ಬೆಂಗಳೂರು: ಸಿಡಿ ಪ್ರಕರಣದ ಯುವತಿಗೆ ರಕ್ಷಣೆ ನೀಡಲು ನಾವು ಯಾವುದೇ ರೀತಿಯಲ್ಲಿ ಹಿಂದೇಟು ಹಾಕುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದರು.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಸಿಡಿ ಪ್ರಕರಣದ ಯುವತಿ ಹೊಸ ವಿಡಿಯೋದಲ್ಲಿ ಏನು ಹೇಳಿದ್ದಾರೆ ಅನ್ನೋದನ್ನು ನೋಡಿಲ್ಲ. ನಮ್ಮ ಸರ್ಕಾರ ಆ ಯುವತಿಗೆ ರಕ್ಷಣೆ ನೀಡೋದಾಗಿ ಸದನದಲ್ಲೇ ಹೇಳಿದೆ. ಗೃಹ ಸಚಿವ ಬೊಮ್ಮಾಯಿ ಮತ್ತು ಸ್ವತಃ ಮುಖ್ಯಮಂತ್ರಿಗಳು ಆಕೆಗೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದಾರೆ. ನಮ್ಮಿಂದ ರಕ್ಷಣೆ ನೀಡುವ ಕೆಲಸ ಮಾಡುತ್ತೇವೆ ಎಂದರು.
ಹೆಣ್ಣು ಮಗಳಿಗೆ ರಕ್ಷಣೆ ಕೊಡೋದು ನಮ್ಮ ಕರ್ತವ್ಯ. ಹೀಗಾಗಿ ನಮ್ಮ ಸರ್ಕಾರ ಯುವತಿಗೆ ರಕ್ಷಣೆ ನೀಡುವಲ್ಲಿ ಸದಾ ಮುಂಚೂಣಿಯಲ್ಲಿರುತ್ತದೆ. ತನಿಖೆಯ ವರದಿ ಏನೇ ಬರಲಿ. ಯುವತಿಗೆ ರಕ್ಷಣೆ ನೀಡುತ್ತೇವೆ ಎಂದು ತಿಳಿಸಿದರು.
ಓದಿ: ಮತ್ತೊಂದು ವಿಡಿಯೋ ಹರಿಬಿಟ್ಟ ಸಿಡಿ ಲೇಡಿ: ಪೋಷಕರಿಗೆ ರಕ್ಷಣೆ ಕೊಡಲು ಕೈ ನಾಯಕರಿಗೆ ಮನವಿ
ಆಕೆಗೆ ಅನ್ಯಾಯ ಆಗಿದೆಯಾ? ಇಲ್ಲವೋ? ಎಂಬುದು ಅನ್ನೋದು ಎಸ್ಐಟಿ ತನಿಖೆ ಬಳಿಕ ಗೊತ್ತಾಗುತ್ತದೆ. ಯುವತಿಗೆ ರಕ್ಷಣೆ ನೀಡೋದು ನಮ್ಮ ಜವಾಬ್ದಾರಿ. ಅದನ್ನು ಮಾಡ್ತೇವೆ. ತನಿಖಾ ತಂಡವೂ ಆ ಯುವತಿಯ ಹುಡುಕಾಟದಲ್ಲಿದೆ. ಆ ಯುವತಿ ನನ್ನ ಇಲಾಖೆಯಿಂದ ರಕ್ಷಣೆ ಕೇಳಿದರೆ, ನಮ್ಮ ಕಡೆಯಿಂದಲೂ ರಕ್ಷಣೆ ಕೊಡಲು ಸಿದ್ಧವೆಂದು ಸಚಿವೆ ಶಶಿಕಲಾ ಜೊಲ್ಲೆ ಅಭಯ ನೀಡಿದರು.
ಪೋಷಕರಿಗೆ ರಕ್ಷಣೆ ಕೊಡಲು ಸಿಡಿ ಯುವತಿ ಮನವಿ:
ಮಾ.13 ರಂದು ಮೊದಲ ಬಾರಿಗೆ ವಿಡಿಯೋ ಮಾಡಿದ್ದ ಯುವತಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದ್ದಳು. ಇದೀಗ ಎರಡನೇ ಬಾರಿ ವಿಡಿಯೋ ಮಾಡಿ ಎಸ್ಐಟಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಮೂವರು ಕಾಂಗ್ರೆಸ್ ನಾಯಕರ ಹೆಸರನ್ನೂ ಪ್ರಸ್ತಾಪಿಸಿದ್ದಾಳೆ. ಪೋಷಕರಿಗೆ ರಕ್ಷಣೆ ಕೊಡಬೇಕೆಂದು ಕೈ ನಾಯಕರಲ್ಲಿ ಮನವಿ ಮಾಡಿದ್ದಾಳೆ.
ಎಸ್ಐಟಿಗೆ ಸಿಡಿ ಗ್ಯಾಂಗ್ ಚಾಲೆಂಜ್:
ಸಿಡಿ ಪ್ರಕರಣದ ಯುವತಿ ಇಂದು ಮತ್ತೊಂದು ವಿಡಿಯೋ ಹರಿಬಿಟ್ಟಿದ್ದಾಳೆ. ತನ್ನ ಪೋಷಕರು ಸುರಕ್ಷಿತವಾಗಿದ್ದಾರೆ ಅನ್ನೋದು ಗೊತ್ತಾದಾಗ ಮಾತ್ರ ಎಸ್ಐಟಿ ವಿಚಾರಣೆಗೆ ಹಾಜರಾಗುವೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಸ್ಪೀಕರ್ ರಮೇಶ್ಕುಮಾರ್ ಮತ್ತು ಮಹಿಳಾ ಸಂಘಟನೆಯ ಮುಖಂಡರು ತನ್ನ ಕುಟುಂಬಕ್ಕೆ ರಕ್ಷಣೆ ಕೊಡಿಸುತ್ತಾರೆ ಎಂಬ ಭರವಸೆ ಇದೆ ಎಂದಿದ್ದಳು.
ಪೊಲೀಸಿಂಗ್ ಮಾದರಿ ತನಿಖೆಗೆ ಮುಂದಾದ ಎಸ್‌ಐಟಿ:
ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಶಂಕಿತ ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡ (ಎಸ್ಐಟಿ) ಪೊಲೀಸಿಂಗ್ ಮಾದರಿಯಲ್ಲಿ ತನಿಖೆ ನಡೆಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.