ಬೆಂಗಳೂರು : ಲೋಕನಾಯಕ ಜಯಪ್ರಕಾಶ್ ನಾರಾಯಣರವರ 118 ನೇ ಜನ್ಮದಿನ ಕಾರ್ಯಕ್ರಮವನ್ನು ಕರ್ನಾಟಕ ಚಿತ್ರಕಲಾ ಪರಿಷತ್ನಲ್ಲಿ ಭಾರತ ಯಾತ್ರಾ ಕೇಂದ್ರ ಹಾಗೂ ಲೋಕನಾಯಕ ಜೆ.ಪಿ ವಿಚಾರ ವೇದಿಕೆ ಹಮ್ಮಿಕೊಂಡಿತ್ತು.
ಈ ವೇಳೆ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಭಾರತದಲ್ಲೇ ದಾಖಲೆ ಸೃಷ್ಟಿಸಿ, 40 ವರ್ಷಗಳನ್ನು ಪೂರೈಸಿರುವ ಬಸವರಾಜ ಎಸ್. ಹೊರಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಅವರು, ಅಂದಿನ ಕಾಲದಲ್ಲಿ ಚುನಾವಣೆಯಲ್ಲಿ ಗೆಲ್ಲುವುದು ದೊಡ್ಡ ವಿಚಾರವಾಗಿರಲಿಲ್ಲ. ಗೆದ್ದ ನಂತರ ಶಿಕ್ಷಕರನ್ನು ಸಂಭಾಳಿಸುವುದು ಸವಾಲಾಗಿತ್ತು. ಪ್ರೀತಿ ಕಡಿಮೆಯಾದರೂ ತೊಂದರೆ, ಪ್ರೀತಿ ಹೆಚ್ಚಾದರೂ ಕಷ್ಟ ಎಂದರು.
ಬಳಿಕ ಕವಿ ಪ್ರೊ. ಸಿದ್ದಲಿಂಗಯ್ಯ ಮಾತನಾಡಿ, ಶಿಕ್ಷಕರ ಏಳಿಗೆಗಾಗಿ ಜೀವನದುದ್ದಕ್ಕೂ ಹೊರಟ್ಟಿಯವರು ಹೋರಾಟ ನಡೆಸುತ್ತಾ ಬಂದಿದ್ದಾರೆ. ಉಪನ್ಯಾಸಕರನ್ನು ಖಾಯಂಗೊಳಿಸುವುದು, ಕ್ರೀಡಾ ತರಬೇತುದಾರರಿಗೆ ಯುಜಿಸಿ ಶ್ರೇಣಿಯ ವೇತನ, ಸಾಮೂಹಿಕ ವಿಮೆ, ಶಿಕ್ಷಕರ ನೇಮಕಾತಿಗೆ ವಯೋಮಿತಿ ಸಡಿಲಿಕೆ, ಹೀಗೆ ಶಿಕ್ಷಕರ ಸೌಲಭ್ಯಗಳ ಹಿಂದೆ ಹೊರಟ್ಟಿಯವರ ಶ್ರಮವಿದೆ. ಹೊರಟ್ಟಿಯವರ 40 ವರ್ಷಗಳ ಸುದೀರ್ಘ ಸೇವೆ ಅವಿಸ್ಮರಣೀಯ ಎಂದರು.
ಈ ವೇಳೆ ಚಿತ್ರಕಲಾ ಪರಿಷತ್ ನ ಅಧ್ಯಕ್ಷರಾದ ಡಾ.ಬಿ.ಎಲ್. ಶಂಕರ್, ಮಾಜಿ ಶಾಸಕ ಡಾ.ಎಂ.ಪಿ. ನಾಡಗೌಡ, ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಭಾಗಿಯಾಗಿದ್ದರು.