ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಶ್ರೀರಾಮಯಾನ ಕುರಿತ ನೃತ್ಯ ರೂಪಕವು, ಫೆಬ್ರವರಿ 5 ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿದೆ. ಈ ಕುರಿತು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ನಿರ್ದೇಶಕ ಟಿ. ಎಸ್. ನಾಗಾಭರಣ ಮಾಹಿತಿ ನೀಡಿದ್ದಾರೆ.
ಸಂಗೀತ ಸಂಭ್ರಮ ಟ್ರಸ್ಟ್ ವತಿಯಿಂದ ಸಂಗೀತಗಾರ್ತಿ ಪಿ. ರಮಾ ಮತ್ತು ನೃತ್ಯ ಕಲಾವಿದೆ ಡಾ.ವೀಣಾ ಮೂರ್ತಿ ವಿಜಯ್ ಅವರು, ಫೆಬ್ರವರಿ 3, 4 ಮತ್ತು 5 ರಂದು, ಮೂರು ದಿನಗಳ ಕಾಲ ರಾಮಯಾನದ ಕುರಿತು ವಿವಿಕಲಾ ಉತ್ಸವ ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.
ಈ ಅಭಿಯಾನದಲ್ಲಿ ರಾಮಾಯಣ ಕುರಿತಂತೆ ಅಂತರ್ಶಾಲಾ ಮಟ್ಟದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಫೆಬ್ರವರಿ 3ರಂದು ಸ್ಪರ್ಧಾ ವಿಜೇತರಿಂದ ಪ್ರದರ್ಶನ, ಶ್ರೀ ರಾಮಯಾನ ನಡಿಗೆ ಮತ್ತು ಗಿಡನೆಡುವ ಕಾರ್ಯಕ್ರಮ ನಡೆಯಲಿದ್ದು, 24 ಶಾಲೆಯ 2,000 ಮಕ್ಕಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಫೆಬ್ರವರಿ 4ರಂದು ಬೆಂಗಳೂರು ನಾಗರತ್ನಮ್ಮನವರ ಜೀವನದ ಸತ್ಯ ಕಥೆಯನ್ನಾಧರಿಸಿದ ನಾಟಕದ ಪ್ರದರ್ಶನ ಆಯೋಜಿಸಲಾಗಿದ್ದು, ಇದರ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶವನ್ನು ಟಿ.ಎಸ್. ನಾಗಾಭರಣ ನಿರ್ವಹಿಸಲಿದ್ದಾರೆ. ಇನ್ನು ಫೆಬ್ರವರಿ 5 ರಂದು ಶ್ರೀರಾಮ ಯಾನ ಕುರಿತು ನೃತ್ಯ ರೂಪಕ ಆಯೋಜಿಸಲಾಗಿದ್ದು, ಶ್ರೀ ರಾಮಾಯಣದ ಸಮಗ್ರತೆಯನ್ನು ಸುಂದರ ಕಾವ್ಯದ ರೂಪದಲ್ಲಿ ಹಿರಿಯ ಕಲಾವಿದರುಗಳು ವೇದಿಕೆಯ ಮೇಲೆ ಪ್ರಸ್ತುತಪಡಿಸಲಿದ್ದಾರೆ.