ಬೆಂಗಳೂರು: ಮಹಾಮಾರಿ ಕೊರೊನಾ ನಿಯಂತ್ರಣ ಮಾಡುವಲ್ಲಿ ಮಾಸ್ಕ್ ಕಡ್ಡಾಯ ಹಾಗೂ ಹಾಕಿಕೊಳ್ಳದೇ ಇದ್ದರೆ 1,000 ರೂ ದಂಡ ವಿಧಿಸಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ ಕೊನೆಗೂ ಜನರ ವಿರೋಧಕ್ಕೆ ಮಣಿದಿದೆ.
ಮಾಸ್ಕ್ ಹಾಕಿಕೊಳ್ಳದೇ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸುವವರಿಗೆ ವಿಧಿಸುತ್ತಿದ್ದ 1000 ರೂ. ದಂಡಕ್ಕೆ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ದೊಡ್ಡ ಮೊತ್ತದಲ್ಲಿ ಕಡಿತಗೊಳಿಸಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ನಗರ ಪ್ರದೇಶದಲ್ಲಿ 1000 ರೂ.ಗಳಿಂದ 250 ರೂಪಾಯಿಗಳಿಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ರೂಪಾಯಿಗಳಿಂದ 100 ರೂಪಾಯಿಗಳಿಗೆ ಇಳಿಸಲು ತೀರ್ಮಾನಿಸಿದ್ದು, ತಕ್ಷಣದಿಂದಲೇ ಈ ನಿಯಮ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರ ವಿರೋಧ ಮತ್ತು ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ದಂಡದ ಪ್ರಮಾಣವನ್ನು ನಗರ ಪ್ರದೇಶದಲ್ಲಿ 1000 ರೂ.ಗಳಿಂದ 250 ರೂಪಾಯಿಗಳಿಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ರೂಪಾಯಿಗಳಿಂದ 100 ರೂಪಾಯಿಗಳಿಗೆ ಇಳಿಸಲು ತೀರ್ಮಾನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹೇಳಿರುವಂತೆ ಜೀವ ಮತ್ತು ಜೀವನ ಎರಡನ್ನೂ ಸರಿದೂಗಿಸಿಕೊಂಡು ಹೋಗಲು ಸರ್ಕಾರ ಸರ್ವ ಪ್ರಯತ್ನ ಮಾಡುತ್ತಿದೆ. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಮಾಸ್ಕ್ ಬಳಕೆ ಹಾಗೂ ಸಾಮಾಜಿಕ ಅಂತರವನ್ನು ಕೊಳ್ಳುವುದರ ಮೂಲಕ ಸರ್ಕಾರದೊಂದಿಗೆ ಸಹಕರಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಕೊರೊನಾ ಕಾಣಿಸಿಕೊಂಡ ದಿನದಿಂದಲೂ ಸರ್ಕಾರ ಅದನ್ನ ತಡೆಯಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಕಾಲ ಕಾಲಕ್ಕೆ ಕೇಂದ್ರದ ಮಾರ್ಗಸೂಚಿ ಅನ್ವಯ ರಾಜ್ಯದಲ್ಲಿಯೂ ಲಾಕ್ ಡೌನ್ ಜಾರಿಗೊಳಿಸಿತ್ತು. ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.
ಕೊರೊನಾ ಸೋಂಕು ತಡೆಯಲು ಇದುವರೆಗೂ ಯಾವುದೇ ಲಸಿಕೆ ಲಭ್ಯವಾಗದಿರುವ ಕಾರಣಕ್ಕಾಗಿ ಮಾಸ್ಕ್ ಬಳಕೆ, ಸ್ಯಾನಿಟೈಸರ್ ಉಪಯೋಗ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ. ಇತ್ತೀಚಿನ ಆದೇಶದಲ್ಲಿ ಸರ್ಕಾರವು ನಗರ ಪ್ರದೇಶದಲ್ಲಿ ಮಾಸ್ಕ್ ಮಾತ್ರ ಬಳಸದಿದ್ದರೆ 1000 ರೂ. ದಂಡ ಮತ್ತು ಗ್ರಾಮೀಣ ಪ್ರದೇಶದಲ್ಲಿ 500 ರೂ. ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದರಿಂದ ಇದೀಗ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.