ಬೆಂಗಳೂರು: ನಿಗಮ ಮಂಡಳಿ ಸೇರಿದಂತೆ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಸಂಸ್ಥೆಗಳ ನೌಕರರ ಸೇವೆಗಳನ್ನು ಸರ್ಕಾರಿ ಸೇವೆಗಳಲ್ಲಿ ವಿಲೀನಗೊಳಿಸುವುದನ್ನು ನಿಷೇಧಿಸುವ ಕಾಯ್ದೆಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಕಳೆದ ಅಧಿವೇಶನದಲ್ಲಿ ಈ ಕುರಿತು ವಿಧೇಯಕ ಅಂಗೀಕರಿಸಿ ರಾಜ್ಯಪಾಲರ ಒಪ್ಪಿಗೆಗೆ ಕಳುಹಿಸಲಾಗಿತ್ತು. ರಾಜ್ಯಪಾಲರ ಅಂಕಿತ ದೊರೆತ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಸಾರ್ವಜನಿಕ ವಲಯದ ಸಂಸ್ಥೆಗಳಾದ ನಿಗಮ ಮಂಡಳಿ, ಪ್ರಾಧಿಕಾರಗಳಿಗೆ ನೇಮಕಗೊಂಡಿರುವ ನೌಕರರು ನಿಗಮ ಮುಚ್ಚಿದ ನಂತರ ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಕೋರ್ಟ್ ಮೊರೆ ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅವುಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಈ ಕಾಯ್ದೆ ಜಾರಿಗೆ ತಂದಿದೆ.

ನಿಗಮ ಮಂಡಳಿ ನೌಕರರ ನೇಮಕಾತಿ ನಿಯಮಗಳು ಹಾಗೂ ಸರ್ಕಾರಿ ನೌಕರರ ಸೇವಾ ನಿಯಮಗಳಲ್ಲಿ ವ್ಯತ್ಯಾಸವಾಗುವುದರಿಂದ ನಿಗಮ ಮಂಡಳಿ ನೌಕರರನ್ನು ಸರ್ಕಾರಿ ಸೇವೆಯಲ್ಲಿ ವಿಲೀನಗೊಳಿಸುವುದರಿಂದ ಸೇವಾ ಶ್ರೇಣಿಗಳಲ್ಲಿಯೂ ಸಮಸ್ಯೆ ಆಗಲಿದೆ. ಅಲ್ಲದೇ ಸಾರ್ವಜನಿಕ ವೆಚ್ಚವೂ ಹೆಚ್ಚಾಗಲಿದೆ. ಈ ಕಾರಣಕ್ಕೆ ರಾಜ್ಯ ಸರ್ಕಾರ ಈ ಕಾಯ್ದೆ ಜಾರಿಗೊಳಿಸುವ ಮೂಲಕ ನಿಗಮ ಮಂಡಳಿ ನೌಕರರನ್ನು ಸರ್ಕಾರಿ ಸೇವೆಯಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯನ್ನು ನಿಷೇಧಿಸಿದೆ.
