ಬೆಂಗಳೂರು: ಬೆಂಗಳೂರು ಸೇರಿ ಇಡೀ ರಾಜ್ಯದ ಪ್ರವಾಹ ನಿರ್ವಹಣೆ, ಮೂಲಭೂತ ಸೌಕರ್ಯಗಳಿಗೆ 600 ಕೋಟಿ ರೂ ಬಿಡುಗಡೆ ಮಾಡಲು ತೀರ್ಮಾನ ಮಾಡಿದ್ದೇನೆ. ಇದನ್ನು ರಾಜ್ಯ ಸರ್ಕಾರದ ಬೊಕ್ಕಸದಿಂದಲೇ ಭರಿಸಲಾಗುವುದು. ಬೆಂಗಳೂರಿಗೆ 300 ಕೋಟಿ ರೂ ಸಿಗಲಿದೆ. ಪರಿಹಾರಕ್ಕಾಗಿ ಕೇಂದ್ರಕ್ಕೂ ಮನವಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಚರ್ಚಿಸಿದ ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಿಎಂ, ಕಳೆದ ಮೂರು ತಿಂಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ರಾಜ್ಯದ ಎಲ್ಲ ಕೆರೆಗಳು ತುಂಬಿವೆ. ಬರಪೀಡಿತ ಪ್ರದೇಶಗಳಲ್ಲೂ ಕೆರೆಗಳು ತುಂಬಿವೆ. ಇದೊಂದು ದಾಖಲೆ. ಆಗಸ್ಟ್ ಕೊನೆಗೆ 144 ಮಿ.ಮೀ ರಷ್ಟು ಹೆಚ್ಚು ಮಳೆಯಾಗಿದೆ. ಸೆಪ್ಟೆಂಬರ್ನ 5 ದಿನಗಳಲ್ಲಿ 51 ಮಿ.ಮೀ ರಷ್ಟು ಮಳೆಯಾಗಿದೆ ಎಂದರು.
ಇದನ್ನೂ ಓದಿ: ಬೆಂಗಳೂರಲ್ಲಿ ವರುಣನ ಆರ್ಭಟ : 51 ವರ್ಷಗಳಲ್ಲಿ ದಾಖಲೆಯ ಮಳೆ.. ಕಂಪ್ಲೀಟ್ ಸ್ಟೋರಿ
ಮುಂದಿನ 4 ದಿನಗಳ ಕಾಲ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರಲ್ಲಿ ಸೆಪ್ಟೆಂಬರ್ 1 ರಿಂದ 5 ರವರೆಗೆ ಮಹದೇವಪುರ, ಬೊಮ್ಮನಹಳ್ಳಿಯಲ್ಲಿ 307 ಮಿ.ಮೀ ರಷ್ಟು ಮಳೆ ಸುರಿದಿದೆ. 40 ವರ್ಷದಲ್ಲಿ ಇದು ಅತಿಹೆಚ್ಚಿನ ಮಳೆ. ಬೆಂಗಳೂರಿನ 164 ಕೆರೆಗಳು ತುಂಬಿ ತುಳುಕಿವೆ. ದೊಡ್ಡ ಪ್ರಮಾಣದಲ್ಲಿ ಪ್ರವಾಹ ಬೆಂಗಳೂರಿನ ದಕ್ಷಿಣ ವಲಯದಲ್ಲಿ ಹೆಚ್ಚಾಗಿದೆ. ಬೆಂಗಳೂರಿನ ಎಲ್ಲ ದೊಡ್ಡ ಕೆರೆಗಳಿಗೆ ಸ್ಲೂಸ್ ಗೇಟ್ ನಿರ್ಮಾಣ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು.
ರಾಜ್ಯದ 17 ಜಿಲ್ಲೆಗಳ ಮಳೆ ಬಗ್ಗೆ ಮಾಹಿತಿ ಪಡೆದಿದ್ದೇನೆ. 5,092 ಜನ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. 14,900 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 1,374 ಎಕರೆ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, 430 ಮನೆಗಳಿಗೆ ಪೂರ್ತಿ ಹಾನಿಯಾಗಿದೆ. 2,188 ಮನೆಗಳಿಗೆ ಕಡಿಮೆ ಪ್ರಮಾಣದಲ್ಲಿ ಹಾನಿಯಾಗಿದ್ದು, 255 ಕಿ.ಮೀ ರಸ್ತೆಗಳು ಹಾಳಾಗಿವೆ. ಇದು ಸೆಪ್ಟೆಂಬರ್ 1 ರಿಂದ 5ರ ವರೆಗೆ ಆಗಿರುವ ಹಾನಿಯಾಗಿದೆ ಎಂದು ಸಿಎಂ ವಿವರ ನೀಡಿದರು.
ಇದನ್ನೂ ಓದಿ: ಬೆಂಗಳೂರಲ್ಲಿ ಕಂಡು ಕೇಳರಿಯದ ಮಳೆ: ಫೋಟೋಗಳಲ್ಲಿ ಸಿಲಿಕಾನ್ ಸಿಟಿಯ ಚಿತ್ರಣ
ಯಾವುದೇ ಭಾಗದಲ್ಲಿ ಮಳೆ ಹಾನಿಯಾದರೆ ಕೂಡಲೇ ಸಮೀಕ್ಷೆ ಮಾಡಿ ಪರಿಹಾರ ಕೊಡಲು ಡಿಸಿಗಳಿಗೆ ಸೂಚನೆ ಕೊಟ್ಟಿದ್ದೇನೆ. 664 ಕೋಟಿ ಹಣ ಜಿಲ್ಲಾಧಿಕಾರಿಗಳ ಪಿಡಿ ಅಕೌಂಟ್ನಲ್ಲಿದೆ. ಕೃಷಿ ಭೂಮಿ ಹಾನಿ ಬಗ್ಗೆ ವರದಿ ಅಪ್ಲೋಡ್ ಮಾಡಲು ಸೂಚನೆ ನೀಡಿದ್ದೇನೆ. ರಸ್ತೆ ಅಭಿವೃದ್ಧಿಗೆ 500 ಕೋಟಿ ಬಿಡುಗಡೆ ಮಾಡಿದ್ದೇನೆ.
ಅಧಿಕಾರಿಗಳು ಯುದ್ದೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಳೆಯ ಸಂದರ್ಭದಲ್ಲಿ ಬೆಂಗಳೂರಿನ ಜನತೆಯ ಸಹಕಾರ ನಮ್ಮ ಮೇಲೆ ಇರಲಿ. ಇದನ್ನು ನಾವು ಸಮರ್ಥವಾಗಿ ಎದುರಿಸುತ್ತೇವೆ. ಮಳೆ ನಿಂತ ಕೂಡಲೇ ಮೂಲಭೂತ ಸೌಕರ್ಯಗಳನ್ನು ಸರಿಪಡಿಸುತ್ತೇವೆ. ಆದ್ದರಿಂದ ಈ ದೊಡ್ಡ ಸವಾಲನ್ನು ನಾವೆಲ್ಲರೂ ಒಟ್ಟಾಗಿ ಎದುರಿಸೋಣ ಎಂದು ಸಿಎಂ ಮನವಿ ಮಾಡಿದರು.
ಅಂಗಡಿಗಳು, ಕಮರ್ಷಿಯಲ್ ಪ್ರದೇಶದಲ್ಲಿ ಹಾನಿಯಾಗಿದ್ದಕ್ಕೆ ಪರಿಹಾರ ಕೊಡಲು ಕ್ರಮ ಕೈಗೊಳ್ಳಲಾಗುತ್ತದೆ. ಎಷ್ಟು ಡ್ಯಾಮೇಜ್ ಆಗಿದೆ ಎನ್ನುವುದನ್ನು ಪರಿಶೀಲಿಸಿ ಪರಿಹಾರ ಕೊಡಲು ಸರ್ಕಾರ ನಿರ್ಧರಿಸಿದೆ ಎಂದರು.
ಇದನ್ನೂ ಓದಿ: ವಿಧಾನಸೌಧಕ್ಕೂ ನುಗ್ಗಿದ ಮಳೆ ನೀರು!
ಕೇಂದ್ರ ಅಧ್ಯಯನ ತಂಡ ಮಂಗಳವಾರ ರಾತ್ರಿ ಬರುತ್ತದೆ. ನಾನು ಅವರನ್ನು ಭೇಟಿ ಮಾಡುತ್ತೇನೆ. ಈಗ ಡ್ಯಾಮೇಜ್ ಆಗಿರುವ ಬಗ್ಗೆ ಬುಧವಾರ ಅವರಿಗೆ ತಿಳಿಸುತ್ತೇನೆ. ಈಗಾಗಲೇ ಮೊದಲು ಪರಿಹಾರಕ್ಕೆ ಕೊಟ್ಟಿರೋದು ಬೇರೆ. ಈಗ ಕೊಡುವುದು ಬೇರೆ. ಈ ಹಿಂದೆ ಸುರಿದ ಮಳೆಯಿಂದಾಗಿ 11 ಸಾವಿರ ಕೋಟಿಗೂ ಹೆಚ್ಚು ಹಾನಿಯಾಗಿದೆ. ಈ ಬಗ್ಗೆ ಈಗಾಗಲೇ ಕೇಂದ್ರಕ್ಕೆ ಪರಿಹಾರಕ್ಕಾಗಿ ಮನವಿ ಸಲ್ಲಿಸಿದ್ದೇವೆ. ಇವಾಗ ಸೆಪ್ಟೆಂಬರ್ 1 ರಿಂದ 5 ರ ವರೆಗೆ ಆಗಿರುವ ಮಳೆ ಹಾನಿ ವರದಿಗೆ ಸೂಚನೆ ನೀಡಿದ್ದೇವೆ.
ಜನೋತ್ಸವಕ್ಕೆ ಮಳೆ ಅಡ್ಡಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ, ಸೆಪ್ಟೆಂಬರ್ 8 ರಂದು ಮಳೆಯಾಗಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಮಂಗಳೂರಲ್ಲೂ ಮಳೆಯಾಗುವ ಮುನ್ಸೂಚನೆ ಇತ್ತು. ಆದರೆ ಪ್ರಧಾನಿ ಮೋದಿ ಕಾಲಿಟ್ಟ ಕೂಡಲೇ ಬಿಸಿಲು ಬಂತು. ಇವಾಗ ಸೆಪ್ಟೆಂಬರ್ 8ಕ್ಕೂ ಹಾಗೆಯೇ ಆಗುತ್ತದೆ ಎಂದರು.
ಇದನ್ನೂ ಓದಿ: ಬೆಂಗಳೂರಲ್ಲಿ ಭಾರಿ ಮಳೆ: ರಸ್ತೆಗಳಲ್ಲಿ ನೀರು ತುಂಬಿ ಸಂಚಾರ ಬಂದ್.. ಅಪಾರ್ಟ್ಮೆಂಟ್ಗಳು ಜಲಾವೃತ