ಬೆಂಗಳೂರು : ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ಕುರಿತು ಸಿಎಂ ಕುಮಾರಸ್ವಾಮಿ ಅವರು ಚರ್ಚೆಗೆ ಆಹ್ವಾನ ನೀಡುವ ಬದಲು ತಕ್ಷಣ ವಿಧಾನಸಭೆ ಅಧಿವೇಶನ ಕರೆಯಲಿ. ನಾವೂ ಸಹ ಚರ್ಚೆಗೆ ಸಿದ್ಧರಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ ಮೈತ್ರಿ ಸರ್ಕಾರದ ಮುಖಂಡರೇ ಚರ್ಚೆ ನಡೆಸಬೇಕೆಂದಿದ್ದಾರೆ ಎಂದು ಮಾಜಿ ಡಿಸಿಎಂ, ಬಿಜೆಪಿ ಶಾಸಕ ಆರ್. ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನ ಕರೆದು ಎಲ್ಲರೂ ದೊಡ್ಡ ಚರ್ಚೆ ಮಾಡಲಿ. ಯಾವುದು ಸತ್ಯ, ಯಾವುದು ಸುಳ್ಳು ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ. ಚರ್ಚೆಗೆ ಆಹ್ವಾನಿಸಿ ಸಿಎಂ ಪತ್ರ ಬರೆದಿರುವುದು ಕೇವಲ ಜನರು ಮತ್ತು ಮಾಧ್ಯಮದವರ ಕಣ್ಣು ಒರೆಸುವ ತಂತ್ರ. ಕೊಟ್ಟ ಹಾಗೆ ಇರಬೇಕು, ಕೊಡದ ಹಾಗೆ ಇರಬೇಕು ಎಂಬಂತೆ ಸಿಎಂ ಪತ್ರ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಹೋರಾಟ ನಿಲ್ಲದು : ಜಿಂದಾಲ್ ಸಂಬಂಧ ಮೈತ್ರಿ ಸರ್ಕಾರದ ವಿರುದ್ಧ ನಡೆಸುತ್ತಿರುವ ಹೋರಾಟ ನಿಲ್ಲಿಸುವುದಿಲ್ಲ. ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದರು. ಜಿಂದಾಲ್ ವಿಚಾರವಾಗಿ ಬಿಜೆಪಿ ಚರ್ಚೆಗೆ ಬರದೇ ಪಲಾಯನ ಮಾಡುತ್ತಿದೆ ಎಂಬ ಸಿಎಂ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅಶೋಕ್, ಸಿಎಂ ಕುಮಾರಸ್ವಾಮಿ ಅವರು ಎಲ್ಲಿ ಇರುತ್ತಾರೆ ಎಂದು ಯಾರಿಗೂ ಗೊತ್ತಿಲ್ಲ. ಅವರು ಯಾರ ಕೈಗೂ ಸಿಗುತ್ತಿಲ್ಲ. ಅವರು ಎಲ್ಲಿ ಸಿಗುತ್ತಾರೆ ಅಂತ ಗೊತ್ತಿಲ್ಲ. ಯಾವ ಮನೆಯಲ್ಲಿ ಇರುತ್ತಾರೆ ಅನ್ನೋದು ನಮಗೆ ಗೊತ್ತಿಲ್ಲ. ಅವರ ಜೊತೆ ಹೇಗೆ ಚರ್ಚೆ ಮಾಡುವುದು ಎಂದು ಪ್ರಶ್ನಿಸಿದರು.
ಜಿಂದಾಲ್ ವಿಚಾರದಲ್ಲಿ ಯಡಿಯೂರಪ್ಪ ಅವರು ಚೆಕ್ ಪಡೆದಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣದಲ್ಲಿ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದೆ ಎಂದು ಸ್ಪಷ್ಟಪಡಿಸಿದರು. ಜಿಂದಾಲ್ ಬಗ್ಗೆ ಧ್ವನಿ ಎತ್ತಿದ್ದು ಯಡಿಯೂರಪ್ಪ ಅಲ್ಲ. ಕಾಂಗ್ರೆಸ್ನ ಹಿರಿಯ ಮುಖಂಡ ಹೆಚ್.ಕೆ. ಪಾಟೀಲ್ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಮತ್ತಿತರ ನಾಯಕರುಗಳೇ ಈ ಹಗರಣದ ವಿರುದ್ಧ ಮಾತನಾಡಿದ್ದಾರೆ. ಅವರ ಅನುಮಾನಗಳಿಗೆ ಮೊದಲು ಪರಿಹಾರ ಕೊಡಿ ಎಂದು ಒತ್ತಾಯಿಸಿದರು.
ಯಡಿಯೂರಪ್ಪ ಅವರ ಅಧಿಕಾರದ ಅವಧಿಯಲ್ಲಿ ಜಿಂದಾಲ್ಗೆ ಭೂಮಿ ನೀಡಿದ ಆರೋಪವನ್ನು ತಳ್ಳಿಹಾಕಿದ ಅಶೋಕ್, ಜಿಂದಾಲ್ಗೆ ಭೂಮಿ ನೀಡಿದಾಗ ಸಿಎಂ ಆಗಿದ್ದು ಕುಮಾರಸ್ವಾಮಿಯವರು. ಗಣಿ ಖಾತೆ ಇದ್ದದ್ದು ಅವರ ಕೈಯಲ್ಲೇ. ಆವತ್ತು ನಮಗೆ ಆ ಅಧಿಕಾರ ಇರಲೇ ಇಲ್ಲ. ನಾವು ಹೇಗೆ ಜಿಂದಾಲ್ಗೆ ಭೂಮಿ ಕೊಡಲು ಸಾಧ್ಯ ಎಂದು ಪ್ರಶ್ನಿಸಿದರು.
ಜಿಂದಾಲ್ನಲ್ಲಿ ಕನ್ನಡಿಗರಿಗೂ ಉದ್ಯೋಗ ಸಿಕ್ಕುವುದಿಲ್ಲ. ಮೈನಿಂಗ್ಗೆಂದು ಜಾಗ ತೆಗೆದುಕೊಂಡು ಜಿಂದಾಲ್ನವರು ಒಳಗೆ ಹೋಟೆಲ್ಗೆ ಸ್ಥಳ ಕೊಟ್ಟಿರೋದು ಯಾಕೆ? ಸ್ಥಳೀಯ ಶಾಸಕರು ಜಿಂದಾಲ್ಗೆ ಭೂಮಿ ಮಾರಾಟ ಮಾಡುವುದನ್ನು ವಿರೋಧಿಸುತ್ತಿದ್ದಾರೆ. ಇದೊಂದು ದೊಡ್ಡ ಹಗರಣವಾಗಿದೆ ಎಂದು ದೂರಿದರು.
ಜಿಂದಾಲ್ ಪ್ರಕರಣದ ಪರಿಶೀಲನೆಗೆ ಸಚಿವ ಸಂಪುಟ ಉಪಸಮಿತಿ ರಚಿಸಿರುವ ಕ್ರಮದ ಬಗ್ಗೆಯೂ ನಿರಾಶೆ ವ್ಯಕ್ತಪಡಿಸಿದ ಅಶೋಕ್, ಉಪಸಮಿತಿ ವರದಿಯನ್ನು ನಾವು ಒಪ್ಪುವುದಿಲ್ಲ. ಉಪಸಮಿತಿ ರಚನೆಯೇ ಬೇಕಿರಲಿಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಜಿಂದಾಲ್ಗೆ ಭೂಮಿ ಕೊಡೋದಕ್ಕೆ ಸಿಎಂ, ಕೆ.ಜೆ. ಜಾರ್ಜ್ ಮತ್ತು ಡಿ.ಕೆ. ಶಿವಕುಮಾರ್ ಬಿಟ್ಟು ಇನ್ಯಾರಿಗೂ ಇಷ್ಟ ಇಲ್ಲ ಎಂದು ಹೇಳಿದರು.