ಬೆಂಗಳೂರು: ಬಿಜೆಪಿಯಲ್ಲಿ ಜೆಡಿಎಸ್ ವಿಲೀನ ಪ್ರಕ್ರಿಯೆಯ ಕುರಿತ ಸುದ್ದಿಗಳು ಸಂಪೂರ್ಣ ಕಪೋಲಕಲ್ಪಿತವಾಗಿದ್ದು, ಭಾರತೀಯ ಜನತಾ ಪಾರ್ಟಿ ಇದನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತದೆ. ಈ ಕುರಿತು ನಡೆದಿರುವ ಚರ್ಚೆಗಳು ಅನಗತ್ಯ ಗೊಂದಲ ಸೃಷ್ಟಿ ಮಾಡುವ ದುರುದ್ದೇಶದಿಂದ ಕೂಡಿವೆ. ಯಾರು ಕೂಡಾ ಈ ವದಂತಿಗಳಿಗೆ ಕಿವಿಗೊಡಬಾರದು ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಮನವಿ ಮಾಡಿದ್ದಾರೆ.
ಬಿಜೆಪಿಯಲ್ಲಿ ಜೆಡಿಎಸ್ ವಿಲೀನ ಕುರಿತು ಕ್ಯಾ.ಗಣೇಶ್ ಕಾರ್ಣಿಕ್ ಪ್ರತಿಕ್ರಿಯೆ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರವು ಇತ್ತೀಚಿನ ದಿನಗಳಲ್ಲಿ ಅತಿವೃಷ್ಟಿ ಹಾಗೂ ಕೋವಿಡ್ ಸಂಕಷ್ಟದ ಸಮಸ್ಯೆಗಳ ನಡುವೆಯೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ಈಗ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಮಹತ್ವ ನೀಡಿ ಕಾರ್ಯಪ್ರವೃತ್ತವಾಗಿದೆ. "ಬೆಂಗಳೂರು ಮಿಷನ್ 2022" ಬೆಂಗಳೂರಿಗೆ ನವ ಚೈತನ್ಯದಿಂದ ಕೂಡಿರುವ ನಿಟ್ಟಿನಲ್ಲಿ ಸರ್ಕಾರದ ಅಭಿವೃದ್ಧಿ ಚಿಂತನೆ ಸಾದರಪಡಿಸಿದೆ ಎಂದು ಅವರು ತಿಳಿಸಿದ್ದಾರೆ.
ಗ್ರಾಮ ಸ್ವರಾಜ್ಯ ಸಮಾವೇಶಗಳ ಮೂಲಕ ಪಕ್ಷ ಸಂಘಟನೆ ಬಲಗೊಂಡಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇಕಡಾ 80ಕ್ಕೂ ಹೆಚ್ಚು ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವುದಕ್ಕಾಗಿ ಪಕ್ಷವು ಕಾರ್ಯಪ್ರವೃತ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.
ಓದಿ: ಗುಡ್ ಬೈ 2020: ಕೊರೊನಾಗಿಂತ ಮಹಾರೋಗ ನಿರುದ್ಯೋಗ.. ಎಲ್ಲೆಂದರಲ್ಲಿ ವಲಸೆ, 'No Job', ಸ್ಯಾಲರಿ ಕಟ್!
ನಮ್ಮ ರಾಜ್ಯದ ಪ್ರಭಾರಿ ಅರುಣ್ ಸಿಂಗ್ ಮಾರ್ಗದರ್ಶನದಲ್ಲಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ನೇತೃತ್ವದಲ್ಲಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಭಿವೃದ್ಧಿಪರ ಕಾರ್ಯಕ್ರಮಗಳೊಂದಿಗೆ ಕರ್ನಾಟಕವನ್ನು ಬಿಜೆಪಿಯ ಭದ್ರಕೋಟೆಯನ್ನಾಗಿ ಪರಿವರ್ತಿಸುತ್ತಿರುವ ಈ ಕಾಲಘಟ್ಟದಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನ ಎನ್ನುವ ಅಸಂಬದ್ಧ ಚರ್ಚೆ ತೀರಾ ಅಪ್ರಸ್ತುತ ಎಂದು ಪತ್ರಿಕಾ ಪ್ರಕಟಣೆ ಮೂಲಕ ಕಾರ್ಣಿಕ್ ತಿಳಿಸಿದ್ದಾರೆ.