ಬೆಂಗಳೂರು : ನ್ಯಾ. ಸದಾಶಿವ ಆಯೋಗದ ವರದಿಯನ್ನು ಸರ್ಕಾರ ಒಪ್ಪಿಲ್ಲ, ಜನಗಣತಿ ಆಧಾರದ ಮೇಲೆ ಮೀಸಲಾತಿ ನಿರ್ಣಯ ಮಾಡಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ವರ್ಗೀಕರಣದಲ್ಲಿ ಯಾರಿಗೂ ಅನ್ಯಾಯವಾಗಿಲ್ಲ ಹಾಗು ಮೋಸವಾಗಿಲ್ಲ. ಎಲ್ಲರಿಗೂ ಸರಿಯಾಗಿ ಮೀಸಲಾತಿ ಹಂಚಿಕೆ ಮಾಡಲಾಗಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸ್ಪಷ್ಟಪಡಿಸಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಪ್ರಭು ಚವ್ಹಾಣ್ ಅವರು, ಸಚಿವ ಸಂಪುಟದಲ್ಲಿ ಒಳಮೀಸಲಾತಿ ನೀಡಿದ್ದಾರೆ ಇದರ ಬಗ್ಗೆ ಪ್ರಭು ಚವ್ಹಾಣ್ ವಿರೋಧ ಮಾಡಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಂತು, ನಾನು ಪತ್ರ ಕೊಟ್ಟಿರೋದು ನಿಜ ಆದರೆ ನಾನು ಯಾವ ತಿಂಗಳಿನಲ್ಲಿ ಪತ್ರ ಕೊಟ್ಟಿದ್ದೇನೆ ಎನ್ನುವುದನ್ನು ನೋಡಿ. ನಾನು ಕಳೆದ ಫೆಬ್ರವರಿಯಲ್ಲಿ ಕೊಟ್ಟಿರೋದು. ಆದರೆ ಸಚಿವ ಸಂಪುಟದಲ್ಲಿ ಮೊನ್ನೆ ಸರಿಯಾಗಿ ಚರ್ಚೆಯಾಗಿ ಒಳಮೀಸಲಾತಿ ಹಂಚಲಾಗಿದೆ. ಇದಕ್ಕೆ ಸಮ್ಮತಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ. ನಮ್ಮ ಸಮಾಜ ಸೇರಿ ಎಲ್ಲಾ ಸಮಾಜಕ್ಕೆ ಯಾವುದೇ ಅನ್ಯಾಯವಾಗಿಲ್ಲ ಹಾಗಾಗಿ ನಾನು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನ್ಯಾಯಯುತವಾಗಿ ಮೀಸಲಾತಿ ಹಂಚಿಕೆ : ಈ ಮೀಸಲಾತಿ ಹಂಚಿಕೆಯಿಂದ ಯಾರಿಗೂ ಅನ್ಯಾಯವಾಗಿಲ್ಲ ಯಾರಿಗೂ ಮೋಸ ಆಗಿಲ್ಲ ನಮ್ಮ ಮುಖ್ಯಮಂತ್ರಿಯವರು ಸಂವಿಧಾನಬದ್ಧವಾಗಿ ನ್ಯಾಯವನ್ನ ಕೊಟ್ಟಿದ್ದಾರೆ. ಬಂಜಾರ, ಭೋವಿ, ಕೊರಮ ಕೊರಚರನ್ನು ಎಸ್ಸಿ ಪಂಗಡದಿಂದ ಹೊರಗೆ ಹಾಕಬೇಕು ಅನ್ನೋದರ ಬಗ್ಗೆ ನ್ಯಾಷನಲ್ ಕಮೀಷನ್ನಿಂದ ಪತ್ರ ಬಂತು. ಆದರೆ ನಮ್ಮ ಸಿಎಂ ಅದ್ಯಾವುದು ಮಾಡಲ್ಲ ಎಂದು ಹೇಳಿ ನ್ಯಾಯಯುತವಾಗಿ ಮೀಸಲಾತಿ ಹಂಚಿಕೆ ಮಾಡಿದ್ದಾರೆ. ಸದಾಶಿವ ಆಯೋಗ ವರದಿ ಇನ್ನೂ ಬಹಿರಂಗವಾಗಿಲ್ಲ. ಅದರ ಮೇಲೆ ಮೀಸಲಾತಿ ಹಂಚಿಕೆ ಮಾಡಬಾರದು ಎಂದು ನಾನು ಹೇಳಿದ್ದೆ. ಆದರೆ ನ್ಯಾ. ಸದಾಶಿವ ಆಯೋಗದ ವರದಿಯನ್ನು ಸರ್ಕಾರ ಒಪ್ಪದೆ, ಆಯೋಗದ ವರದಿಯನ್ನು ಕ್ಯಾಬಿನೆಟ್ ನಲ್ಲಿ ನಮ್ಮ ಮುಖ್ಯಮಂತ್ರಿ ಬೊಮ್ಮಾಯಿ ರಿಜೆಕ್ಟ್ ಮಾಡಿ ನಮಗೆ ಯಾವುದೇ ಅನ್ಯಾಯವಾಗದಂತೆ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಪ್ರಭು ಚವ್ಹಾಣ್ ಹೇಳಿದರು.
ಬಿಜೆಪಿ ಮಾತ್ರವೇ ನ್ಯಾಯ ಕೊಡಲು ಸಾಧ್ಯ : ನಂತರ ಮಾತನಾಡಿದ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಸರ್ಕಾರ ಮೀಸಲಾತಿ ವಿಚಾರದಲ್ಲಿ ಸ್ಪಷ್ಟನೆ ಕೊಟ್ಟಿದೆ. ಸದಾಶಿವ ಆಯೋಗದ ವರದಿ ಒಪ್ಪಿಲ್ಲ, ಮಾದಿಗ 6% ಬಲಗೈ ಸಮುದಾಯ 5% ಬೋವಿ ಸೇರಿದಂತೆ ಉಳಿದ ಸಮುದಾಯಕ್ಕೆ 4% ಕೊಟ್ಟಿದ್ದಾರೆ. ಈಗ ನಮ್ಮ ಸಂಪುಟದಲ್ಲಿ ಮಾದಿಗ ದ್ರಾವಿಡ ಸಮುದಾಯಕ್ಕೆ 6% ಮೀಸಲಾತಿ, ಛಲವಾದಿ ಚನ್ನದಾಸರ ಹೊಲೆಯ ಸೇರಿ ಐದು ಜಾತಿಗಳಿಗೆ 5.5% ಮೀಸಲಾತಿ, ಬಂಜಾರ, ಭೋವಿ ಕೊರಚ ಜಾತಿಗೆ 4.5% ಮೀಸಲಾತಿ ನೀಡಲಾಗಿದೆ. ಉಳಿದ ಅಸ್ಪೃಶ್ಯತೆಗೆ ಒಳಗಾದ 88 ಜಾತಿಗಳಿಗೆ 1% ಮೀಸಲಾತಿ ಇದೆ. ಇದಕ್ಕೆ ಯಾವುದೇ ಸರ್ಕಾರ ಕ್ರಮ ಜರುಗಿಸುವುದಿಲ್ಲ. ಇದಕ್ಕೆ ಬಿಜೆಪಿ ಮಾತ್ರವೇ ನ್ಯಾಯ ಕೊಡಲು ಸಾಧ್ಯ ಎಂದರು.
ಕಾಗೆ ಹಾರಿಸುವ ಪ್ರಶ್ನೆ ಅಲ್ಲ- ನಾರಾಯಣಸ್ವಾಮಿ : ಕಾಂಗ್ರೆಸ್ ಸರ್ಕಾರ ಸದಾಶಿವ ಆಯೋಗವನ್ನು ನೇಮಕ ಮಾಡಿತ್ತು. ಅಂದು ಐದು ವರ್ಷಗಳ ಕಾಲ ಸಿಎಂ ಆಗಿದ್ದ ಸಿದ್ದರಾಮಯ್ಯ ಈ ಬಗ್ಗೆ ಯಾವುದೇ ಪ್ರಸ್ತಾಪ ಮಾಡಲಿಲ್ಲ. ಈಗ ನಮ್ಮ ಮೇಲೆ ಒತ್ತಡ ಇತ್ತು ಸಮಿತಿ ರಚನೆ ಮಾಡಿ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ದಿಟ್ಟ ಹೆಜ್ಜೆ ಇಟ್ಟು ಜಾರಿ ಮಾಡಿದ್ದಾರೆ. ಇದೀಗ ಎಲ್ಲದಕ್ಕೂ ಗೊಂದಲ ಎಳೆಯುವ ಪ್ರಯತ್ನ ಮಾಡುತ್ತೇವೆ. ನಾವು ದಿಟ್ಟತನದಿಂದ ಇವತ್ತು ಜಾರಿಗೆ ತಂದಿದ್ದೇವೆ. ಇದು ಕಾಗೆ ಹಾರಿಸುವ ಪ್ರಶ್ನೆ ಅಲ್ಲ, ನಮ್ಮ ಕೆಲಸ ನಾವು ಮಾಡಿದ್ದೇವೆ. ಒಂದಷ್ಟು ಪ್ರೋಸೆಸ್ ಇದೆ, ಬದ್ಧತೆಯಿಂದಲೇ ಮೀಸಲಾತಿ ತಂದೇ ತರುತ್ತೇವೆ. ನಾವು ದಲಿತರನ್ನು ಕಾಪಾಡುತ್ತೇವೆ ಎಂದು ಹೇಳಿಕೊಳ್ಳುವವರು ಪ್ರಶ್ನೆ ಮಾಡಿಕೊಳ್ಳಲಿ ಎಂದು ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಇದೇ ಸಂದರ್ಭದಲ್ಲಿ ಯಾರದೋ ಮೀಸಲಾತಿ ನಮಗ್ಯಾಕೆ ಎಂಬ ಕಾಂಗ್ರೆಸ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಛಲವಾದಿ ನಾರಾಯಣಸ್ವಾಮಿ, ಮೀಸಲಾತಿ ತೆಗೆದುಕೊಳ್ಳುವವರು ಬಿಕ್ಷುಕರಾ..? ಮುಸ್ಲಿಂರಿಗೆ 4% ಮೀಸಲಾತಿ ಇದೆ. ಯಾವ ಸಂವಿಧಾನದಲ್ಲಿ ಮುಸ್ಲಿಂರಿಗೆ ಮೀಸಲಾತಿ ಕೊಡಬೇಕು ಅಂತಿದೆ..? ಕಡಿಮೆ ಪ್ರಮಾಣ ಜನರಿಗೆ ಇಷ್ಟು ಮೀಸಲಾತಿ ಕೊಡಬೇಕಾ..? ಧರ್ಮಕ್ಕೆ ಮೀಸಲಾತಿ ಇಲ್ಲ ಎಂದರು.
ನಳಿನ್ ಕುಮಾರ್ ಕಟೀಲ್ಗೆ ಅಭಿನಂದನೆ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ವರ್ಗೀಕರಣದ ದಿಟ್ಟ ನಿರ್ಧಾರವನ್ನು ಕೈಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದ ನಿರ್ಣಯವನ್ನು ಹಾರ್ದಿಕವಾಗಿ ಸ್ವಾಗತಿಸಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಬೆಂಗಳೂರಿನಲ್ಲಿ ಇಂದು ಎಸ್‌ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ದಲಿತ ಮುಖಂಡರು ಅಭಿನಂದಿಸಿ ಸನ್ಮಾನಿಸಿದರು.
ಇದನ್ನೂ ಓದಿ : ಅಮಿತ್ ಶಾ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ: ಚುನಾವಣಾ ಕಾರ್ಯತಂತ್ರ ಚರ್ಚೆ