ಬೆಂಗಳೂರು: ಹಿಂದುಳಿದ ವರ್ಗಗಳ ವಿವಿಧ ಅಭಿವೃದ್ಧಿ ನಿಗಮಗಳ ಅಡಿ ಬೋರ್ವೆಲ್ ಕೊರೆಸುವ ಕಾಮಗಾರಿಯಲ್ಲಿ ಆಗಿರುವ ಅವ್ಯವಹಾರದ ತನಿಖೆಗೆ ವಿಧಾನ ಪರಿಷತ್ ಸದನ ಸಮಿತಿ ರಚನೆ ಮಾಡಿ ತನಿಖೆ ನಡೆಸಬೇಕು ಎಂದು ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಆಗ್ರಹಿಸಿದರು.
ಗಮನ ಸೆಳೆಯುವ ಸೂಚನೆ ಅಡಿ ಮಾತನಾಡಿದ ಅವರು, ಸರ್ಕಾರ ನೀಡಿದ ಉತ್ತರ ನನಗೆ ಸಮಾಧಾನ ತಂದಿಲ್ಲ. ಗಂಗಾ ಕಲ್ಯಾಣ ಯೋಜನೆ ಅಂತ್ಯೋದಯ ಯೋಜನೆಯಾಗಬೇಕು. ಯೋಜನೆ ಒಳ್ಳೆಯದು ಆದರೆ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ಎಡವಿದೆ. ಸರ್ಕಾರದ ಉತ್ತರ ಸಮಾಧಾನ ತರುತ್ತಿಲ್ಲ. ಸದನ ಸಮಿತಿ ಮೂಲಕ ತನಿಖೆ ನಡೆಸುವುದೇ ಸೂಕ್ತ ಎಂದರು.
31,735 ಬೋರ್ವೆಲ್ ಕೊರೆಯಲು ವಿವಿಧ ಅಭಿವೃದ್ಧಿ ನಿಗಮದ ಅಡಿ ಅನುಮತಿ ನೀಡಲಾಗಿದೆ. ಶಾಸಕರ ನೇತೃತ್ವದ ಕೋಟಾ ಅಡಿ ಶೇ.80 ರಷ್ಟು 1,110 ಕೋಟಿ ಖರ್ಚು ಮಾಡಲಾಗಿದೆ. ಶೇ.14 ರಷ್ಟು ಸಚಿವರಿಗೆ ಶೇ. 5 ರಷ್ಟು ಮಂಡಳಿಗೆ ಹಂಚಿಕೆ ಮಾಡುವ ಅವಕಾಶ ನೀಡಲಾಗಿದೆ. ಶೇ.20 ಇರುವ ತಂಡದಲ್ಲಿ 6,400 ಬೋರ್ವೆಲ್ ಕೊರೆಸಲು ಅನುಮತಿ ನೀಡಿದೆ. 225 ಕೋಟಿ ರೂ. ನೀಡಲಾಗಿದೆ. ಬೆಂಗಳೂರು ಸುತ್ತಲಿನ ಜಿಲ್ಲೆಗೆ 4 ಲಕ್ಷ ರೂ. ಪ್ರತಿ ಯೂನಿಟ್ ಗೆ ನೀಡಿದರೆ , ಬೇರೆ ಜಿಲ್ಲೆಗೆ 3 ಲಕ್ಷ ರೂ. ನೀಡಲಾಗುತ್ತಿದೆ. ಟೆಂಡರ್ ಕರೆಯದೇ ಹಲವೆಡೆ ಕಾಮಗಾರಿಗೆ ಪರವಾನಗಿ ನೀಡಲಾಗಿದೆ. ಕೊಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಗ್ರಾಮಾಂತರ, ರಾಮನಗರದಲ್ಲಿ 2 ಸಾವಿರ ಅಡಿ ಕೊರೆದರೂ ನೀರು ಸಿಗಲ್ಲ. ಆದರೆ, ಎಲ್ಲ 250 ಬೋರ್ವೆಲ್ ಗಳಲ್ಲಿ ನೀರು ಬಂದಿದೆ ಎಂದು ದಾಖಲೆ ನೀಡಿ ಹಣ ಪಡೆಯಲಾಗಿದೆ. ಇಲ್ಲೆಲ್ಲ 500 ಅಡಿಗೆ ನೀರು ಹೇಗೆ ಬರುತ್ತೆ ಎಂದು ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಪ್ರಶ್ನಿಸಿದರು.
ಬೋರ್ವೆಲ್ ಕಂಪನಿಗಳ ಹಿತಾಸಕ್ತಿ ಇದರ ಹಿಂದಿದೆ. ಸಾಕಷ್ಟು ಗೋಲ್ಮಾಲ್ ಆಗಿದೆ. ಜಾತಿ,ಮತ, ಪಕ್ಷ ಬೇಧ ಮರೆತು ತನಿಖೆ ಮಾಡಬೇಕು. ಆತ್ಮಸಾಕ್ಷಿ ಮರೆತು ಜನಪ್ರತಿನಿಧಿಗಳು ನಡೆದುಕೊಳ್ಳಬಾರದು. ಸೂಕ್ತ ತನಿಖೆ ಮಾಡಬೇಕು. ಎಸಿಬಿಗೆ ನೀಡಿದ ದೂರನ್ನು ಸರ್ಕಾರ ತಾನೇ ತನಿಖೆ ನಡೆಸುವುದಾಗಿ ತಿಳಿಸಿ ಪಡೆದಿದೆ. ವಿಧಾನ ಪರಿಷತ್ ಸದನ ಸಮಿತಿ ರಚಿಸಿ ಕಾಲಾವಕಾಶ ನೀಡಿ ತನಿಖೆಗೆ ಸೂಚಿಸಬೇಕು ಎಂದರು.
ಕಾಂಗ್ರೆಸ್ ಸದಸ್ಯ ಅಪ್ಪಾಜಿಗೌಡ ಮಾತನಾಡಿ, ಎಲ್ಲ ಅಭಿವೃದ್ಧಿ ನಿಗಮಗಳ ಅಡಿ ಅವ್ಯವಹಾರ ಆಗಿದೆ. ಬೋರ್ವೆಲ್ ಮಾಫಿಯಾ ದೊಡ್ಡದಿದೆ. ಸರ್ಕಾರ ನಿಯಂತ್ರಿಸುವ ಹಲವು ಮಾಫಿಯಾಗಳ ಮಟ್ಟಕ್ಕೆ ಇದೂ ಬೆಳೆದು ನಿಂತಿದೆ. ಬೋರ್ವೆಲ್ ಕೊರೆಯಲು ಸರ್ಕಾರ ಹಣ ನೀಡಿದರೂ, 500 ಅಡಿ ಕೊರೆಸಿ ನಂತರ ಹಣ ಕೊಟ್ಟರೆ ಮಾತ್ರ ಬೋರ್ವೆಲ್ ಕೊರೆಸುವುದಾಗಿ ಫಲಾನುಭವಿಗಳಿಗೆ ಹೇಳುತ್ತಾರೆ. ಇಂತಹ ಸ್ಥಿತಿ ಇದೆಯೇ? ಈ ಮಾಫಿಯಾ ಮಟ್ಟ ಹಾಕಬೇಕಿದೆ. ಎಲ್ಲ ಅಭಿವೃದ್ಧಿ ನಿಗಮಗಳ ಮುಖ್ಯಸ್ಥರ ಸದನ ಸಮಿತಿ ರಚಿಸಬೇಕು. ಬೋರ್ವೆಲ್ ಕೊರೆಸಿದರೂ ವಿದ್ಯುತ್ ಸಂಪರ್ಕ ನೀಡಲು ಎರಡು ವರ್ಷ ಕಾಯಿಸುತ್ತಾರೆ ಎಂದರು.
ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮಾತನಾಡಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳು, ಭ್ರಷ್ಟಾಚಾರ ಅಭಿವೃದ್ಧಿ ನಿಗಮಗಳಾಗಿವೆ ಎಂಬ ಅನುಮಾನ ಕಾಡುತ್ತಿದೆ. ಶತಮಾನಗಳಿಂದ ಹಿಂದುಳಿದ, ತುಳಿತಕ್ಕೊಳಗಾದ ಸಮುದಾಯದವರಿಗೆ ಈಗಾಗಲೇ ಸಾಕಷ್ಟು ಅನ್ಯಾಯವಾಗಿದೆ. ಇನ್ನಷ್ಟು ಅನ್ಯಾಯ ಆಗಬಾರದು. ಮಹತ್ವದ ಯೋಜನೆ ಅವ್ಯವಹಾರಕ್ಕೆ ಅವಕಾಶ ಆಗಬಾರದು. ಆರ್ಥಿಕ ದುಃಸ್ಥಿತಿಯಲ್ಲಿರುವವರಿಗೆ ಶೇ.100 ರಷ್ಟು ಅನ್ಯಾಯವಾಗಲಿದೆ. ಇದು ಅಕ್ಷಮ್ಯ, ಮಟ್ಟ ಹಾಕಲೇಬೇಕು. ಇಂತಹ ಅವ್ಯವಹಾರ ನಡೆಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಅವರ ಬಳಿಯಲ್ಲೇ ನಷ್ಟದ ಹಣ ವಸೂಲಿ ಮಾಡಬೇಕು. ಸದನ ಸಮಿತಿ ರಚಿಸಬೇಕು ಎಂದು ಕೇಳುವುದು ನಿಜಕ್ಕೂ ಬೇಸರದ ಸಂಗತಿ. ಅವ್ಯವಹಾರ ತಡೆಗೆ ಸದನ ಸಮಿತಿ ರಚಿಸಿ ಅದರ ಮೂಲಕವೇ ತನಿಖೆ ಆಗಲಿ ಎಂದರು.
ಸಭಾ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಉತ್ತರ ನೀಡಿ, ಅನೇಕರು ಮುಕ್ತ ಚರ್ಚೆ ನಡೆಸಿ ವಿವಿಧ ಅಭಿವೃದ್ಧಿ ನಿಗಮದ ಅಡಿ ಆಗಿರುವ ಬೋರ್ವೆಲ್ ಕೊರೆಸುವ ಕಾರ್ಯದಲ್ಲಿ ಆದ ಅನ್ಯಾಯದ ವಿಚಾರ ಪ್ರಸ್ತಾಪಿಸಿದ್ದಾರೆ. ಇದರ ತನಿಖೆಗೆ ಸರ್ಕಾರ ಮುಕ್ತವಾಗಿದೆ. ಯಾರೇ ತಪ್ಪಿತಸ್ಥರಿದ್ದರೂ ಸರ್ಕಾರ ಕ್ರಮ ಕೈಗೊಳ್ಳಲಿದೆ. ಎರಡು ತನಿಖಾ ತಂಡ ರಚನೆಯಾಗಿದ್ದು, ಕೋವಿಡ್ ಹಿನ್ನೆಲೆ ತನಿಖೆಯ ಹಿನ್ನಡೆ ಆಗಿದೆ. ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಅವರು ಇನ್ನೆರಡು ತಿಂಗಳಲ್ಲಿ ವರದಿ ನೀಡಬಹುದು. ಕಾಯುವುದು ಉತ್ತಮ ಎಂದರು.
ಸದನ ಸಮಿತಿ ರಚನೆಗೆ ಪರಿಷತ್ನಲ್ಲಿ ತೀವ್ರ ಒತ್ತಾಯ ಕೇಳಿ ಬಂದ ಹಿನ್ನೆಲೆ ಸಭಾ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಸದನ ಸಮಿತಿ ರಚಿಸಲು ಸಹಮತವಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವರ ಜತೆ ಚರ್ಚಿಸಿ ಸಮಿತಿ ಸದಸ್ಯರ ಆಯ್ಕೆ ಮಾಡುತ್ತೇವೆ ಎಂದು ಭರವಸೆ ನೀಡಿದರು.