ಬೆಂಗಳೂರು: ಗ್ಯಾಂಬ್ಲಿಂಗ್ ಶೋಕಿಗೆ ಬಿದ್ದು, ಹಣ ಮಾಡುವ ಉದ್ದೇಶದಿಂದ ಮನೆಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಉತ್ತರ ವಿಭಾಗದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಯಪತಿ ವೆಂಕಣ್ಣ ಅಲಿಯಾಸ್ ವೆಂಕಯ್ಯ ಬಂಧಿತ ಆರೋಪಿಯಾಗಿದ್ದು, ಈತನಿಂದ 30 ಲಕ್ಷ ಬೆಲೆಬಾಳುವ 600 ಗ್ರಾಂ ಚಿನ್ನಾಭರಣ, 5 ಕೆ.ಜಿ ಬೆಳ್ಳಿ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಆರೋಪಿ ಮನೆಯ ಬಳಿ ಯಾರು ಇಲ್ಲದೇ ಇರುವುದು, ಕಸ ಗುಡಿಸದೇ ಹಾಗೆ ಬಿಟ್ಟ ಸ್ಥಳಗಳನ್ನು ಟಾರ್ಗೆಟ್ ಮಾಡಿಕೊಂಡು ಮನೆ ಬಾಗಿಲು ಒಡೆದು ಹಗಲು ಕಳ್ಳತನ ಮಾಡುತ್ತಿದ್ದ. ಮಹಾಲಕ್ಷೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಬಳಿ ಯೋಗೇಶ್ ಎಂಬುವರ ಮನೆಯಲ್ಲಿ ಯಾರು ಇಲ್ಲದನ್ನು ಕಂಡು ಕೈಚಳಕ ತೋರಿಸಿದ್ದ.
ಹೀಗಾಗಿ ಯೋಗೇಶ್ ನೀಡಿದ ದೂರಿನ ಆಧಾರದ ಮೇಲೆ ಮಹಾಲಕ್ಷ್ಮೀ ಲೇಔಟ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ತಂಡ ರಚಿಸಿ ಮನೆಯ ಬಳಿ ಅಲ್ಲೇ ಇದ್ದ ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗೆ ಜೂಜಾಟದ ಹವ್ಯಾಸವಿದ್ದು, ಈತನು 2010ನೇ ಸಾಲಿನಲ್ಲಿ ಆಂಧ್ರಪ್ರದೇಶದ ಗುಂಟೂರು ಮತ್ತು ವಿಜಯವಾಡ ಜಿಲ್ಲೆಗಳಲ್ಲಿ 36 ಕಳವು ಪ್ರಕರಣದಲ್ಲಿ ಭಾಗಿಯಾಗಿ ಈಗಾಗಲೇ 5 ಬಾರಿ ಜೈಲು ಶಿಕ್ಷೆ ಅನುಭವಿಸಿದ್ದ.
ನಂತರ ಮತ್ತೆ ಅದೇ ಚಾಳಿ ಮುಂದುವರೆಸಿ 2012ರಲ್ಲಿ ಬಳ್ಳಾರಿಯಲ್ಲಿ ಒಂದು ಕಳವು ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಆಂಧ್ರಪ್ರದೇಶಕ್ಕೆ ತೆರಳಿದ್ದ. ಅಲ್ಲಿಂದ ಮತ್ತೆ 2020ರಲ್ಲಿ ನಗರದ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾಡ್ಜ್ ಮಾಡಿಕೊಂಡಿದ್ದ.
ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದ. ಕಳ್ಳತನ ಮಾಡಿದ ವಾಹನದಲ್ಲಿ ಸಿಟಿ ರೌಂಡ್ಸ್ ಹಾಕಿ ಮಹಾಲಕ್ಷ್ಮೀ ಲೇಔಟ್ ಬಳಿ ಮನೆ ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಇದರ ಬಗ್ಗೆ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಮಾತನಾಡಿ, ಹಲವಾರು ಬಾರಿ ಜೈಲು ಪಾಲಾಗಿದ್ದರು ಬುದ್ಧಿ ಕಲಿಯದೇ ಮತ್ತೆ ಅದೇ ರೀತಿ ಮನೆಗಳ್ಳತನ ಮಾಡಿದ್ದಾನೆ. ಆಂಧ್ರಪ್ರದೇಶದಲ್ಲಿ ಈತನ ವಿರುದ್ಧ ಬಹಳಷ್ಟು ಪ್ರಕರಣ ದಾಖಲಾಗಿ ಆರೆಸ್ಟ್ ಆಗಿದ್ದ. ಅಲ್ಲಿ ಕಳ್ಳತನ ಮಾಡಿ ಮತ್ತೆ ಮತ್ತೆ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳುವ ಕಾರಣ ನಮ್ಮ ರಾಜ್ಯಕ್ಕೆ ಬಂದು ನಗರದ ಲಾಡ್ಜ್ನಲ್ಲಿದ್ದು, ಹಗಲು ಲಾಕ್ ಇರುವ ಮನೆ ಕಳ್ಳತನ ಮಾಡ್ತಿದ್ದ.
ದೊಡ್ಡ ದೊಡ್ಡ ಮಟ್ಟದ ಗ್ಯಾಂಬ್ಲಿಗ್ ಮಾಡಿ ದುಡ್ಡು ಖಾಲಿ ಮಾಡ್ತಿದ್ದ. ಸದ್ಯ ಈತನ ಬಂಧನವಾಗಿದ್ದು ಆರೋಪಿ ಬಳಿಯಿಂದ 30 ಲಕ್ಷ ಬೆಲೆಬಾಳುವ 600ಗ್ರಾಂ ಚಿನ್ನಾಭರಣ 5ಕೆ.ಜಿ ಬೆಳ್ಳಿ ವಸ್ತುಗಳನ್ನ ವಶಪಡಿಸಿದ್ದಾಗಿ ತಿಳಿಸಿದ್ದಾರೆ.