ಬೆಂಗಳೂರು: ಚುನಾವಣೆ ನಂತರ ಜನತಾದಳದ ಶಕ್ತಿ ಏನು ಅನ್ನೋದು ಗೊತ್ತಾಗಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಯಶವಂತಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜವರಾಯಿ ಗೌಡ ನಾಮಪತ್ರ ಸಲ್ಲಿಕೆಗೂ ಮುನ್ನ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಯಶವಂತಪುರದಲ್ಲಿ ನಾನು ಮೂರು ದಿನ ಪ್ರಚಾರ ಮಾಡುತ್ತೇನೆ. ಅತ್ಯಂತ ಕಡಿಮೆ ಅವಧಿಯಲ್ಲಿ ಚುನಾವಣೆ ಘೋಷಣೆ ಮಾಡಿದ್ದಾರೆ. ನಾನು ಸಿಎಂ ಆದಾಗ ಸಾಕಷ್ಟು ನೋವು ಅನುಭವಿಸಿದ್ದೇನೆ. ಸೋಮಶೇಖರ್ ನನ್ನ ಹಿಂದೆ ಏನೆಲ್ಲಾ ಮಾತನಾಡಿದ್ದಾರೆ ಅನ್ನೋದನ್ನು ನಾನು ಕೇಳಿದ್ದೇನೆ. ಬಿಡಿಎ ಅಧ್ಯಕ್ಷರಾಗಿದ್ದ ಸೋಮಶೇಖರ್ ಹಣ ಹೊಡೆಯುವ ಕೆಲಸಕ್ಕೆ ಮುಂದಾಗಿದ್ದರು. ಇದನ್ನು ನಾನು ತಡೆದಿದ್ದಕ್ಕೆ ನನ್ನ ಮೇಲೆ ಸೋಮಶೇಖರ್ ಗೆ ಕೋಪ ಎಂದು ಆರೋಪಿಸಿದರು.
ರಾಜೀನಾಮೆ ಕೊಟ್ಟಾಗ ಸೋಮಶೇಖರ್ ಕ್ಷೇತ್ರದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲಿಲ್ಲ ಅಂತ ಆರೋಪಿಸಿದ್ದಾರೆ. ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ, ಸಂಸದೆ ಶೋಭಾ ಅವರು ಕ್ಷೇತ್ರದ ಅಭಿವೃದ್ಧಿ ಮಾಡಿದ್ರಾ ಎಂದು ಪ್ರಶ್ನಿಸಿದರು?. ನಾನು ಬಡವರ ಪರವಾಗಿ ಕೆಲಸ ಮಾಡುವವನು. ನನಗೋಸ್ಕರ ನೀವು ಪಕ್ಷವನ್ನು ಉಳಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಹಿಂದಿನ ಚುನಾವಣೆ ವೇಳೆ ಜವರಾಯಿ ಗೌಡರು ಅತ್ಯಂತ ಕಡಿಮೆ ಮತದಲ್ಲಿ ಸೋತಿದ್ದರು. ಬೆಂಗಳೂರಿನ ಅಭಿವೃದ್ಧಿಗೆ ನಾನು ಸಾಕಷ್ಟು ಶ್ರಮಿಸಿದ್ದೇನೆ ಎಂದು ಇದೇ ವೇಳೆ ಹೆಚ್ಡಿಕೆ ತಿಳಿಸಿದ್ರು.
ನಾನು ಸಿಎಂ ಆಗಿದ್ದಾಗ ನನ್ನನ್ನು ಕೆಳಗಿಳಿಸಬೇಕೆಂದು ಕೆಲವರು ಪಣ ತೊಟ್ಟಿದ್ದರು. ಬಿಜೆಪಿ ಸರ್ಕಾರ ಬಂದಾಕ್ಷಣ ಬಡವರನ್ನು ತುಳಿಯುವ ಪ್ರಯತ್ನ ಮಾಡುತ್ತಿದೆ. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ನೆರೆ ಬಂದಿದೆ. ಅದರ ಬಗ್ಗೆ ಸರ್ಕಾರ ಚಿಂತಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ತೀರ್ಮಾನಗಳು ಯಾವುದೂ ಜನಪರವಾಗಿಲ್ಲ. ಕೇಂದ್ರ ಸರ್ಕಾರ ಜನರನ್ನು ಬೀದಿಗೆ ತರುವ ಕೆಲಸ ಮಾಡುತ್ತಿದೆ. ಯಡಿಯೂರಪ್ಪ ಅತ್ತು ಕರೆದು ಸಿಎಂ ಆಗಿದ್ದಾರೆ. ಹೀಗಿದ್ದರೂ ಪ್ರಧಾನಿ ಮೋದಿ ಯಡಿಯೂರಪ್ಪ ಅವರಿಗೆ ಭೇಟಿಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು. ಅಲ್ಲದೆ, ನಾನು ಸಿಎಂ ಆಗುತ್ತೇನೆ ಅಂತ ಯಾವತ್ತೂ ಕೇಳಿರಲಿಲ್ಲ. ಕಾಂಗ್ರೆಸ್ನವರೇ ಬಂದು ಕೇಳಿಕೊಂಡಿದ್ದಕ್ಕೆ ನಾನು ಸಿಎಂ ಆಗಿದ್ದು, ನನ್ನನ್ನು ಸಿಎಂ ಮಾಡಿದ್ದೂ ಅವರೇ, ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದೂ ಅವರೇ ಎಂದು ಕಿಡಿಕಾರಿದರು.
ಬೆಳಗಾವಿಯ ಸಾಹುಕಾರ್ ಅಂತೆ ಸಾಹುಕಾರ: ರೈತರ ಕಬ್ಬಿನ ಬೆಳೆಗೆ ಹಣ ನೀಡಲು ಸಾಧ್ಯವಾಗದವರು ಸಾಹುಕಾರ್ ಅಂತೆ. ಅದಕ್ಕಾಗಿಯೇ ನಾನು ಬೆಳಗಾವಿಗೆ ಹೋಗ್ತಿದ್ದೇನೆ. ಗೋಕಾಕ್ ಸಾಹುಕಾರ್ ನಿಜ ಬಣ್ಣ ಬಯಲು ಮಾಡುತ್ತೇನೆ. ನಾನು ಅಧಿಕಾರದಲ್ಲಿದ್ದರೂ ಇಲ್ಲದಿದ್ದರೂ ಜನಪರ ಕೆಲಸ ಮಾಡುತ್ತೇನೆ. ಅನರ್ಹ ಶಾಸಕರಿಗೆ ಮತದಾರರು ತಕ್ಕ ಪಾಠ ಕಲಿಸುತ್ತಾರೆ. ನನಗೆ ನೆಮ್ಮದಿ ತಂದುಕೊಡಬೇಕಾದರೆ ಜವರಾಯಿ ಗೌಡರನ್ನು ಗೆಲ್ಲಿಸಿ ಎಂದು ಕರೆ ನೀಡಿದರು.