ಬೆಂಗಳೂರು: ಮನುಷ್ಯನ ಮೂಲಭೂತ ವ್ಯವಸ್ಥೆಯಲ್ಲಿ ಅವನ ಅಳಿವು ಹಾಗೂ ಉಳಿವು ಇರುವುದು ನಮ್ಮ ಪರಿಸರದಲ್ಲಿ. ತಾನು ಉಳಿಯಬೇಕು ಎಂದರೆ ಸಸ್ಯಸಂಕುಲ ಉಳಿಯಲೇಬೇಕು. ಸಸ್ಯಸಂಕುಲ ಉಳಿಯಬೇಕು ಎಂದರೆ ಮನುಷ್ಯ ಹೆಚ್ಚು ಗಿಡಮರಗಳನ್ನು ನೆಡಬೇಕು ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಹೇಳಿದ್ದಾರೆ.
3 ದಿನಗಳ ಸಂಗೀತ ಸಂಭ್ರಮ ಕಾರ್ಯಕ್ರಮದ ಮೊದಲ ದಿನವಾದ ಇಂದು, ನಗರದ ಮಲ್ಲೇಶ್ವರಂನಲ್ಲಿರುವ ಬೆಂಗಳೂರು ಉತ್ತರ ಜಿಲ್ಲೆಯ ಸರಕಾರಿ ಶಾಲೆಯ ಆವರಣದಲ್ಲಿ, ವಿದ್ಯಾರ್ಥಿಗಳ ಜೊತೆಗೆ ಗಿಡಗಳನ್ನು ನೆಟ್ಟು ನಂತರ ಅವರು ಮಾತನಾಡಿದರು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗಿಡಮರಗಳನ್ನು ದೇವರೆಂದು ಪೂಜಿಸುತ್ತೇವೆ. ಈ ಪದ್ದತಿ ಬಂದಿದ್ದು, ನಮ್ಮ ರಾಮಾಯಣ ಹಾಗೂ ಮಹಾಭಾರತದಿಂದ ಎಂದರು. ರಾಮಾಯಣದಲ್ಲಿ ಬರುವಂತಹ ಅಶೋಕವನವನ್ನು ನಿರ್ಮಿಸಲು ಶ್ರೀರಾಮಯಾನ ನಡಿಗೆಯಲ್ಲಿ ಗಿಡಗಳನ್ನು ನೆಡಲಾಗುತ್ತಿದೆ. ಇದೊಂದು ಬಹಳ ಒಳ್ಳೆಯ ಕಾರ್ಯವಾಗಿದೆ. ಈ ಶಾಲಾ ಆವರಣ ಅಶೋಕವನವಾಗಿ, ಶಬರಿ ವನವಾಗಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.
![T S NAGABHARANA](https://etvbharatimages.akamaized.net/etvbharat/prod-images/5943844_thumb.png)
ಇನ್ನು ಕಾರ್ಯಕ್ರಮದ ಆಯೋಜಕಿ ಹಾಗೂ ಸಂಗೀತ ಸಂಭ್ರಮ ಟ್ರಸ್ಟ್ನ ನಿರ್ದೇಶಕಿ ಪಿ. ರಮಾ ಮಾತನಾಡಿ, ಸಂಗೀತ ಸಂಭ್ರಮ ಕಾರ್ಯಕ್ರಮದ ಮೊದಲ ಭಾಗವಾಗಿ ಮಕ್ಕಳಿಂದ ನೂರಾರು ಗಿಡಗಳನ್ನು ನೆಡೆಸುತ್ತಿರುವುದು ಬಹಳ ಸಂತಸದ ವಿಷಯವಾಗಿದೆ ಎಂದರು. ಇಂದು ಸಂಜೆ ಮಲ್ಲೇಶ್ವರಂನಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಯದುಗಿರಿ ಯತಿರಾಜ ನಾರಾಯಣ ಜೀಯರ್ ಸ್ವಾಮೀಜಿ ಸೇರಿದಂತೆ ಮಹೋನ್ನತ ಕಲಾವಿದರು ಹಾಗೂ ವಿದ್ವಾಂಸರಿಗೆ “ಸಂಭ್ರಮ ಪುರಸ್ಕಾರ” ನೀಡಿ ಗೌರವಿಸಲಾಗುವುದು. ಪ್ರಸಿದ್ದ ರಂಗಕರ್ಮಿ ಹಾಗೂ ನಿರ್ದೇಶಕರಾದ ಟಿ. ಎಸ್. ನಾಗಾಭರಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಭ್ರಮ ಪುರಸ್ಕಾರ ಸ್ವೀಕರಿಸಲಿರುವ ಶತಾವಧಾನಿ ಆರ್. ಗಣೇಶ್, ಪ್ರಾಚೀನ ಭಾರತ ಹಾಗೂ ಪ್ರಸ್ತುತ ನವ ಭಾರತದಲ್ಲಿ ರಾಮಾಯಣದ ಪ್ರಾಮುಖ್ಯತೆ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಫೆಬ್ರವರಿ 04 ರಂದು ಮಂಗಳವಾರ ಶ್ರೀರಾಮನ ಭಕ್ತೆ, ಹೆಸರಾಂತ ಸಂಗೀತಗಾರ್ತಿ ಬೆಂಗಳೂರು ನಾಗರತ್ನಮ್ಮನವರ ಜೀವನದ ಸತ್ಯ ಕಥೆಯನ್ನಾಧರಿಸಿದ, ನಾಟಕದ ಪ್ರದರ್ಶನ ಆಯೋಜಿಸಲಾಗಿದೆ. ಇದರ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನ ಟಿ.ಎಸ್. ನಾಗಾಭರಣ ಅವರದ್ದಾಗಿದೆ ಎಂದರು. ಫೆಬ್ರವರಿ 05 ರಂದು ಶ್ರೀ ರಾಮ ಯಾನ ರಾಮಾಯಣ ಗ್ರಂಥ ಕುರಿತು, ನೃತ್ಯ ರೂಪಕವನ್ನು ಆಯೋಜಿಸಲಾಗಿದೆ. ಶ್ರೀ ರಾಮಾಯಣ ಸಮಗ್ರತೆಯನ್ನು ಸುಂದರ ಕಾವ್ಯದ ರೂಪದಲ್ಲಿ ಹಿರಿಯ ಕಲಾವಿದರುಗಳು ವೇದಿಕೆಯ ಮೇಲೆ ಪ್ರಸ್ತುತಪಡಿಸಲಿದ್ದಾರೆ. ಪ್ರಶಾಂತ್ ಗೋಪಾಲ ಶಾಸ್ತ್ರಿ ಶ್ರೀ ರಾಮನ ಪಾತ್ರದಲ್ಲಿ ಹಾಗೂ ಸೌಂದರ್ಯ ಶ್ರೀವತ್ಸ ಅವರು ಸೀತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂರು ದಿನಗಳ ಕಾರ್ಯಕ್ರಮಕ್ಕೆ ನಮ್ಮ ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಾ ಸಿ.ಎನ್ ಅಶ್ವಥ್ ನಾರಾಯಣ ಅವರು ಬಹಳ ಸಹಯೋಗವನ್ನು ನೀಡಿದ್ದಾರೆ ಎಂದು ಹೇಳಿದರು.