ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಉಪಚುನಾವಣೆಯಲ್ಲಿ ಜೆಡಿಎಸ್ ತಟಸ್ಥವಾಗಿ ಉಳಿಯುವುದೇ? ಎಂಬ ಪ್ರಶ್ನೆ ಎದ್ದಿದೆ.
ಜೆಡಿಎಸ್ನಿಂದ ರಾಜ್ಯಸಭಾ ಸದಸ್ಯರಾಗಿದ್ದ ಕೆ.ಸಿ. ರಾಮಮೂರ್ತಿ ಅವರ ರಾಜೀನಾಮೆಯಿಂದ ತೆರವಾಗಿರುವ ಒಂದು ಸ್ಥಾನಕ್ಕೆ ಡಿ.12 ರಂದು ಉಪಚುನಾವಣೆ ದಿನಾಂಕ ಘೋಷಣೆಯಾಗಿದೆ. ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ರಾಜ್ಯಸಭೆ ಉಪಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿ ಗೆಲ್ಲಲು ಕನಿಷ್ಠ 112 ಶಾಸಕರ ಮತಗಳನ್ನು ಪಡೆಯಬೇಕಾಗುತ್ತದೆ. ಆದ್ರೆ ಜೆಡಿಎಸ್ ಶಾಸಕರ ಸಂಖ್ಯಾಬಲ 34 ಇದೆ. ಹೀಗಾಗಿ ಗೆಲ್ಲುವಷ್ಟು ಶಾಸಕರು ವಿಧಾನಸಭೆಯಲ್ಲಿ ಇಲ್ಲದ ಕಾರಣ ರಾಜ್ಯಸಭೆ ಉಪಚುನಾವಣೆಯಲ್ಲಿ ಸ್ಪರ್ಧೆಯಿಂದ ದೂರ ಉಳಿಯುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವಿನ ಮೈತ್ರಿ ಈಗಾಗಲೇ ಮುರಿದುಬಿದ್ದಿದ್ದು, ವಿಧಾನಸಭೆ ಉಪಚುನಾವಣೆಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧೆಗಿಳಿದಿವೆ. ಹಾಗಾಗಿ, ರಾಜ್ಯಸಭೆ ಉಪಚುನಾವಣೆ ಸಂದರ್ಭದಲ್ಲಿ ಮತ್ತೆ ಈ ಎರಡೂ ಪಕ್ಷಗಳ ನಡುವೆ ಮೈತ್ರಿ ಮೂಡುವ ಸಾಧ್ಯತೆ ಕಡಿಮೆ ಎನ್ನಲಾಗ್ತಿದೆ. ಅಲ್ಲದೆ, ವಿಧಾನಸಭೆ ಉಪಚುನಾವಣೆ ಫಲಿತಾಂಶ ಏನಾಗುತ್ತದೆ ಎಂಬುದನ್ನು ಈಗಲೇ ಊಹಿಸುವುದು ಕಷ್ಟ. ಹೀಗಾಗಿ ರಾಜ್ಯಸಭೆ ಚುನಾವಣೆಯಿಂದ ದೂರ ಉಳಿಯುವ ಬಗ್ಗೆ ಜೆಡಿಎಸ್ ವರಿಷ್ಠರು ಚಿಂತಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆಡಳಿತಾರೂಢ ಬಿಜೆಪಿ ಪ್ರಸ್ತುತ ವಿಧಾನಸಭೆಯಲ್ಲಿ 104 ಶಾಸಕರ ಬಲ ಹೊಂದಿದೆ. ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಅನುಕೂಲವಾಗುವ ಸ್ಥಿತಿ ನಿರ್ಮಾಣವಾಗಿದೆ.
ಉಪಚುನಾವಣೆಯಲ್ಲಿ ಕನಿಷ್ಠ 7 ರಿಂದ 8 ಸ್ಥಾನಗಳನ್ನು ಗೆದ್ದರೆ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾದಿ ಸುಗಮವಾಗಲಿದೆ. ಈಗಾಗಲೇ ಪಕ್ಷೇತರ ಶಾಸಕರಾದ ಹೆಚ್ ನಾಗೇಶ್ ಅವರು ಬಿಜೆಪಿಗೆ ಬೆಂಬಲ ನೀಡಿ ಸಚಿವರಾಗಿದ್ದಾರೆ. ಅವರ ಬೆಂಬಲವೂ ಬಿಜೆಪಿ ಅಭ್ಯರ್ಥಿಗೆ ಸುಲಭವಾಗಿ ದೊರೆಯಲಿದೆ ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
ಒಟ್ಟಾರೆ ಹೇಳುವುದಾದರೆ, ವಿಧಾನಸಭಾ ಉಪಚುನಾವಣೆ ಫಲಿತಾಂಶದ ಮೇಲೆ ರಾಜ್ಯಸಭೆಯ ಉಪಚುನಾವಣೆ ಅವಲಂಬಿತವಾಗಿದೆ ಎನ್ನಬಹುದು.
ಚುನಾವಣಾಧಿಕಾರಿ ನೇಮಕ:
ವಿಧಾನಸಭೆಯಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ನಡೆಯುವ ಚುನಾವಣೆಗೆ ಚುನಾವಣಾಧಿಕಾರಿಯಾಗಿ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರನ್ನು ಚುನಾವಣಾ ಆಯೋಗ ನೇಮಕ ಮಾಡಿದೆ. ಡಿಸೆಂಬರ್ 12 ಕ್ಕೆ ಚುನಾವಣೆ ನಿಗದಿಯಾಗಿದೆ. ನಿನ್ನೆ ಅಧಿಸೂಚನೆ ಹೊರಬಿದ್ದಿದ್ದು, ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ನಾಮಪತ್ರ ಸಲ್ಲಿಸಲು ಡಿ.2 ರಂದು ಕೊನೆದಿನ. ಡಿ.3 ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ.