ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ 3ನೇ ಅಲೆ ಭೀತಿ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಮುಂಜಾಗ್ರತಾ ಕ್ರಮಗಳಿಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ವಿದೇಶದಿಂದ ರಾಜ್ಯಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ RT-PCR ಟೆಸ್ಟ್ ಕಡ್ಡಾಯಗೊಳಿಸಲಾಗಿದೆ.
ವಿದೇಶದಿಂದ ಆಗಮಿಸುವವರಲ್ಲಿ SARS- COV- 2 ಪ್ರಕರಣಗಳು ವರದಿಯಾಗುತ್ತಿದ್ದು ಕೆಲವು ಆಯ್ದ ದೇಶಗಳಿಂದ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಈ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.
ಬಾಂಗ್ಲಾದೇಶ, ಬೋಟ್ಸ್ವಾನ, ಚೀನಾ, ಮಾರಿಷಸ್, ನ್ಯೂಜಿಲೆಂಡ್ ಮತ್ತು ಜಿಂಬಾಂಬ್ವೆಯಿಂದ ಬರುವ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಈ ಮೊದಲು ಯುಕೆ, ಯೂರೋಪ್ ದಕ್ಷಿಣ ಆಫ್ರಿಕಾ, ಬ್ರೆಜಿಲ್ ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಟೆಸ್ಟ್ ಕಡ್ಡಾಯಗೊಳಿಸಲಾಗಿತ್ತು.
ಇದನ್ನೂ ಓದಿ:ರಾಜ್ಯದಲ್ಲಿಂದು 1159 ಮಂದಿಗೆ COVID ದೃಢ; 21 ಸೋಂಕಿತರು ಸಾವು
ಈ ಎಲ್ಲಾ ದೇಶಗಳಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಥವಾ ರಾಜ್ಯದ ಇತರೆ ವಿಮಾನ ನಿಲ್ದಾಣಗಳಿಗೆ ಆಗಮಿಸುವ ಪ್ರತಿಯೊಬ್ಬರೂ ಕೋವಿಡ್ ಟೆಸ್ಟ್‌ಗಾಗಿ ಸ್ಯಾಂಪಲ್ಗಳನ್ನು ನೀಡಬೇಕು ಮತ್ತು ಇತರೆ ಕೊರೊನಾ ನಿಯಮಾವಳಿಗಳನ್ನು ಪಾಲಿಸಿ ಏರ್ಪೋರ್ಟ್ನಿಂದ ತೆರಳಬೇಕು ಎಂದು ತಿಳಿಸಲಾಗಿದೆ.
ಇನ್ನು ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಿಂದ ಕೆಂಪೇಗೌಡ ಏರ್ಪೋರ್ಟ್ ಅಥವಾ ಇತರೆ ವಿಮಾನ ನಿಲ್ದಾಣಗಳಿಗೆ ಬಂದಿಳಿಯುವ ಪ್ರಯಾಣಿಕರು ಕೊರೊನಾ ವರದಿ ಬರುವವರೆಗೂ ವಿಮಾನ ನಿಲ್ದಾಣದಲ್ಲೇ ಕಾಯಬೇಕು ಎಂದು ಸೂಚಿಸಲಾಗಿದೆ. ಆರ್‌ಟಿ-ಪಿಸಿಆರ್ ವರದಿ ನೆಗೆಟಿವ್ ಬಂದ ನಂತರವಷ್ಟೇ ಈ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ತೆರಳಬಹುದು.
ಕೇರಳದಿಂದ ಬರುವವರಿಗೆ ಆರ್‌ಟಿ-ಪಿಸಿಆರ್ ವರದಿ ಕಡ್ಡಾಯ:
ಕೇರಳದಿಂದ ಬರುವ ಎಲ್ಲಾ ವಿದ್ಯಾರ್ಥಿಗಳು/ಉದ್ಯೋಗಿಗಳು ವ್ಯಾಕ್ಸಿನ್ ಪಡೆದಿರುವ ಪ್ರಮಾಣಪತ್ರದ ಜೊತೆಗೆ 72 ಗಂಟೆಗಳಿಗಿಂತ ಹಳೆಯದಾಗಿರದ ಆರ್‌ಟಿ-ಪಿಸಿಆರ್ ನೆಗೆಟಿವ್ ರಿಪೋರ್ಟ್ ಹೊಂದಿರಬೇಕು ಮತ್ತು ಏಳು ದಿನಗಳ ಕಾಲ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳು ಮತ್ತು 7 ನೇ ದಿನದಂದು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು ಎಂದು ಕರ್ನಾಟಕ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ.
ಕರ್ನಾಟಕದಲ್ಲಿಂದು 1159 ಮಂದಿಯಲ್ಲಿ ಕೊರೊನಾ ಪತ್ತೆ:
ರಾಜ್ಯದಲ್ಲಿಂದು 1,75,319 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರಲ್ಲಿ 1,159 ಮಂದಿಗೆ ಸೋಂಕು ದೃಢಪಟ್ಟಿದೆ. ಪಾಸಿಟಿವಿಟಿ ದರ 0.66% ರಷ್ಟು ದಾಖಲಾಗಿದೆ. ಇಂದು 1112 ಸೋಂಕಿತರು ಗುಣಮುಖರಾಗಿದ್ದು, ಇಲ್ಲಿಯವರೆಗೆ 28,94,827 ಜನರು ಡಿಸ್ಚಾರ್ಜ್ ಆಗಿದ್ದಾರೆ.