ಬೆಂಗಳೂರು : ನಗರದ ನೂತನ ಪೊಲೀಸ್ ಆಯುಕ್ತರಾಗಿ ಹಿರಿಯ ಐಪಿಎಸ್ ಅಧಿಕಾರಿ ಕಮಲ್ ಪಂತ್ ಅಧಿಕಾರ ಸ್ವೀಕರಿಸಿದ್ದಾರೆ. ನಿರ್ಗಮಿತ ಕಮಿಷನರ್ ಭಾಸ್ಕರ್ ರಾವ್ ಅವರಿಂದ ಕಮಲ್ ಪಂತ್ ಅಧಿಕಾರ ದಂಡ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಕಮಲ್ ಪಂತ್, ಹಿಂದೆ ಕಮಿಷನರ್ ಹುದ್ದೆ ನಿರ್ವಹಿಸಿದ ಹಿರಿಯ ಅಧಿಕಾರಿಗಳಂತೆ ನಾನು ಸರ್ಕಾರ ನೀಡಿದ ಈ ಜವಾಬ್ದಾರಿಯನ್ನು ದಕ್ಷತೆಯಿಂದ ನಿರ್ವಹಿಸುತ್ತೇನೆ ಎಂದರು. ಬೆಂಗಳೂರು ಜನರ ರಕ್ಷಣೆ ನಮ್ಮ ಹೊಣೆ, ಇದಕ್ಕೆ ನಾನು ಬೆಂಗಳೂರು ನಾಗರಿಕರ ಸಹಕಾರ ಕೇಳುತ್ತೇನೆ. ತಿಂಗಳಿಗೊಮ್ಮೆ ಡಿಸಿಪಿಗಳ ಕಚೇರಿಗೆ ಭೇಟಿ ನೀಡುತ್ತೇನೆ. ದಿನ ಪೂರ್ತಿ ಆಯಾ ವಿಭಾಗದಲ್ಲಿ ನಡೆದಿರುವ ತಿಂಗಳ ಕ್ರೈಂ ಬಗ್ಗೆ ಮಾಹಿತಿ ಪಡೆಯುತ್ತೇನೆ. ಇಂದು ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಎಲ್ಲರ ಜತೆ ಮಾತನಾಡಿ ಮುಂದಿನ ದಿನಗಳಲ್ಲಿ ಉತ್ತಮ ನಿರ್ಣಯ ತೆಗೆದುಕೊಳ್ತೇನೆ ಎಂದು ಹೇಳಿದರು.
ಭಾಸ್ಕರ್ ರಾವ್ ಮತ್ತು ಕಮಲ್ ಪಂತ್ ಒಂದೇ ಬ್ಯಾಚಿನ ಅಧಿಕಾರಿಗಳು. ಬೆಂಗಳೂರು ಆಯುಕ್ತರಾಗಿದ್ದ ಭಾಸ್ಕರ್ ರಾವ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಇಷ್ಟು ದಿನ ಕಮಲ್ ಪಂತ್ ಗುಪ್ತಚರ ವಿಭಾಗದ ಎಡಿಜಿಪಿ ಆಗಿ ಕಾರ್ಯನಿರ್ವಹಿಸಿದ್ದರು.