ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣವನ್ನು ಸದ್ಯ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಈ ಸಂಬಂಧ ಎಸ್ಐಟಿ ಅಧಿಕಾರಿಗಳು ನಿನ್ನೆ ಐವರನ್ನು ವಶಕ್ಕೆ ಪಡೆದಿದ್ದರು. ಸಿಡಿ ವಿಚಾರವಾಗಿ ಐದು ಜನರನ್ನು ತೀವ್ರ ತನಿಖೆಗೆ ಒಳಪಡಿಸಿದ ಬಳಿಕ, ಅವರನ್ನು ವಾಪಸ್ ಕಳುಹಿಸಿದೆ. ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 8 ಗಂಟೆಗಳ ಕಾಲ ವಿಚಾರಣೆ ನಡೆಸಿದ ಎಸ್ಐಟಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಮಾಹಿತಿ ಕಲೆ ಹಾಕಿದ್ದಾರೆ.
ರಷ್ಯಾ ವೆಬ್ಸೈಟ್ನಲ್ಲಿಯೂ ಅಪ್ಲೋಡ್ ಆಗಿತ್ತಂತೆ ವಿಡಿಯೋ.!
ನಕಲಿ ವಿಪಿಎನ್ ಮೂಲಕ ರಷ್ಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದರಂತೆ. ಅಲ್ಲದೇ ನಕಲಿ ವಿಪಿಎನ್ ಬಳಸಿದ ಹ್ಯಾಕರ್‌ನ ಮಾಹಿತಿ ಸಹ ದೊರೆತಿದೆಯಂತೆ. ಪೊಲೀಸ್ ಭೀತಿಯಿಂದ ಸಾಮಾಜಿಕ ಜಾಲತಾಣಗಳಿಂದಲೂ ಆತ ಡಿಆ್ಯಕ್ಟಿವೇಟ್ ಆಗಿದ್ದಾನೆ ಎನ್ನಲಾಗಿದೆ.
ಚೆನ್ನೈನಲ್ಲಿ ಇಬ್ಬರನ್ನು ವಶಕ್ಕೆ ಪಡೆದ ಎಸ್ಐಟಿ:
ಪ್ರಕರಣದಲ್ಲಿ ನಾಪತ್ತೆಯಾಗಿರುವ ಇಬ್ಬರ ಮೊಬೈಲ್ ಫೋನ್ ಮೂರು ದಿನಗಳ ಹಿಂದೆ ಗೌರಿಬಿದನೂರಿನಲ್ಲಿ ಸ್ವಿಚ್ ಆಫ್ ಆಗಿರುವುದು ಬೆಳಕಿಗೆ ಬಂದಿದೆಯಂತೆ. ಇವರು ಆಂಧ್ರದಲ್ಲಿ ತಲೆಮರೆಸಿಕೊಂಡಿರಬಹುದೆಂಬ ಬಗ್ಗೆ ಮಾಹಿತಿ ಲಭ್ಯವಾಗಿತ್ತಂತೆ. ಆರೋಪಿಗಳ ಜಾಡು ಹಿಡಿದು ಹೋದ ಎಸ್ಐಟಿ ಚೆನ್ನೈನಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಚಳ್ಳಕೆರೆ ಇಒ ಶ್ರೀಧರ್