ಬೆಂಗಳೂರು: ಇಸ್ರೋ ಸಂಸ್ಥೆಯ ಚಂದ್ರಯಾನ 2 ಉಡಾವಣೆ ವೀಕ್ಷಣೆಗೆ ಆಗಮಿಸಿದ್ದ ಪ್ರಧಾನಿ ಜನರ ಸಮಸ್ಯೆ ಆಲಿಸಲು ಅವಕಾಶ ನೀಡದಿರುವುದು ತೀವ್ರ ನಿರಾಸೆ ತಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಚಂದ್ರಯಾನ2 ವೀಕ್ಷಣೆಗೆ ಆಗಮಿಸಿದ್ದ ಪ್ರಧಾನಿ ರಾಜ್ಯದ ಜನರ ಸಮಸ್ಯೆಗೆ ಸ್ಪಂದಿಸಿ ಕನಿಷ್ಠ ಅರ್ಧ ಗಂಟೆ ಕಾಲಾವಕಾಶ ನೀಡುತ್ತಾರೆ ಅಂದುಕೊಂಡಿದ್ದೆವು. ನಮ್ಮ ಬೇಡಿಕೆಗೆ ಬೆಂಬಲ ಸಿಕ್ಕಿಲ್ಲ. ಆದರೆ, ಇಲ್ಲಿನ ಬಿಜೆಪಿ ನಾಯಕರು ಪ್ರಧಾನಿ ಬರ್ತಾರೆ, ಜನರ ಭೇಟಿಯಾಗಿ ರಾಜ್ಯಕ್ಕೆ ಪರಿಹಾರ ನೀಡುವಂತೆ ಮನವಿ ಮಾಡ್ತೇವೆ ಅಂತಾ ಹೇಳಿದ್ದರು.
ಬಿಜೆಪಿ ಮುಖಂಡರು ಪ್ರಧಾನಿ ಅವರನ್ನು ಭೇಟಿ ಮಾಡಲಿಲ್ಲ. ಮನವಿಯನ್ನೂ ಮಾಡಲಿಲ್ಲ. ಪ್ರಧಾನಿಯವರಿಗೆ ಭಾಷಣ ಮಾಡಲು ಸಮಯವಿತ್ತು. ಆದರೆ, ರಾಜ್ಯದಲ್ಲಿನ ನೆರೆ, ಬರದ ಬಗ್ಗೆ ಮಾತಾಡಬೇಕಿತ್ತು. ನೆರೆ ಸಂತ್ರಸ್ತ ಭಾಗಗಳ ಸಮೀಕ್ಷೆಯನ್ನಾದರೂ ಪ್ರಧಾನಿ ಮಾಡಬೇಕಿತ್ತು. ಆದರೆ, ಯಾವುದನ್ನೂ ಅವರು ಮಾಡಲೇ ಇಲ್ಲ. ರಾಜ್ಯದ ಸಂಕಷ್ಟದಲ್ಲಿರೋ ಜನತೆಯಲ್ಲಿ ಭರವಸೆ ಮೂಡಿಸೋ ಕೆಲಸವನ್ನು ಪ್ರಧಾನಿ ಮಾಡಲೇ ಇಲ್ಲ ಎಂದರು.ಅವರಿಗೆ ಹೆಲಿಕಾಪ್ಟರ್ ಇತ್ತು. ಎಲ್ಲಿ ಬೇಕಾದ್ರು ಹೋಗಿ ನೋಡಬಹುದಿತ್ತು. ಕೊಡಗು, ಚಿಕ್ಕಮಗಳೂರು ಉತ್ತರ ಕರ್ನಾಟಕ ಭಾಗದಲ್ಲಿ ಒಂದು ಸಮೀಕ್ಷೆ ಮಾಡಬಹುದಿತಲ್ವಾ ಎಂದರು.
ಇಸ್ರೋ ಎದೆಗುಂದದಿರಲಿ:
ಇಸ್ರೋ ಬಗ್ಗೆ ಹಾಗೂ ಇಸ್ರೋ ವಿಜ್ಞಾನಿಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಈ ವೈಫಲ್ಯ ಮುಂದಿನ ಗೆಲುವಿಗೆ ಸೋಪಾನ ಆಗಲಿದೆ. ಕಾಂಗ್ರೆಸ್ ಇಸ್ರೋ ವಿಜ್ಞಾನಿಗಳ ಜೊತೆಗಿದೆ. ಎದೆಗುಂದದೇ ಮುನ್ನುಗ್ಗಲಿ. ಮುಂದಿನ ದಿನದಲ್ಲಿ ವಿಜ್ಞಾನಿಗಳಿಗೆ ಗೆಲುವು ಸಿಗಲಿದೆ. ಇಸ್ರೋ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾವೇನು ಕಡಿಮೆ ಇಲ್ಲ ಅಂತಾ ತೋರಿಸಿಕೊಟ್ಟಿದೆ. ಆ ಸಂಸ್ಥೆ ಇವತ್ತು ಮಂಗಳಯಾನ, ಚಂದ್ರಯಾನ ಹೀಗೆ ಅನೇಕ ಸ್ಯಾಟಲೈಟ್ಗಳನ್ನು ಬಾಹ್ಯಾಕಾಶಕ್ಕೆ ಕಳಿಸಿಕೊಟ್ಟಿದೆ. ದೇಶದ ರಕ್ಷಣೆ, ಹವಾಮಾನ ವೈಪರೀತ್ಯಗಳ ಬಗ್ಗೆ ಮಾಹಿತಿ ನೀಡುತ್ತಾ ಬಂದಿದೆ. ಜೊತೆಗೆ ಯಾರ ಮೇಲೂ ಅವಲಂಬಿತ ಆಗಿಲ್ಲ. ಚಂದ್ರಯಾನ- 2 ನಲ್ಲಿ ಸಂಪೂರ್ಣ ಯಶಸ್ಸು ಸಿಕ್ಕಿಲ್ಲ. ಇಂತಹ ಪ್ರಯೋಗದಲ್ಲಿ ವಿಫಲವಾಗುವುದು ಸಹಜ, ಹತಾಶರಾಗುವುದು ಬೇಡ. ಮುಂದೆ ಇನ್ನೂ ಬೇಕಾದಷ್ಟು ಸಮಯ ಇದೆ. ನಿಮಗೆ ಕಾಂಗ್ರೆಸ್ ಪರವಾಗಿ ಅಭಿನಂದನೆಗಳು ಎಂದರು.
ಪ್ರಧಾನಿ ನಡವಳಿಕೆ ಸಲ್ಲ:
ಯಾವ ಪ್ರಧಾನಿಯೂ ಇಂತ ನಡವಳಿಕೆ ಅನುಸರಿಸಲ್ಲಿಲ್ಲ. ಇವರನ್ನು ಕೇಳುವವರು ಹೇಳುವವರು ಇಲ್ಲವಾಗಿದೆ. ರಾಜ್ಯ ಬಿಜೆಪಿ ಮುಖಂಡರನ್ನು ನಾವು ನಂಬಲ್ಲ. ಸರ್ವ ಪಕ್ಷದ ಸಭೆಯನ್ನು ಕರೆಯಬೇಕು ಎಂದು ಆಹ್ರಹಿಸಿದರು. ಪ್ರತಿಪಕ್ಷವನ್ನು ನಿರ್ಲಕ್ಷಿಸುವುದು, ದ್ವೇಷದ ರಾಜಕಾರಣ ಮಾಡಬಾರದು. ಮುಂದಿನ ವಾರ ಆದರೂ ಸರ್ವ ಪಕ್ಷ ಸಭೆ ಕರೆದು ಕೇಂದ್ರಕ್ಕೆ ತೆರಳುವ ನಿರ್ಧಾರ ಕೈಗೊಳ್ಳಬೇಕು. ಪ್ರಧಾನಿಗೆ ಒತ್ತಡ ಹಾಕುವ ಶಕ್ತಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇಲ್ಲವೋ? ಪ್ರಶ್ನಿಸುವ ಮೂಲಕ ಜನಪರ ಕಾಳಜಿ ಮೆರೆಯುವ ಬದಲು ಸುಮ್ಮನಿದ್ದೀರಿ. ಧೈರ್ಯ ಸಾಲದೇ ಹೋದರೆ ರಾಜ್ಯದ ಜನರಿಗೆ ಅಪಚಾರ ಮಾಡಿದಂತೆ. ಪ್ರಧಾನಿ ನಡವಳಿಕೆ ರಾಜ್ಯದ ಜನರಿಗೆ ಅವಮಾನ ಮಾಡಿದಂತೆ ಆಗಿದೆ. ರಷ್ಯಾಗೆ ಹೋಗಲು, ಅಲ್ಲಿಗೆ ನೆರವು ಘೋಷಿಸಲು ಸಮಯ, ಮನಸ್ಸಿದೆ. ಹೀಗಿರುವಾಗ ರಾಜ್ಯದ ಜನ ಏಕೆ ನೆನಪಾಗಿಲ್ಲ. ಬಹಳ ಕ್ರೂರವಾಗಿ ನಡೆದುಕೊಂಡಿದ್ದೀರಿ. ಇದು ತಲೆ ತಗ್ಗಿಸುವ ವಿಚಾರ. ಬಿಜೆಪಿಯವರು ಅಸಹಾಯಕರಾಗಿದ್ದಾರೆ ಎಂದರು.
ಪರಿಹಾರಕ್ಕೆ ಮನವಿ:
ಮನೆ ಕಳೆದುಕೊಂಡವರಿಗೆ 10 ಲಕ್ಷ ಪರಿಹಾರ, ಬೆಳೆ ಕಳೆದುಕೊಂಡವರಿಗೆ ಪ್ರತಿ ಎಕರೆಗೆ 10 ಲಕ್ಷ ಪರಿಹಾರ, ಕರಾವಳಿ ಭಾಗದಲ್ಲಿ ಸಮಸ್ಯೆ ಆಗಿದೆ ಅವರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಜನರು ಮಾತ್ರವಲ್ಲ ಜಾನುವಾರು, ಸಾಕುಪ್ರಾಣಿ, ಸಣ್ಣ ಉದ್ಯಮ ಕಳೆದುಕೊಂಡಿದ್ದಾರೆ. ಪ್ರತಿ ಕೋಳಿಗೆ 500, ಹಸು, ಎಮ್ಮೆ, ಎತ್ತಿಗೆ ತಲಾ 50 ಸಾವಿರ, ವಾಣಿಜ್ಯ ಬೆಳೆಗೆ ಪ್ರತಿ ಎಕರೆಗೆ 50 ಸಾವಿರ ರೂ. ಕೊಡಬೇಕು ಎಂದರು.
ಕುರಿ, ಮೇಕೆ ಕಳೆದುಕೊಂಡವರಿಗೆ ತಲಾ 10 ಸಾವಿರ ರೂ. ಪರಿಹಾರ ಕೊಡಬೇಕು. ಮನೆ ಕಟ್ಟಿಕೊಟ್ಟರೆ ಸಾಲದು, ಪ್ರತಿ ಕುಟುಂಬಕ್ಕಡ 15 ಗುಂಟೆ ಜಮೀನು ಕೊಡಬೇಕು. ಕನಿಷ್ಠ 10 ಲಕ್ಷ ರೂ. ಮನೆ ಕಟ್ಟಿಕೊಳ್ಳಲು ಪರಿಹಾರ ಕೊಡಬೇಕು. ಕೃಷ್ಣಾ ಮೇಲ್ದಂಡೆ ಭಾಗದ ನಿರಾಶ್ರಿತರಿಗೆ ಸೂಕ್ತ ಪರಿಹಾರ ಕೊಟ್ಟು ವಿಶೇಷ ಸಮಿತಿ ರಚಿಸಿ ಅಲ್ಪಾವಧಿ, ಪೂರ್ಣಾವಧಿ, ಪರಿಹಾರ ಕ್ರಮಕ್ಕೆ ವೈಜ್ಞಾನಿಕವಾಗಿ ವರದಿ ಸಿದ್ಧಪಡಿಸಬೇಕು. ದೇಶದ ವಿವಿಧ ಭಾಗಕ್ಕೆ ಮಾದರಿಯಾಗುವ ವರದಿ ಮಾಡಿ ಕೊಡಬೇಕು. ಪರಿಪೂರ್ಣ ವರದಿಯ ಜತೆ ಜನ ಕಳೆದುಕೊಂಡ ದಾಖಲೆಯನ್ನು ಬೇಗ ಮರಳಿ ಸಿಗುವಂತೆ ಮಾಡಬೇಕು. ರಾಜ್ಯದಲ್ಲಿ 1 ಲಕ್ಷ ಕೋಟಿ ನಷ್ಟವಾಗಿದ್ದು, ಹೆಚ್ಚು ಮೊತ್ತ ಕೊಟ್ಟು ಸಹಕರಿಸಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ವಿ ಎಸ್ ಉಗ್ರಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ವಿ.ವೈ. ಘೋರ್ಪಡೆ ಉಪಸ್ಥಿತರಿದ್ದರು.