ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಲವು (ಕೆಎಂಎಫ್) 487 ವಿವಿಧ ಹುದ್ದೆಗಳ ನೇಮಕಾತಿ ಕುರಿತಂತೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲು ವಿಧಿಸಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಐತಪ್ಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಸೇರಿ ಐದು ಸಂಘಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ನ್ಯಾಯಪೀಠ ತಡೆಯಾಜ್ಞೆ ತೆರವುಗೊಳಿಸಿದೆ.
ಅಲ್ಲದೇ, ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿ, ನೇಮಕಾತಿ ಆದೇಶ ನೀಡಲು ಅನುಮತಿಸಿದೆ. ಆದರೆ, ಆಯ್ಕೆ ಪಟ್ಟಿ ಪ್ರಕಟ ಮತ್ತು ನೇಮಕಾತಿ ಆದೇಶ ನೀಡಿರುವುದು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ತಿಳಿಸಿದೆ. ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಡಿ.ಆರ್ ರವಿಶಂಕರ್, ನೇಮಕದಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ. ಲಿಖಿತ ಪರೀಕ್ಷೆಯಲ್ಲಿ ಕನ್ನಡವೂ ಒಂದು ವಿಷಯವಾಗಿದೆ. ಆದರೆ ನೇಮಕ ಪರೀಕ್ಷೆಗಳನ್ನು ನಡೆಸಿ ಅನುಭವ ಇಲ್ಲದ, ಕನ್ನಡದ ಬಗ್ಗೆ ಜ್ಞಾನವಿಲ್ಲದ ಗುಜರಾತ್ನ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್ಗೆ ಅವಕಾಶ ನೀಡಲಾಗಿದೆ. ಅದಕ್ಕೂ ಮುಖ್ಯವಾಗಿ ಲಿಖಿತ ಪರೀಕ್ಷೆಯ ಫಲಿತಾಂಶವನ್ನು ಸಂದರ್ಶಕರಿಗೆ ನೀಡಿದ್ದಾರೆ. ಇದು ನಿಯಮಬಾಹಿರ. ಹಾಗಾಗಿ ತಡೆ ನೀಡಬೇಕು ಎಂದು ಕೋರಿದರು.
ಅಲ್ಲದೇ, ಅಂಕಗಳನ್ನು ತಿದ್ದಲಾಗಿದೆ. ಅದಕ್ಕಾಗಿ ಹಲವು ಅಭ್ಯರ್ಥಿಗಳಿಗೆ ಹಣಕ್ಕೆ ಬೇಡಿಕೆಯೊಡ್ಡಲಾಗಿದೆ. ಪ್ರತಿ ಅಭ್ಯರ್ಥಿಗೆ ಸುಮಾರು 30 ಲಕ್ಷದಿಂದ 50 ಲಕ್ಷ ರೂ.ಗಳವರೆಗೆ ಲಂಚ ಪಡೆಯಲಾಗಿದೆ. ನೇಮಕಾತಿಗಳು ಭಾರಿ ಅಕ್ರಮ ನಡೆದಿದೆ ಎಂದು ಆರೋಪಗಳ ಬಗ್ಗೆ ಕೆಎಂಎಫ್ಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಜೊತೆಗೆ ಮುಖ್ಯಮಂತ್ರಿಗಳಿಗೂ ನೇಮಕ ತಡೆ ಹಿಡಿಯುವಂತೆ ಕೋರಲಾಗಿದೆ. ಆದರೂ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಈ ಅಕ್ರಮ ನೇಮಕದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸಿಐಡಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಅಲ್ಲದೇ ತನಿಖೆ ಮುಗಿಯುವವರೆಗೆ ನೇಮಕ ತಡೆ ಹಿಡಿಯುವಂತೆ ಕೋರಿದ್ದ ಮನವಿಯನ್ನು ಪುರಸ್ಕರಿಸುವಂತೆಯೂ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು. ಜೊತೆಗೆ ಈ 487 ಹುದ್ದೆಗಳ ನೇಮಕದಿಂದ ಪ್ರತಿ ತಿಂಗಳು ವೇತನಕ್ಕೆ 3 ಕೋಟಿ ಮತ್ತು ವರ್ಷಕ್ಕೆ 30 ರಿಂದ 40 ಕೋಟಿ ಹೆಚ್ಚುವರಿ ವೆಚ್ಚ ತಗುಲಲಿದೆ. ಈ ಹೆಚ್ಚುವರಿ ಹುದ್ದೆಗಳ ಭರ್ತಿ ಅಗತ್ಯವಿಲ್ಲ. ಆದರೂ ನೇಮಕ ಮಾಡಲಾಗುತ್ತಿದೆ. ಇದರಿಂದ ಹಾಲು ಉತ್ಪಾದಕರ ಸಂಘಗಳ ಮೇಲೆ ಆರ್ಥಿಕ ಹೊರೆ ಬೀಳಲಿದೆ. ಈ ನೇಮಕದ ಮುಂದೆ ಸಹಕಾರ ಸಂಘಗಳ ಜತೆ ಕೆಎಂಎಫ್ ಚರ್ಚೆ ನಡೆಸಿಲ್ಲ ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ.
ಪ್ರಕರಣದ ಹಿನ್ನೆಲೆ ಏನು?: 487 ಹುದ್ದೆಗಳ ನೇಮಕಕ್ಕೆ ಕೆಎಂಎಫ್ 2022ರ ಅ.20 ರಂದು ಅಸೂಚನೆ ಹೊರಡಿಸಿತ್ತು. ಅದರ ಪ್ರಕ್ರಿಯೆ ನಡೆಸಲು ಗುಜರಾತ್ ಮೂಲದ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ ಮೆಂಟ್ ಏಜೆನ್ಸಿಯನ್ನು ನೇಮಕ ಮಾಡಿಕೊಂಡಿತ್ತು. ಪರೀಕ್ಷೆ ನಂತರ, 2023ರ ಫೆ.2ರಿಂದ 28ವರೆಗೆ ಸಂದರ್ಶನ ನಡೆಸಿ ಅಂತಿಮ ಪಟ್ಟಿ ಸಿದ್ಧಪಡಿಸಲಾಗಿತ್ತು.
ಇದನ್ನೂ ಓದಿ: ಲಿಂಗಾಯತ ಸಿಎಂ ಚರ್ಚೆ ಆಗಿದೆ, ನಿರ್ಣಯ ಕೈಗೊಂಡಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ