ಬೆಂಗಳೂರು: ರಾಜ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಅಳವಡಿಕೆ ಮತ್ತು ನಿರ್ವಹಣೆಯಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರದ ತನಿಖೆ ನಡೆಸಲು ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಜಂಟಿ ಸದನ ಸಮಿತಿ ರಚನೆ ಮಾಡಲಾಗಿದೆ.
ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯಿಂದ ಜಂಟಿ ಸದನ ಸಮಿತಿ ರಚನೆ ಮಾಡಿ ಆದೇಶ ಹೊರಡಿಸಲಾಗಿದೆ. ಜೂನ್ 30ರ ಒಳಗಾಗಿ ಜಂಟಿ ಸದನ ಸಮಿತಿ ಅಕ್ರಮ ಆರೋಪದ ಕುರಿತಾಗಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.
ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರನ್ನು ಒಳಗೊಂಡ 20 ಮಂದಿಯನ್ನು ಒಳಗೊಂಡ ಸಮಿತಿ ಇದಾಗಿದೆ.
ಅಪ್ಪಚ್ಚು ರಂಜನ್, ಎ.ಎಸ್ ಪಾಟೀಲ್ ನಡಹಳ್ಳಿ, ವೀರಣ್ಣ ಚರಂತೀಮಠ್, ಕೆ. ಶಿವನಗೌಡ ನಾಯಕ್, ಬಿ.ಸಿ ನಾಗೇಶ್, ಪಿ. ರಾಜೀವ್, ಹಾಲಪ್ಪ ಆಚಾರ್, ರಾಜೇಶ್ ನಾಯ್ಕ್, ಕೆ.ಜೆ ಜಾರ್ಜ್, ಕೃಷ್ಣ ಬೈರೇಗೌಡ, ಯು.ಟಿ ಖಾದರ್, ಈಶ್ವರ್ ಖಂಡ್ರೆ, ಎ.ಟಿ ರಾಮಸ್ವಾಮಿ, ವೆಂಕಟ್‌ರಾವ್ ನಾಡಗೌಡ ಹಾಗೂ ವಿಧಾನ ಪರಿಷತ್ ಸದಸ್ಯರಾದ ಎಸ್.ರವಿ, ವಿಜಯ್ ಸಿಂಗ್, ಹೆಚ್.ಎಂ ರಮೇಶ್ ಗೌಡ, ದೇವೇಗೌಡ, ಎಸ್.ವಿ ಸಂಕನೂರ ಸಮಿತಿಯ ಸದಸ್ಯರಾಗಿದ್ದಾರೆ.
ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಹಾಗೂ ನಿರ್ವಹಣೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಸ್ವತಃ ಶಾಸಕರೇ ಆರೋಪ ಮಾಡಿದ್ದರು. ವಿಧಾನಸಭೆಯಲ್ಲಿ ಈ ವಿಚಾರವನ್ನು ಆಡಳಿತ ಪಕ್ಷದ ಶಾಸಕರು ಸೇರಿದಂತೆ ಪ್ರತಿಪಕ್ಷದ ಶಾಸಕರು ಪ್ರಶ್ನಿಸಿದ್ದರು. ಈ ಕುರಿತಾಗಿ ತನಿಖೆ ನಡೆಸುವಂತೆ ಆಗ್ರಹಿಸಿದ್ದರು.
ಇದಕ್ಕೆ ಸ್ಪಂದಿಸಿದ್ದ ಸಿಎಂ ಯಡಿಯೂರಪ್ಪ ಹಾಗೂ ಕೆ.ಎಸ್ ಈಶ್ವರಪ್ಪ ಅವರು ತನಿಖೆಯ ಭರವಸೆ ನೀಡಿದ್ದರು. ಅದರಂತೆ ಇದೀಗ ಜಂಟಿ ಸದನ ಸಮಿತಿ ರಚನೆ ಮಾಡಲಾಗಿದೆ.