ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2020-21ನೇ ಸಾಲಿನ ಬಜೆಟ್ ಮಂಡಿಸಿದ್ದು, ರಾಜ್ಯದಲ್ಲಿ ಜಲಕ್ಷಾಮ ನಿವಾರಿಸಲು ಪಣ ತೊಟ್ಟಿದ್ದಾರೆ. ಉತ್ತರ ಕರ್ನಾಟಕ ಭಾಗದ ಜನರಿಗೆ ಹಾಗೂ ರೈತರಿಗೆ ಅತ್ಯಂತ ಸಹಾಯವಾಗುವ ಬಹು ನಿರೀಕ್ಷೆಯ ಮಹದಾಯಿ ಯೋಜನೆಯನ್ನು ತ್ವರಿತವಾಗಿ ಮುಂದುವರೆಸಲು ಸರ್ಕಾರವು ಬದ್ಧವಾಗಿದ್ದ, ಸರ್ವೋಚ್ಛ ನ್ಯಾಯಾಲಯ ನೀಡಿರುವ ನಿರ್ದೇಶನದಂತೆ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆ ಅನ್ವಯ ಸರ್ಕಾರವು ಮಹದಾಯಿ ಯೋಜನೆಯಡಿ ಕಳಸಾ ಮತ್ತು ಬಂಡೂರಿ ನಾಲಾಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು 2020-21ನೇ ಸಾಲಿನಲ್ಲಿ 500 ಕೋಟಿ ರೂ.ಗಳನ್ನು ಒದಗಿಸಲಿದೆ.
ಪ್ರಮುಖಾಂಶಗಳು:
- ನೀರಿನ ಆಯವ್ಯಯ, ನೀರಿನ ಆಡಿಟ್ ಮತ್ತು ನೀರಿನ ಕೊರತೆ ನೀಗಿಸುವ ಕಾರ್ಯತಂತ್ರದ ಅಡಿಯಲ್ಲಿ ರಾಜ್ಯದ ಪ್ರತಿ ಗ್ರಾಮಗಳಲ್ಲಿ “ಜಲಗ್ರಾಮ ಕ್ಯಾಲೆಂಡರ್” ಯೋಜನೆ.
- ಕರಾವಳಿ ಪ್ರದೇಶದಲ್ಲಿ ಪಶ್ಚಿಮ ಘಟ್ಟದ ನದಿಗಳಿಗೆ ಅಡ್ಡಲಾಗಿ “ಕಿಂಡಿ ಅಣೆಕಟ್ಟು ಯೋಜನೆ”ಗಳನ್ನು ವ್ಯಾಪಕವಾಗಿ ಅನುಷ್ಠಾನಗೊಳಿಸುವ ಕುರಿತು ಯೋಜನೆ.
- ದೇಶದ ಜಲಕ್ಷಾಮ ಅನುಭವಿಸುತ್ತಿರುವ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಅಟಲ್ ಭೂ-ಜಲ ಯೋಜನೆಯನ್ನು ಕೇಂದ್ರ ಸರ್ಕಾರವು ಘೋಷಿಸಿದೆ. ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದಿಂದ ನಿರೀಕ್ಷಿಸಲಾಗಿರುವ 1,202 ಕೋಟಿ ರೂ.ಗಳನ್ನು ಉಪಯೋಗಿಸಿಕೊಂಡು ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಅವಶ್ಯಕ ಕಾರ್ಯಕ್ರಮಗಳನ್ನು ಮುಂದಿನ ಐದು ವರ್ಷಗಳಲ್ಲಿ ಕೈಗೆತ್ತಿಕೊಳ್ಳಲು ಚಿಂತನೆ.
- ನೀರು ಸಂರಕ್ಷಣೆಯ ಹಿತದೃಷ್ಟಿಯಿಂದ ರಾಜ್ಯದ ಬೃಹತ್ ನೀರಾವರಿ ಯೋಜನೆಯಡಿಯಲ್ಲಿನ ಅಚ್ಚುಕಟ್ಟು ಪ್ರದೇಶಗಳಲ್ಲಿ ಇಸ್ರೇಲ್ ಮಾದರಿಯಲ್ಲಿ ಸೂಕ್ಷ್ಮ ನೀರಾವರಿಗೆ ಪರಿವರ್ತಿಸಲು ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲಾಗುವುದು. ಇದೇ ವೇಳೆ 2020-21ನೇ ಸಾಲಿನಲ್ಲಿ ಜಲಸಂಪನ್ಮೂಲ ಇಲಾಖೆಯ ಮೂಲಕ ಒಂದು ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ನೀಡಿಕೆ.
- ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ರಾಜ್ಯದ ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ಶೀಘ್ರವಾಗಿ ಸುರಕ್ಷಿತ ಕುಡಿಯುವ ನೀರು ಒದಗಿಸುವ ‘ಎತ್ತಿನಹೊಳೆ ಯೋಜನೆ’ಗೆ ಆದ್ಯತೆ.
- ಸದರಿ ಯೋಜನೆಯ ಮೊದಲನೆಯ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮುಂದಿನ ಮುಂಗಾರು ಹಂಗಾಮಿನಲ್ಲಿ ಪ್ರಾಯೋಗಿಕವಾಗಿ ಚಾಲನೆಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ. 2020-21ನೇ ಸಾಲಿನಲ್ಲಿ ಈ ಯೋಜನೆಗೆ 1500 ಕೋಟಿ ರೂ.ಗಳನ್ನು ಅನುದಾನ.
- ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ ಪೂರ್ಣ ಪ್ರಮಾಣದ ನೀರನ್ನು ಶೇಖರಣೆ ಮಾಡಲು ಸಾಧ್ಯವಾಗಿಲ್ಲ. ಈ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯದ ಕೊರತೆ ನೀಗಿಸಲು ಪರ್ಯಾಯ ಹರಿವು ನಾಲೆ ಮೂಲಕ ನವಲೆ ಹತ್ತಿರ ಸಮತೋಲನಾ ಜಲಾಶಯ ನಿರ್ಮಿಸುವ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲು 20 ಕೋಟಿ ರೂ.ಗಳ ಅನುದಾನ.
- ರಾಜ್ಯದ ವಿವಿಧ ಭಾಗಗಳಿಂದ ಏತ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಕಷ್ಟು ಬೇಡಿಕೆಗಳು ಸ್ವೀಕೃತವಾಗಿವೆ. ಆದ್ದರಿಂದ, ನೀರಿನ ಮೂಲದ ಲಭ್ಯತೆ ಹಾಗೂ ತಾಂತ್ರಿಕ ಅನುಕೂಲತೆಯನ್ನು ಆಧರಿಸಿ ಹೊಸ ಏತ ನೀರಾವರಿ ಯೋಜನೆಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದ್ದು, ಈ ಯೋಜನೆಗಳನ್ನು 5000 ಕೋಟಿ ರೂ.ಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಚಿಂತನೆ.
- ರಾಯಚೂರು, ಯಾದಗಿರಿ, ಕಲಬುರಗಿ ಭಾಗದ ಜನರಿಗೆ ಕುಡಿವ ನೀರಿನ ಸರಬರಾಜಿಗೆ ಅನುಕೂಲವಾಗುವಂತೆ ತಿಂತಿಣಿ ಬ್ರಿಡ್ಜ್ ಬಳಿ ಕೃಷ್ಣಾ ನದಿಗೆ ಜಲಾಶಯ ನಿರ್ಮಿಸಲು ಉದ್ದೇಶಿಸಿ, ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲು ಕ್ರಮ.