ಬೆಂಗಳೂರು : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಪೋಸ್ಟರ್ ಅಂಟಿಸಿದ ಕಿಡಿಗೇಡಿಗಳ ಬಂಧನಕ್ಕೆ ಪೊಲೀಸ್ ಇಲಾಖೆ ಮೀನಮೇಷ ಎಣಿಸುತ್ತಿದೆ ಎಂದು ಜೆಡಿಎಸ್ ಕಿಡಿಕಾರಿದೆ. ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸದಿದ್ದರೆ, ವಿಧಾನಸೌಧದಲ್ಲಿರುವ ಗೃಹ ಸಚಿವರ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ನಗರ ಘಟಕದ ಅಧ್ಯಕ್ಷ ಹೆಚ್ ಎಂ ರಮೇಶ್ ಗೌಡ, ವಿಧಾನ ಪರಿಷತ್ ಸದಸ್ಯ ಕೆ. ಎ ತಿಪ್ಪೇಸ್ವಾಮಿ, ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಪಕ್ಷದ ರಾಜ್ಯದ ಕಾನೂನು ಘಟಕದ ಅಧ್ಯಕ್ಷ ಎ. ಪಿ ರಂಗನಾಥ್, ಮುಖಂಡ ಕೆ. ಮಂಜು ಅವರು, ತಪ್ಪಿತಸ್ಥರ ಬಂಧಿಸಬೇಕು ಎಂದು ಒತ್ತಾಯಿಸಿದರು.
ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ ಮಾತನಾಡಿ, 'ನಮ್ಮ ಪಕ್ಷದ ನಾಯಕರ ವಿರುದ್ಧ ಜೆಡಿಎಸ್ ಪಕ್ಷದ ಕಚೇರಿಯ ಆವರಣದಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಅಂಟಿಸಿದ್ದರು. ಯಾರು ಹೀಗೆ ಮಾಡಿದ್ದಾರೆ ಎಂದು ನಾವು ಕೂಡ ಪರಿಶೀಲನೆ ನಡೆಸಿ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದೆವು. ಕಮಿಷನರ್ ಸೂಚನೆಯಂತೆ ಶ್ರೀರಾಂಪುರ ಸ್ಟೇಷನ್‌ನಲ್ಲಿ ಕೂಡ ದೂರು ದಾಖಲಿಸಿದ್ದೇವೆ. ನಮ್ಮ ನಾಯಕರ ವಿರುದ್ಧ ಪೋಸ್ಟರ್ ಅಂಟಿಸಿರುವ ವಿಚಾರ ಮತ್ತು ವೈಯಕ್ತಿಕ ತೇಜೋವಧೆ, ವ್ಯಕ್ತಿ ನಿಂದನೆ ಆಧಾರವಾಗಿ ದೂರು ದಾಖಲಿಸಿದ್ದೇವೆ. ಆದರೆ ಇಲ್ಲಿಯವರೆಗೂ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಇಂಡಿಯನ್ ಪೀನಲ್ ಕೋಡ್, ಐಟಿ ಆ್ಯಕ್ಟ್‌ನಡಿ ಕ್ರಮ ಜರುಗಿಸಬೇಕಾಗಿತ್ತು. ಅದನ್ನು ಪೊಲೀಸರು ಮಾಡಿಲ್ಲ ಎಂದರು.
ರಾಜಕೀಯದಲ್ಲಿ ಪಕ್ಷದ ಹಿರಿಯ ನಾಯಕರ ವಿರುದ್ಧ ವ್ಯಕ್ತಿನಿಂದನೆ ಮಾಡಿದಾಗ ಅವರ ಹಿಂಬಾಲಕರು, ಅಭಿಮಾನಿಗಳು, ಕಾರ್ಯಕರ್ತರಿಗೆ ನೋವು ಉಂಟಾಗುತ್ತದೆ. ನಮ್ಮ ಕಾರ್ಯಕರ್ತರನ್ನು ಕೂಡ ನಾವು ಸಮಾಧಾನಪಡಿಸಿದ್ದೇವೆ. ಆದರೆ, ಇಲ್ಲಿಯವರೆಗೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಪಿ ಎಸ್. ಮನೋಹರ್ ಶುಕ್ರವಾರ ಬೆಂಗಳೂರು ನಗರ ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್‌ಗೌಡ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದು ಅಲ್ಲದೇ, ವೈಯಕ್ತಿಕ ತೇಜೋವಧೆ, ವ್ಯಕ್ತಿ ನಿಂದನೆ ಮಾಡುವ ಕೆಲಸ ಮಾಡಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಂಡು ಕಡಿವಾಣ ಹಾಕಬೇಕಾಗಿದೆ. ಇಲ್ಲವಾದರೆ ಪರಸ್ಪರ ಪ್ರತಿಭಟನೆಗಳು ನಡೆಯುತ್ತವೆ. ಪರಿಸ್ಥಿತಿ ಮಿತಿ ಮೀರಿದರೆ ಕಾನೂನು ಸುವ್ಯವಸ್ಥೆ ಹದಗೆಡಬಹುದು. ಗೃಹ ಇಲಾಖೆ, ಡಿಜಿಪಿಯವರು ಇದನ್ನು ಸೂಕ್ಷ್ಮವಾಗಿ ಗಮನಹರಿಸಿ ಈ ರೀತಿಯ ಘಟನೆಗಳು ಪುನರಾವರ್ತನೆ ಆಗದಂತೆ ಕ್ರಮ ವಹಿಸಬೇಕು. ಇದು ನಿಲ್ಲದಿದ್ದರೆ ನಾವು ಹೋರಾಟ ಮಾಡಲಿದ್ದೇವೆ ಎಂದು ಸರ್ಕಾರಕ್ಕೆ ಅವರು ಎಚ್ಚರಿಕೆ ನೀಡಿದರು.
ಎಸ್ ಮನೋಹರ್ ವಿರುದ್ಧ ಆಕ್ರೋಶ : ಜೆಡಿಎಸ್ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ರಮೇಶ್‌ಗೌಡ ಮಾತನಾಡಿ, 'ಚಿಕ್ಕವಯಸ್ಸಿನಲ್ಲೇ ವಿಧಾನ ಪರಿಷತ್ ಸದಸ್ಯನಾಗಿದ್ದೇನೆ ಎಂದು ನನ್ನ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ನಾನು ಅವರುಗಳಂತೆ ಜಾಮೀನು ತೆಗೆದುಕೊಂಡು ಓಡಾಡುತ್ತಿಲ್ಲ. ಎಸ್ ಮನೋಹರ್ ವಿರುದ್ಧ ನಾನು ಕಾಂಗ್ರೆಸ್ ವರಿಷ್ಠ ನಾಯಕರಿಗೂ ಕೂಡ ಪತ್ರ ಬರೆಯುತ್ತೇನೆ' ಎಂದರು.
ಕುಮಾರಸ್ವಾಮಿ ಅವರು ಈ ಸರ್ಕಾರದ ಭ್ರಷ್ಟಾಚಾರವನ್ನು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಅವರ ವಿರುದ್ಧ ಪೋಸ್ಟರ್ ಅಂಟಿಸಿದ್ದಾರೆ. ಮನೋಹರ್ ಪೋಸ್ಟರ್ ಅಂಟಿಸಿರುವುದಕ್ಕೆ ನಮ್ಮ ಬಳಿ ಸಾಕ್ಷಿ, ಪುರಾವೆಗಳಿವೆ. ಮನೋಹರ್ ರೀತಿಯಲ್ಲಿ ನೀಚಗೆಟ್ಟ, ಕೀಳುಮಟ್ಟದ ರಾಜಕೀಯ ನಾವು ಮಾಡಲ್ಲ. ನಾನು ಅವ್ಯವಹಾರ ಮಾಡಿರುವುದಕ್ಕೆ ಒಂದೇ ಒಂದು ಸಾಕ್ಷಿ ನೀಡಿದರೆ, ರಾಜಕೀಯ ತೊರೆಯುತ್ತೇನೆ ಎಂದರು. ಈ ಸಂದರ್ಭದಲ್ಲಿ ಅವರು ಎಸ್. ಮನೋಹರ್ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣಗಳ ದಾಖಲೆಗಳನ್ನು ಬಿಡುಗಡೆ ಮಾಡಿದರು.
ಪೋಸ್ಟರ್ ಅಂಟಿಸಿದ್ದು ನಾನೇ ಎಂದು ರಾಜಾರೋಷವಾಗಿ ಹೇಳಿಕೊಂಡಿರುವ ಮನೋಹರ್ ಅವರನ್ನು ಪೊಲೀಸರು ಬಂಧಿಸಬೇಕು. ಇಲ್ಲವಾದರೆ ಜೆಡಿಎಸ್ ಪಕ್ಷದ ಶಾಸಕರು, ಮುಖಂಡರು ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಪೋಸ್ಟರ್ ಅಂಟಿಸುವ ಕೆಲಸ ನಮಗೂ ಬರುತ್ತದೆ. ಮೌಲ್ಯಾಧಾರಿತ ರಾಜಕಾರಣ ಮಾಡಬೇಕು ಎಂದು ನಮ್ಮ ನಾಯಕರು ಸೂಚನೆ ನೀಡಿದ್ದಕ್ಕೆ ನಮ್ಮ ಪಕ್ಷದ ಯುವ ಕಾರ್ಯಕರ್ತರು ಸುಮ್ಮನಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಕೂಡಲೇ ಕಾಂಗ್ರೆಸ್ ಕಾರ್ಯಕರ್ತ ಎಸ್. ಮನೋಹರ್ ಬಂಧನವಾಗದಿದ್ದರೆ ವಿಧಾನಸೌಧದ ಗೃಹ ಸಚಿವರ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸುವುದಾಗಿ ಅವರು ಎಚ್ಚರಿಕೆ ನೀಡಿದರು.
ಒಬ್ಬೊಬ್ಬರಿಗೆ ಒಂದು ಕಾನೂನು ಮಾಡಬೇಡಿ: ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ ಪಿ ರಂಗನಾಥ್ ಮಾತನಾಡಿ, ಸರ್ಕಾರ ಪೊಲೀಸ್ ಕಮಿಷನರ್ ಮತ್ತು ಗೃಹ ಸಚಿವರು ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕಾನೂನು ಮಾಡಬಾರದು. ಎಲ್ಲ ಪಕ್ಷಕ್ಕೂ ಒಂದೇ ನಿಯಮ. ಜೆಡಿಎಸ್ ಪಕ್ಷದ ಕಾರ್ಯಕರ್ತ ಬೆಟ್ಟಪ್ಪ ಎಂಬಾತ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದಕ್ಕೆ ಕೆಜಿಎಫ್ ಪೊಲೀಸ್ ಸ್ಟೇಷನ್‌ನಲ್ಲಿ ಜಾಮೀನುರಹಿತ ಕೇಸ್ ದಾಖಲಿಸುತ್ತಾರೆ. ಆದರೆ, ಕುಮಾರಸ್ವಾಮಿ ವಿರುದ್ಧ ಪೋಸ್ಟರ್ ಅಂಟಿಸಿದವರ ವಿರುದ್ಧ ಪೊಲೀಸ್ ಕಮಿಷನರ್‌ಗೆ ದೂರು ನೀಡಿದರೂ ಕೂಡ ಜಾಮೀನು ಸಹಿತ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಪೋಸ್ಟರ್ ಅಂಟಿಸಿದವರು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ ಎಂದರು.
ನಮಗೊಂದು ಅವರಿಗೊಂದು ಕಾನೂನು ಸರಿಯಲ್ಲ. ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ. ಕೂಡಲೇ ಜಾಮೀನು ರಹಿತ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಅಂಟಿಸಿದರೂ ಕೂಡ ತಪ್ಪು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದರು. ಆದರೆ, ಮನೋಹರ್ ನಿನ್ನೆ ನಾನೇ ಪೋಸ್ಟರ್ ಅಂಟಿಸಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ. ಮನೋಹರ್ ವಿರುದ್ಧ ಯಾವ ಕ್ರಮ ಜರುಗಿಸಿದ್ದೀರಾ? ಎಂದು ಡಿ ಕೆ ಶಿವಕುಮಾರ್ ಅವರನ್ನು ರಂಗನಾಥ್ ಪ್ರಶ್ನಿಸಿದರು.
ಮನೋಹರ್ ಅವರಿಗೆ ಕಾಂಗ್ರೆಸ್ ಪಕ್ಷ ಯಾವುದೇ ಸ್ಥಾನಮಾನ ನೀಡಿಲ್ಲ ಎಂದು ಹತಾಷೆಗೆ ಒಳಗಾಗಿ ಈ ರೀತಿ ಮಾಡಿದ್ದಾರೆ. ಅಥವಾ ಈ ರೀತಿ ಮಾಡಿದರೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಮಾಡಿರಬಹುದು. ಡಿ. ಕೆ ಶಿವಕುಮಾರ್ ಕೂಡ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಕರೆಂಟ್ ಕಳ್ಳ ಪೋಸ್ಟರ್: ಕಾಂಗ್ರೆಸ್ ಮುಖಂಡ ಮನೋಹರ್ ವಿರುದ್ಧ ಪೊಲೀಸ್ ಕಮೀಷನರ್ಗೆ ದೂರು