ಬೆಂಗಳೂರು : ದೇಶದಲ್ಲೇ ಅತಿ ಹೆಚ್ಚು ಕಾಲೇಜುಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ ಲಭಿಸಿದೆ. ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು, ಒಟ್ಟು 8,114 ಕಾಲೇಜುಗಳನ್ನು ಹೊಂದಿದೆ. ಎರಡನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 4,532 ಕಾಲೇಜುಗಳಿವೆ. ಕರ್ನಾಟಕದಲ್ಲಿರುವ ಕಾಲೇಜುಗಳ ಸಂಖ್ಯೆ 4,233.
ಈ ವರದಿಯನ್ನು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಅಖಿಲ ಭಾರತ ಮಟ್ಟದ ಸಮೀಕ್ಷೆ (2020-21) ಪ್ರಕಟಿಸಿದೆ. 2011 ರಿಂದ ಈ ಸಮೀಕ್ಷೆ ನಡೆಯುತ್ತಿದೆ. ಕರ್ನಾಟಕ ನಂತರದ ಕೆಳಸ್ಥಾನಗಳಲ್ಲಿ ರಾಜಸ್ಥಾನ (3,694), ತಮಿಳುನಾಡು(2,667), ಮಧ್ಯ ಪ್ರದೇಶ, ಆಂಧ್ರ ಪ್ರದೇಶ, ಗುಜರಾತ್, ತೆಲಂಗಾಣ ಇದೆ. 10ನೇ ಸ್ಥಾನ ಕೇರಳಕ್ಕೆ ಸಿಕ್ಕಿದೆ. ಒಟ್ಟು ಜನಸಂಖ್ಯೆಗೆ ಎಷ್ಟು ಕಾಲೇಜುಗಳಿವೆ ಎಂಬ ಲೆಕ್ಕಾಚಾರದಲ್ಲಿ ಈ ಅಂಕಿಅಂಶವನ್ನು ಕಲೆಹಾಕಲಾಗಿದೆ. ಉತ್ತರ ಪ್ರದೇಶದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ 32 ಕಾಲೇಜುಗಳಿವೆ. ಮಹಾರಾಷ್ಟ್ರದಲ್ಲಿ 34 ಹಾಗೂ ಕರ್ನಾಟಕದಲ್ಲಿ 62 ಕಾಲೇಜುಗಳಿವೆ.
ವರದಿಯಲ್ಲೇನಿದೆ? : ದೇಶದಲ್ಲಿ ಪಿಎಚ್ಡಿ ಕೋರ್ಸ್ಗಳನ್ನು ನಡೆಸುತ್ತಿರುವ ಕಾಲೇಜುಗಳ ಸಂಖ್ಯೆ ಕೇವಲ ಶೇ.2.9 ರಷ್ಟಿದೆ. ಶೇ. 55.2ರಷ್ಟು ಕಾಲೇಜುಗಳು ಸ್ನಾತಕೋತ್ತರ ಪದವಿ ಕೋರ್ಸ್ಗಳನ್ನು ನಡೆಸುತ್ತಿದ್ದರೆ, ಬಹುತೇಕ ಕಾಲೇಜುಗಳಲ್ಲಿ ಪದವಿ ತರಗತಿಗಳು ನಡೆಯುತ್ತಿವೆ. ಶೇ. 35.8ರಷ್ಟು ಕಾಲೇಜುಗಳು ಕೇವಲ ಒಂದು ಕೋರ್ಸನ್ನು ಮಾತ್ರವೇ ನಡೆಸುತ್ತಿದೆ. ಈ ಪೈಕಿ ಖಾಸಗಿ ಕಾಲೇಜುಗಳು ಶೇ. 82.2ರಷ್ಟಿವೆ. ಇವುಗಳಲ್ಲಿ ಶೇ. 30.9ರಷ್ಟು ಕಾಲೇಜುಗಳು ಬಿ.ಇಡಿ ಕೋರ್ಸ್ ಅನ್ನು ಮಾತ್ರವೇ ನಡೆಸುತ್ತಿವೆ. ಬಹುತೇಕ ಎಲ್ಲಾ ಕಾಲೇಜುಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಮಕ್ಕಳಿರುವುದು ಗಮನಕ್ಕೆ ಬಂದಿದೆ.
ಶೇ 23.6ರಷ್ಟು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 100ಕ್ಕಿಂತ ಕಡಿಮೆಯಿದೆ. ಶೇ 48.5ರಷ್ಟು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 100 ರಿಂದ 500ರ ನಡುವೆ ಇದೆ. ಅಂದರೆ ಶೇ. 65.1ರಷ್ಟು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ 500 ಕ್ಕಿಂತ ಕಡಿಮೆ ಇದೆ ಎಂದು ವರದಿ ತಿಳಿಸಿದೆ. ಕೇವಲ ಶೇ. 4ರಷ್ಟು ಕಾಲೇಜುಗಳಲ್ಲಿ 3000ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಸಮೀಕ್ಷೆಗೆ ಒಳಪಟ್ಟಿರುವ 41,600 ಕಾಲೇಜುಗಳ ಪೈಕಿ 8,903 (ಶೇ.21.4) ಸರ್ಕಾರಿ, 5,658 (ಶೇ.13.3) ಅನುದಾನಿತ ಹಾಗೂ 27.039 (ಶೇ.65) ಖಾಸಗಿ ಕಾಲೇಜುಗಳಾಗಿವೆ.
ಬಿಎ ಪದವಿಗೆ ಹೆಚ್ಚು ವಿದ್ಯಾರ್ಥಿಗಳು: ದೇಶದಲ್ಲಿ ಬಿ.ಎ ಪದವಿ ವ್ಯಾಸಂಗ ಮಾಡುತ್ತಿರುವವರ ಸಂಖ್ಯೆ ಹೆಚ್ಚಿದ್ದರೆ, ನಂತರ ಸ್ಥಾನದಲ್ಲಿ ಬಿ.ಎಸ್ಸಿ ಇದೆ. ಬಿ.ಎ ಪದವಿ ಓದುತ್ತಿರುವ 1.04 ಕೋಟಿ ವಿದ್ಯಾರ್ಥಿಗಳ ಪೈಕಿ ಶೇ. 52.7ರಷ್ಟು ವಿದ್ಯಾರ್ಥಿನಿಯರು, 49.12 ಲಕ್ಷ ವಿದ್ಯಾರ್ಥಿಗಳು ದಾಖಲಾಗಿರುವ ಬಿ.ಎಸ್ಸಿ ಪದವಿಯಲ್ಲಿ ಶೇ 52.2ರಷ್ಟು ವಿದ್ಯಾರ್ಥಿನಿಯರು ಮತ್ತು 43.22 ಲಕ್ಷ ವಿದ್ಯಾರ್ಥಿಗಳು ದಾಖಲಾಗಿರುವ ಬಿ.ಕಾಂ ಪದವಿಯಲ್ಲಿ ಶೇ. 48.5ರಷ್ಟು ವಿದ್ಯಾರ್ಥಿನಿಯರೇ ಇದ್ದಾರೆ. ಇನ್ನೂ ದೇಶದಲ್ಲಿ ಬಿ.ಟೆಕ್ ಕೋರ್ಸ್‌ಗೆ 23.20 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಈ ಪೈಕಿ ಶೇ. 28.7ರಷ್ಟು ವಿದ್ಯಾರ್ಥಿನಿಯರು, ಬಿ.ಇ ಕೋರ್ಸ್‌ಗೆ ಪ್ರವೇಶ ಪಡೆದ 13.42 ಲಕ್ಷ ವಿದ್ಯಾರ್ಥಿಗಳ ಪೈಕಿ ಶೇ. 28.5ರಷ್ಟು ವಿದ್ಯಾರ್ಥಿನಿಯರಾಗಿದ್ದಾರೆ.
ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಷಯಗಳಲ್ಲಿ ಪಿಎಚ್ಡಿ ಕೋರ್ಸ್‌ಗೆ ಪ್ರವೇಶ ಪಡೆದವರ ಸಂಖ್ಯೆ ಹೆಚ್ಚಿದೆ. ಇಲ್ಲಿ ನೋಂದಾಯಿಸಿರುವ 56,625 ವಿದ್ಯಾರ್ಥಿಗಳಲ್ಲಿ ಶೇ. 33.3ರಷ್ಟು ವಿದ್ಯಾರ್ಥಿನಿಯರು ಇದ್ದಾರೆ ಎಂದು ವರದಿ ಉಲ್ಲೇಖಿಸಿದೆ. ದೇಶದ ಉನ್ನತ ಶಿಕ್ಷಣ ದಾಖಲಾತಿಯು ಕಳೆದ ಐದು ವರ್ಷಗಳಲ್ಲಿ ಶೇ. 21ರಷ್ಟು ಏರಿಕೆಯಾಗಿದೆ. 2020–21ನೇ ಸಾಲಿನಲ್ಲಿ ದೇಶದ 4.14 ಕೋಟಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪ್ರವೇಶಿಸಿದ್ದರು. 2019–20ನೇ ಸಾಲಿನಲ್ಲಿ 3.85 ಕೋಟಿ ಇತ್ತು.
ಆದರೆ ಇದು 2019–20ನೇ ಸಾಲಿಗಿಂತ ಶೇ 7.5 ಹಾಗೂ 2014–15ನೇ ಸಾಲಿಗಿಂತ ಶೇ 21ರಷ್ಟು ಏರಿಕೆಯಾಗಿದೆ. ಐದು ವರ್ಷಗಳಲ್ಲಿ ವಿದ್ಯಾರ್ಥಿನಿಯರ ದಾಖಲಾತಿ ಶೇ. 28ರಷ್ಟು ಏರಿಕೆಯಾಗಿದೆ. 2020–21ರಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ 2.01 ಕೋಟಿ ಇದ್ದರೆ, 2019–20ರಲ್ಲಿ 1.88 ಕೋಟಿಯಿತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ.