ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನ 20ನೇ ಚಿತ್ರ ಸಂತೆ ಸಂದರ್ಭದಲ್ಲಿ ಪ್ರೊ. ಕೆ ಲಕ್ಷ್ಮ ಗೌಡ ಅವರಿಗೆ ಪ್ರೊ. ಎಂಎಸ್ ನಂಜುಂಡ ರಾವ್ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಕುಮಾರ ಕೃಪ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಸಿಎಂ ಎಸ್ಎಂ ಕೃಷ್ಣ ಪ್ರಶಸ್ತಿ ಪ್ರದಾನ ಮಾಡಿದರು. ಉನ್ನತ ಶಿಕ್ಷಣ ಇಲಾಖೆ ಸಹಾಯದೊಂದಿಗೆ ಆಯೋಜಿಸಿದ್ದ ಸಮಾರಂಭದಲ್ಲಿ, ಕೆ ಲಕ್ಷ್ಮ ಗೌಡಗೆ ನಂಜುಂಡ ರಾವ್ ಪ್ರಶಸ್ತಿ ನೀಡುವ ಜೊತೆಗೆ ಇತರ ನಾಲ್ವರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹೆಚ್‌ಕೆ ಕೇಜ್ರಿವಾಲ್ ಪ್ರಶಸ್ತಿಯನ್ನು ಪೋಲೆಂಡ್ ಮೂಲದ ವಿಮರ್ಶಕಿ ಮಾರ್ತಾ ಯಾಕಿಮೋವಿಝ್ ಅವರಿಗೆ, ಎಂ ಆರ್ಯ ಮೂರ್ತಿ ಪ್ರಶಸ್ತಿಯನ್ನು ಪ್ರೊ. ರಜಿನಿ ಪ್ರಸನ್ನ ಅವರಿಗೆ, ಡಿ ದೇವರಾಜ ಅರಸು ಪ್ರಶಸ್ತಿ ಶಾಂತಾಮಣಿ ಅವರಿಗೆ ಹಾಗೂ ವೈ ಸುಬ್ರಹ್ಮಣ್ಯ ರಾಜು ಪ್ರಶಸ್ತಿಯನ್ನು ಕೆ ವಿಠ್ಠಲ್ ಭಂಡಾರಿ ಅವರಿಗೆ ನೀಡಿ ಗೌರವಿಸಲಾಯಿತು. ಪ್ರೊಫೆಸರ್ ಎಂಎಸ್ ನಂಜುಂಡ ರಾವ್ ಹೆಸರಿನಲ್ಲಿ ನೀಡುತ್ತಿರುವ ರಾಷ್ಟ್ರಮಟ್ಟದ ಪ್ರಶಸ್ತಿ ಹಿರಿಯ ಕಲಾವಿದರಿಗೆ ನೀಡುತ್ತಿದ್ದು, ಇದು ಒಂದು ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಮತ್ತು ಫಲಕವನ್ನು ಒಳಗೊಂಡಿರುತ್ತದೆ. ಅದೇ ರೀತಿ ಉಳಿದ ಪ್ರಶಸ್ತಿಗಳು 50,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ.
ಕಾರ್ಯಕ್ರಮದ ಉದ್ದೇಶ ವಿವರಿಸಿದ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿಎಲ್ ಶಂಕರ್, ದೇಶದ ಪ್ರಮುಖ 10 ಚಿತ್ರಕಲಾ ಪರಿಷತ್ನಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ ಸಹ ಒಂದಾಗಿದೆ. ಅತ್ಯುತ್ತಮ ಮೂಲ ಸೌಕರ್ಯ ಹಾಗೂ ಬೆಂಬಲವನ್ನ ಒಳಗೊಂಡು ಚಿತ್ರಕಲಾ ಪರಿಷತ್ ಉತ್ತಮ ಸಾಧನೆ ಮಾಡುತ್ತಾ ಬಂದಿದೆ. ಚಿತ್ರಕಲಾ ಪರಿಷತ್ ಆರಂಭದಿಂದಲೂ ಈ ಸ್ಥಳದಲ್ಲಿ ಇರಲಿಲ್ಲ. ಬೇರೆ ಬೇರೆ ಸ್ಥಳಗಳಲ್ಲಿ ಅಂತಹ ಹಂತವಾಗಿ ಬೆಳೆದು ಇಂದು ಈ ಹಂತಕ್ಕೆ ತಲುಪಿದೆ.
ಚಿತ್ರಕಲಾ ಪರಿಷತ್ಗೆ ಎಸ್ಎಂಕೆ ಕೊಡುಗೆ: ಡಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಚಿತ್ರಕಲಾ ಪರಿಷತ್ ಸ್ಥಾಪನೆಗೆ ಎಸ್ಎಂ ಕೃಷ್ಣ ಅವರು ವಿಶೇಷ ಶ್ರಮ ವಹಿಸಿ ಪ್ರಯತ್ನಿಸಿ ಸಫಲರಾದರು. ಬೇರೆ ಉದ್ದೇಶಕ್ಕೆ ಈ ಸ್ಥಳವನ್ನು ನೀಡಲು ಸರ್ಕಾರ ತೀರ್ಮಾನಿಸಿದ್ದ ಸಂದರ್ಭದಲ್ಲಿ ಅವರ ಮನವೊಲಿಸಿ ಚಿತ್ರಕಲಾ ಪರಿಷತ್ತಿಗೆ ಕೊಡಿಸುವಲ್ಲಿ ಎಸ್ಎಂಕೆ ಸಹಾಯಕರಾದರು. ಜೊತೆಗೆ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನವನ್ನು ಸಹ ಕೊಡಿಸಿದ್ದರು. ಇಂದು ಕರ್ನಾಟಕದ ಒಂದು ಪ್ರತಿಷ್ಠಿತ ಸಾಂಸ್ಕೃತಿಕ ಕೇಂದ್ರವಾಗಿ ಚಿತ್ರಕಲಾ ಪರಿಷತ್ ಬೆಳೆದಿದ್ದರೆ ಇಲ್ಲಿ ಸಾಕಷ್ಟು ಜನರ ಸಹಕಾರ ಇದೆ ಎಂದು ಬಿ ಎಲ್ ಶಂಕರ್ ಹೇಳಿದರು.
ಸಿಎಂ ಬೊಮ್ಮಾಯಿ ಅವರಿಂದ ಚಿತ್ರ ಸಂತೆ ಉದ್ಘಾಟನೆ: ಸಾಮಾನ್ಯ ಕಲಾವಿದರಿಗೂ ಅವಕಾಶ ಕಲ್ಪಿಸಬೇಕು ಎಂಬ ಸದುದ್ದೇಶದಿಂದ 20 ವರ್ಷಗಳ ಹಿಂದೆ ಚಿತ್ರಸಂತೆ ಆರಂಭಿಸಲಾಯಿತು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂತೆಯ ಉದ್ಘಾಟನೆ ಮಾಡಲಿದ್ದಾರೆ. ಎಸ್ಎಮ್ ಕೃಷ್ಣ ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ ಇನ್ನಷ್ಟು ಸ್ಥಳವನ್ನು ಚಿತ್ರಕಲಾ ಪರಿಷತ್ಗೆ ನೀಡುವ ಕಾರ್ಯ ಮಾಡಿದ್ದಾರೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಬಿಎಸ್ ಯಡಿಯೂರಪ್ಪ ಸೇರಿದಂತೆ ಬಹುತೇಕ ಮುಖ್ಯಮಂತ್ರಿಗಳ ಸಹಕಾರವನ್ನು ಸ್ಮರಿಸಲೇಬೇಕು. ಚಿತ್ರಕಲಾ ಪರಿಷತ್ ಚಟುವಟಿಕೆ ವಿಸ್ತಾರ ಗೊಳ್ಳುತ್ತಿದೆ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷರು ಹೇಳಿದರು.
ಪ್ರಶಸ್ತಿ ಬಂದಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ; ಪ್ರೊ. ಕೆ ಲಕ್ಷ್ಮ ಗೌಡ ಮಾತನಾಡಿ, ಕಳೆದ 30 ವರ್ಷಗಳಿಂದ ಪ್ರತಿವರ್ಷ ನಾನು ಚಿತ್ರಕಲಾ ಪರಿಷತ್ಗೆ ಭೇಟಿ ನೀಡುತ್ತಾ ಬಂದಿದ್ದೇನೆ. ಇಂದು ನನಗೆ ಪ್ರೊಫೆಸರ್ ಎಂಎಸ್ ನಂಜುಂಡ ರಾವ್ ಹೆಸರಿನಲ್ಲಿ ಪ್ರಶಸ್ತಿ ನೀಡಿರುವುದಕ್ಕೆ ನನಗೆ ಹೆಮ್ಮೆ ಇದೆ. ಅತ್ಯಂತ ಸರಳ ವ್ಯಕ್ತಿತ್ವವನ್ನು ಹೊಂದಿದ್ದ ಅವರನ್ನು ನಾನು ಸದಾ ನೋಡುತ್ತಾ ಬೆಳೆದಿದ್ದೇನೆ. ಈ ಇಡೀ ಆಭರಣವನ್ನು ನಿತ್ಯ ಹಬ್ಬದ ರೀತಿ ಸಿಂಗರಿಸುವ ಕಾರ್ಯ ಅವರಿಂದ ಆಗಿದೆ. ಚಿತ್ರಕಲಾ ಕ್ಷೇತ್ರದಲ್ಲಿ ಗುಣಮಟ್ಟದ ಬದಲಾವಣೆ ತರಲು ಈ ಪರಿಷತ್ ಕಾರ್ಯನಿರ್ವಹಿಸಲಿ ಎಂದು ಹಾರೈಸಿದರು.
ಚಿತ್ರ ಸಂತೆಯದ್ದು ಒಂದು ಯಶೋಗಾಥೆ: ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಮಾತನಾಡಿ, ಚಿತ್ರ ಸಂತೆ ಈಗಾಗಲೇ ಒಂದು ಯಶೋಗಾಥೆಯಾಗಿದೆ. ನಾಳೆ ನಡೆಯುವ 20ನೇ ಚಿತ್ರ ಸಂತೆ ಬೆಂಗಳೂರಿನ ನಾಗರಿಕರಿಗೆ ಕಲೆಯ ಬಗ್ಗೆ ಔತಣವನ್ನು ನೀಡಲಿದೆ. ಚಿತ್ರಕಲಾ ಪರಿಷತ್ತಿಗೆ ಇಂತದ್ದೊಂದು ಉತ್ತಮ ಅವಕಾಶವನ್ನು ಒದಗಿಸಿ ಕೊಡುತ್ತಿದೆ. ಈ ಚಿತ್ರಕಲಾ ಪರಿಷತ್ನ ಕಥೆ ಕೆಲವರಿಗೆ ಗೊತ್ತಿಲ್ಲ. ಅದನ್ನು ವಿವರಿಸುತ್ತೇನೆ ಎಂದ ಅವರು ಸವಿಸ್ತಾರವಾಗಿ ಒಂಬತ್ತು ಎಕರೆ ಪ್ರದೇಶದಲ್ಲಿ ಚಿತ್ರಕಲಾ ಪರಿಷತ್ ತಲೆಯೆತ್ತಿದ ರೀತಿಯನ್ನು ವಿವರಿಸಿದರು.
ಈ ಚಿತ್ರಕಲಾ ಪರಿಷತ್ ಸ್ಥಾಪನೆಯಲ್ಲಿ ಸಹಕರಿಸಿದ ದೇವರಾಜ್ ಅರಸು ಅವರನ್ನು ಎಷ್ಟು ನೆನೆದರೆ ಸಾಲದು. ರೋರಿಕ್ ದಂಪತಿ ಚಿತ್ರಕಲಾ ಪರಿಷತ್ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಪ್ರೊಫೆಸರ್ ನಂಜುಂಡ ರಾವ್ ತಮ್ಮ ಜೀವನವನ್ನೇ ಈ ಚಿತ್ರಕಲಾ ಪರಿಷತ್ಗಾಗಿ ಸವೆದಿದ್ದಾರೆ. ಪರಿಷತ್ತಿಗೆ ಉತ್ತಮ ಹೆಸರು ಬರುವಲ್ಲಿ ಅಧ್ಯಕ್ಷ ಬಿಎಲ್ ಶಂಕರ್ ಕೊಡುಗೆಯೂ ಇದೆ. ಪ್ರಶಸ್ತಿ ಪುರಸ್ಕೃತರಿಗೆ ನಮ್ಮ ಗೌರವ ಸರಳವಾಗಿದ್ದರೂ ಅದರ ಹಿಂದಿರುವ ಭಾವನೆ ದೊಡ್ಡದು. ಸಂಸ್ಥೆಗೆ ತಮ್ಮ ಆಶೀರ್ವಾದ ಬೇಕು ಎಂದು ಸನ್ಮಾನಿತರಲ್ಲಿ ಎಸ್ ಎಂ ಕೃಷ್ಣ ಮನವಿ ಮಾಡಿದರು.
ಚಿತ್ರಕಲೆಯನ್ನೇ ನಂಬಿ ಬದುಕುತ್ತಿರುವವರ ಕಲೆಯನ್ನು ಕೊಂಡುಕೊಳ್ಳುವ ಮೂಲಕ ಗೌರವ ಸಮರ್ಪಣೆ ಮಾಡಬೇಕು. ಈ ನಿಟ್ಟಿನಲ್ಲಿ ನಾಳಿನ ಚಿತ್ರ ಸಂತೆ ಯಶಸ್ವಿಯಾಗಲಿ. ಮುಂಬರುವ ದಿನಗಳಲ್ಲಿ ಚಿತ್ರಕಲಾ ಪರಿಷತ್ ಸಹ ಹೆಚ್ಚಿನ ಉನ್ನತಿಯನ್ನು ಕಾಣಲಿ ಎಂದು ಮಾಜಿ ಸಿಎಂ ಹಾರೈಸಿದರು.
ಇದನ್ನೂ ಓದಿ: ಕಲಾವಿದರ ಹಾಸ್ಯ, ಕನ್ನಡದ ಹಾಡುಗಳಿಗೆ ಕುಣಿದು ಕುಪ್ಪಳಿಸಿದ ಕನ್ನಡಪ್ರೇಮಿಗಳು.. ಮನಗೆದ್ದ ಪುಸ್ತಕ ಪ್ರದರ್ಶನ ಫಲಪುಷ್ಪ ಪ್ರದರ್ಶನ