ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ ಜಾರಿಯಾದ ನಂತರ ರಾಜ್ಯದ ಸಾರಿಗೆ ನಿಗಮಗಳಲ್ಲಿ ಆರ್ಥಿಕ ಚೇತರಿಕೆ ಕಂಡು ಬಂದಿದ್ದು, ಬಸ್ಗಳಿಗೆ ಬೇಡಿಕೆಯೂ ಹೆಚ್ಚಾಗಿದೆ. 4 ನಿಗಮಗಳಿಂದ ಸದ್ಯಕ್ಕೆ 24 ಸಾವಿರ ಬಸ್ಗಳು ಸೇವೆ ಒದಗಿಸುತ್ತಿದ್ದರೂ ಶಕ್ತಿ ಯೋಜನೆಯ ಪರಿಣಾಮ ಹಾಗೂ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡಾಗ ಇನ್ನು 5,700 ಬಸ್ಗಳ ಅವಶ್ಯಕತೆ ಇದೆ ಎನ್ನುವುದು ತಿಳಿದು ಬಂದಿದೆ.
ಸದ್ಯಕ್ಕೆ ರಾಜ್ಯದಲ್ಲಿ ನಾಲ್ಕು ಸಾರಿಗೆ ನಿಗಮಗಳು ರಸ್ತೆ ಸಾರಿಗೆ ಸೇವೆಯನ್ನು ನೀಡುತ್ತಿದ್ದು, ರಾಜ್ಯಾದ್ಯಂತ ಬಸ್ ಸಂಚಾರದ ಮೂಲಕ ರಸ್ತೆ ಜಾಲವನ್ನು ಸಮರ್ಪಕವಾಗಿ ನಿಭಾಯಿಸುತ್ತಿವೆ. ಇದರಲ್ಲಿ ಕೆಎಸ್ಆರ್ಟಿಸಿಯದ್ದು ಸಿಂಹ ಪಾಲು ಎನ್ನಬಹುದಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ 8,143 ಬಸ್ ಗಳಿದ್ದು, 2,250 ಹೆಚ್ಚುವರಿ ಬಸ್ಗಳ ಅವಶ್ಯಕತೆ ಇದೆ. ಅದೇ ರೀತಿ ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 6607 ಬಸ್ಗಳಿದ್ದು, 1891 ಹೆಚ್ಚುವರಿ ಬಸ್ಗಳ ಅವಶ್ಯಕತೆ ಇದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 4,856 ಬಸ್ಗಳಿದ್ದು 1000 ಹೆಚ್ಚುವರಿ ಬಸ್ಗಳ ಅವಶ್ಯಕತೆ ಇದೆ. ಇನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 4,566 ಬಸ್ಗಳಿದ್ದು 655 ಹೆಚ್ಚುವರಿ ಬಸ್ಗಳ ಅವಶ್ಯಕತೆ ಇದೆ. ಒಟ್ಟು ನಾಲ್ಕು ನಿಗಮಗಳಿಂದ 24,172 ಬಸ್ಗಳಿದ್ದು ಇನ್ನು ಹೆಚ್ಚುವರಿಯಾಗಿ 5,796 ಬಸ್ಗಳ ಅವಶ್ಯಕತೆ ಇದೆ.
ಬಸ್ ಖರೀದಿಗೆ ಮುಂದಾದ ನಿಗಮಗಳು : ಕೆಎಸ್ಆರ್ಟಿಸಿಯಲ್ಲಿ 620 ಬಸ್ಗಳ ಖರೀದಿಗೆ ಹಾಗೂ 300 ಎಲೆಕ್ಟ್ರಿಕ್ ಬಸ್ಗಳನ್ನು ಜಿಸಿಸಿ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಲು ಟೆಂಡರ್ ಕರೆಯಲಾಗಿದ್ದು, ಸಾರಿಗೆ ಸೌಲಭ್ಯವಿಲ್ಲದ ಗ್ರಾಮಗಳಿಗೆ ಬೇಡಿಕೆಗೆ ಅನುಗುಣವಾಗಿ ಮಾರ್ಗ ಸಮೀಕ್ಷೆ ಕೈಗೊಂಡು ಸಾರಿಗೆ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗುತ್ತದೆ.
ಬಿಎಂಟಿಸಿಯಲ್ಲಿ 921 ಜಿಸಿಸಿ ಮಾದರಿಯ ಎಲೆಕ್ಟ್ರಿಕ್ ಬಸ್ಗಳನ್ನು ಸೇರ್ಪಡೆಗೊಳಿಸಲು ಕ್ರಮ ವಹಿಸಿದ್ದು, 840 ಡೀಸೆಲ್ ಬಸ್ಗಳ ಖರೀದಿ ಹಾಗೂ 100 ಜಿಸಿಸಿ ಮಾದರಿ ಮಿನಿ ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆ ನಡೆಸಲು ಹಾಗೂ 20 ಮಿನಿ ಎಲೆಕ್ಟ್ರಿಕ್ ಬಸ್ಗಳ ಖರೀದಿ ಪ್ರಕ್ರಿಯೆ ಮಾಡಲಾಗುತ್ತಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ 285 ಬಿಎಸ್-6 ಡೀಸೆಲ್ ಬಸ್ಗಳ ಖರೀದಿಸುವ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಅದಷ್ಟು ಬೇಗ ಹೊಸ ಬಸ್ಗಳು ನಿಗಮಕ್ಕೆ ಸೇರ್ಪಡೆಯಾಗಲಿವೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ 802 ಬಸ್ಗಳ ಖರೀದಿ ಪ್ರಕ್ರಿಯೆ ನಡೆದಿದ್ದು, ಶಕ್ತಿ ಯೋಜನೆಯ ಬೇಡಿಕೆಗನುಸಾರ ಸಾರಿಗೆ ಸೇವೆ ಒದಗಿಸಲು ನಿರ್ಧರಿಸಲಾಗಿದೆ.
ಸಾರಿಗೆ ನಿಗಮಗಳಿಗೆ ಶಕ್ತಿಯ ಬಲ : ಶಕ್ತಿ ಯೋಜನೆಯಡಿ ಕೆಎಸ್ಆರ್ಟಿಸಿಯ 6,239 ಬಸ್ಗಳು, ಬಿಎಂಟಿಸಿಯ 5057 ಬಸ್ಗಳು. ವಾಯುವ್ಯ ಸಾರಿಗೆಯ 3911 ಬಸ್ಗಳು, ಕಲ್ಯಾಣ ಕರ್ನಾಟಕ ಸಾರಿಗೆಯ 4334 ಬಸ್ಗಳು ಸೇವೆ ಒದಗಿಸುತ್ತಿವೆ. ಶಕ್ತಿ ಯೋಜನೆ ಜಾರಿಯಾದ ನಂತರ ದಿನನಿತ್ಯ ಸಂಚರಿಸುವ ಪ್ರಯಾಣಿಕರಲ್ಲಿ ಹೆಚ್ಚಳ ಕಂಡಿದ್ದು, ಕೆಎಸ್ಆರ್ಟಿಸಿ ವ್ಯಾಪ್ತಿಯಲ್ಲಿ 4.49 ಲಕ್ಷ, ಬಿಎಂಟಿಸಿ ವ್ಯಾಪ್ತಿಯಲ್ಲಿ 11.13 ಲಕ್ಷ, ವಾಯುವ್ಯ ಸಾರಿಗೆಯಲ್ಲಿ 7.16 ಲಕ್ಷ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 2.14 ಲಕ್ಷ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.
ಇನ್ನು ಹೊಸ ಬಸ್ಗಳನ್ನು ಹಂತ ಹಂತವಾಗಿ ನಿಗಮಗಳಿಗೆ ಸೇರ್ಪಡೆ ಮಾಡಿಕೊಳ್ಳುವ ಕಾರ್ಯ ಆರಂಭಗೊಂಡಿದೆ. ಈಗಾಗಲೇ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಇತ್ತೀಚೆಗಷ್ಟೇ ಒಂದಷ್ಟು ಬಸ್ ಗಳ ಸೇರ್ಪಡೆಯಾಗಿದೆ. ಮತ್ತಷ್ಟು ಬಸ್ಗಳು ಸದ್ಯದಲ್ಲೇ ಸೇರ್ಪಡೆಯಾಗಲಿವೆ. ಅದೇ ರೀತಿ ಎಲ್ಲಾ ನಾಲ್ಕು ನಿಗಮಗಳಿಗೂ ಸದ್ಯದಲ್ಲೇ ಹೆಚ್ಚುವರಿಯಾಗಿ ಹೊಸ ಬಸ್ಗಳ ಸೇರ್ಪಡೆಯಾಗಲಿದ್ದು, ಶಕ್ತಿ ಯೋಜನೆಗೆ ಮತ್ತಷ್ಟು ಶಕ್ತಿ ಬರಲಿದೆ, ಬಸ್ಗಳ ಕೊರತೆ ನೀಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : 4 ತಿಂಗಳು ಪೂರೈಸಿದ ಶಕ್ತಿ ಯೋಜನೆ : NWKRTC ವ್ಯಾಪ್ತಿಯಲ್ಲಿ ಉಚಿತ ಪ್ರಯಾಣಿಸಿದ ಮಹಿಳೆಯರೆಷ್ಟು, ಖರ್ಚೆಷ್ಟು?