ಬೆಂಗಳೂರು : ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಯುವತಿಗೆ ಚೂರಿ ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿನ ಆಡಳಿತ ಮಂಡಳಿಯ ಭದ್ರತಾ ವೈಫಲ್ಯವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕಾಲೇಜಿನ ಎದುರು ಪ್ರತಿಭಟನೆ ನಡೆಸಿದರು. ಕಳೆದ ಜನವರಿ 2ರಂದು ಯಲಹಂಕದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ಲಯಸ್ಮಿತಾಳನ್ನ ಪವನ್ ಎಂಬಾತ ಕಾಲೇಜು ಕ್ಯಾಂಪಸ್ಗೆ ನುಗ್ಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ, ಇದುವರೆಗೂ ಪೊಲೀಸರು ಪ್ರೆಸಿಡೆನ್ಸಿ ಕಾಲೇಜಿನ ಆಡಳಿತ ಮಂಡಳಿಯ ಯಾರನ್ನೂ ವಿಚಾರಣೆ ನಡೆಸಿಲ್ಲ ಮತ್ತು ಬಂಧನ ಮಾಡಿಲ್ಲ ಎಂದು ಆರೋಪಿಸಿದರು.
ಕರವೇ ಕಾರ್ಯಕರ್ತರಿಂದ ಪ್ರತಿಭಟನೆ : ಘಟನೆ ಸಂಬಂಧ ಕರವೇ ಶಿವರಾಮೇಗೌಡ ಬಣದ ಕಾರ್ಯಕರ್ತರು ಕಾಲೇಜಿನ ವಿರುದ್ಧ ಪ್ರತಿಭಟನೆ ನಡೆಸಿದರು. ಕಾಲೇಜಿನ ವಿರುದ್ದ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು. ಇನ್ನು ಕೊಲೆಯಾದ ಯುವತಿಯ ಕುಟುಂಬಕ್ಕೆ ಪರಿಹಾರ ನೀಡಬೇಕು. ಕಾಲೇಜು ಆಡಳಿತ ಮಂಡಳಿ ಬೇಜವಾಬ್ದಾರಿ ನಡೆಗಳಿಂದ ಸುತ್ತಮುತ್ತಲ ಜನರಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಕಾಲೇಜಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಬೇಕು. ಇಲ್ಲವಾದರೆ ಹೆಚ್ಚಿನ ಪ್ರತಿಭಟನೆ ನಡೆಸುವುದಾಗಿ ಕರವೇ ಅಧ್ಯಕ್ಷರು ಎಚ್ಚರಿಕೆ ನೀಡಿದರು.
ಕೊಲೆ ಬಗ್ಗೆ ಕಾಲೇಜು ಆಡಳಿತ ಮಂಡಳಿ ಪ್ರತಿಕ್ರಿಯೆ : ಕೊಲೆ ಸಂಬಂಧ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಂತೆ ಕಾಲೇಜು ಮಂಡಳಿ ಎಚ್ಚೆತ್ತುಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರೆಸಿಡೆನ್ಸಿ ಕಾಲೇಜಿನ ನಿರ್ದೇಶಕರಾದ ಮನ್ಮರ್, ನಮಗೆ ವಿಶ್ವವಿದ್ಯಾಲಯದಲ್ಲಿ ಕೊಲೆಯಾಗಿದ್ದು ತುಂಬಾ ಆಘಾತವಾಗಿದೆ. ನಮಗೂ ತುಂಬಾ ನೋವನ್ನುಂಟು ಮಾಡಿದೆ. ಈ ಆಘಾತದಲ್ಲೇ ನಾವಿದ್ದೇವೆ, ಅಲ್ಲದೇ ಕಾಲೇಜಿ ಭದ್ರತಾ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಇಲ್ಲಿ 79 ಜನ ಸೆಕ್ಯುರಿಟಿ ಗಾರ್ಡ್ ಗಳಿದ್ದಾರೆ, ನಾಲ್ಕೈದು ಸೂಪರ್ವೈಸರ್ಗಳೂ ಇದ್ದಾರೆ. ಅಷ್ಟೇ ಏಕೆ ರಕ್ಷಣೆಗೆ ಬ್ರಿಗೆಡಿಯರ್ ಗಳಿದ್ದಾರೆ. ಇಷ್ಟೆಲ್ಲ ಇದ್ದರೂ ಹೇಗೆ ಈ ಘಟನೆ ನಡೆಯಿತು ಎಂದು ನಂಬಲಾಗುತ್ತಿಲ್ಲ. ಆ ಮಗು ನಮ್ಮ ಮಗು, ನಮಗೂ ನೋವು ತಡೆಯಲು ಆಗುತ್ತಿಲ್ಲ. ಕಾನೂನಿ ಪ್ರಕಾರ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಘಟನೆ ಬಗ್ಗೆ ಎಸ್ಪಿ ಮಾಹಿತಿ: ಆರೋಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಬೋರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಆದರೆ, ಆರೋಪಿ ಮಾತನಾಡುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಹೆಚ್ಚಿನ ತನಿಖೆ ಮುಂದುವರಿಸಿದ್ದೇವೆ. ಅವರಿಬ್ಬರೂ ಬೇರೆ ಬೇರೆ ಕಾಲೇಜಿನಲ್ಲಿ ಓದುತ್ತಿರುವುದರಿಂದ ಇವರಿಬ್ಬರ ಬಗ್ಗೆ ಸಹಪಾಠಿಗಳಿಗೂ ಹೆಚ್ಚಿನ ಮಾಹಿತಿ ಇಲ್ಲ. ಕೊಲೆಯ ಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ.
ಇನ್ನು ಆರೋಪಿ ಯುವತಿಯ ಸಂಬಂಧಿಕನಾಗಿದ್ದಾನೆ. ಯುವತಿ ಜೊತೆ ಓಡಾಡದಂತೆ ಯುವತಿ ಪೋಷಕರು ಎಚ್ಚರಿಸಿದ್ದರಂತೆ. ಆದರೂ ಯುವತಿ ಹಿಂದೆ ಆರೋಪಿ ಪವನ್ ಬಿದ್ದಿದ್ದ ಎಂದು ಯುವತಿ ಪೋಷಕರು ಆರೋಪಿಸಿದ್ದಾರೆ. ಈ ನಡುವೆ ಘಟನೆ ನಡೆದಿದೆ ಎಂದು ಎಸ್ಪಿ ಹೇಳಿದ್ದಾರೆ.
ಭದ್ರತಾ ವೈಫಲ್ಯ ಎಂದ ಸಂಬಂಧಿಕರು: ಆರೋಪಿ ಪವನ್ ಬೇರೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದನು. ಅವನನ್ನು ಈ ಕಾಲೇಜಿಗೆ ಚಾಕು ಹಿಡಿದು ಹೇಗೆ ಒಳಗೆ ಬಿಟ್ರು.!?. ಕಾಲೇಜಿನಲ್ಲಿ ಭದ್ರತಾ ವೈಫಲ್ಯದಿಂದಲೇ ಈ ಕೊಲೆ ನಡೆದಿದೆ ಎಂದು ಸಂಬಂಧಿಕರು ಆರೋಪಿಸಿದ್ದರು.
ಇದನ್ನೂ ಓದಿ :ಕಾಲೇಜಿನಲ್ಲಿ ಯುವತಿ ಕೊಲೆ ಪ್ರಕರಣ: ಪೊಲೀಸರು ಹೇಳಿದ್ದು ಹೀಗೆ..