ್ಲೋ ಅಲರ್ಟ್ ಕೊಡಲಾಗಿದೆ. ಉತ್ತರ ಒಳನಾಡಿನಲ್ಲೂ ನಾಳೆಯಿಂದ ಮೂರು ದಿನ ಮಳೆಯಲ್ಲಿ ಏರಿಕೆ ಕಂಡು ಬರಲಿದೆ. ಆದರೆ, ಭಾರೀ ಮಳೆಯ ಮುನ್ಸೂಚನೆಗಳಿಲ್ಲ.
ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಎಲ್ಲಾ ಕಡೆಗಳಲ್ಲಿ ಮಳೆಯಾಗಲಿದೆ. 17ರಂದು ಕೆಲವು ಕಡೆ ಮಾತ್ರ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಇಂದಿನಿಂದ 4 ದಿನ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಮೈಸೂರು, ಕೊಡಗು,ಚಾಮರಾಜನಗರಕ್ಕೆ ಇಂದು ಯೆಲ್ಲೋ ಅಲರ್ಟ್ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.