ಬೆಂಗಳೂರು : ಅಕ್ರಮ ಪಿಸ್ತೂಲ್‌ಗಳು ಮತ್ತು ಜೀವಂತ ಗುಂಡುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮಹಾರಾಷ್ಟ್ರ ಮೂಲದ ಇಬ್ಬರು ಆರೋಪಿಗಳನ್ನ ಸಿಸಿಬಿಯ ಸಂಘಟಿತ ಅಪರಾಧ ದಳ (ಪಶ್ಚಿಮ)ದ ಅಧಿಕಾರಿ ಹಾಗೂ ಸಿಬ್ಬಂದಿ ತಂಡ ಬಂಧಿಸಿದೆ. ರಾಹುಲ್ ಸತೀಶ್ ಮಾನೆ ಹಾಗೂ ಮಲಿಕ್ ಬಂಧಿತ ಆರೋಪಿಗಳು. ಬಂಧಿತರಿಂದ 2 ಕಂಟ್ರಿಮೇಡ್ ಪಿಸ್ತೂಲ್, 9 ಜೀವಂತ ಗುಂಡುಗಳು, ಒಂದು ಸ್ವಿಫ್ಟ್ ಡಿಸೈರ್ ಕಾರ್ ಸೇರಿ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜನವರಿ 14ರಂದು ಬೆಳಗ್ಗೆ ಸುಮಾರು 11-30ರ ಸುಮಾರಿಗೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳ ರಿಂಗ್ ರಸ್ತೆಯ ಕೆರೆ ಬಳಿ ಅಕ್ರಮ ಪಿಸ್ತೂಲ್‌ಗಳು ಮತ್ತು ಜೀವಂತ ಗುಂಡುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ದಾಳಿ ನಡೆಸಿದ ಸಿಸಿಬಿಯ ಸಂಘಟಿತ ಅಪರಾಧ ದಳ (ಪಶ್ಚಿಮ) ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಮುಖ ಆರೋಪಿ ರಾಹುಲ್ ಸತೀಶ್ ಮಾನೆ ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವ ಏಜೆಂಟ್ ಆಗಿದ್ದ. ಆತನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಮಹಾರಾಷ್ಟ್ರದ ಮೀರಜ್ ಮಹಾತ್ಮಗಾಂಧಿ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಮೀರಜ್ ಟೌನ್ ಪೊಲೀಸ್ ಠಾಣೆಯಲ್ಲಿ 1, ಸಾಂಗ್ಲಿ ವೆಲ್‌ವಾಡಿ ಪೊಲೀಸ್ ಠಾಣೆಯಲ್ಲಿ 1, ಮೀರಜ್‌ನ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಹಾಗು ಕರ್ನಾಟಕದ ಬೆಂಗಳೂರು ನಗರ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಇರುವುದು ತನಿಖೆಯಿಂದ ತಿಳಿದುಬಂದಿರುತ್ತದೆ.
ಒಂದು ವರ್ಷ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆರೋಪಿ, ಆ ಸಮಯದಲ್ಲಿ ಪರಿಚಯವಾಗಿದ್ದ ರೌಡಿಗಳಿಗೆ ಪಿಸ್ತೂಲ್‌ಗಳನ್ನು ಮಾರಾಟ ಮಾಡಲು ಬೆಂಗಳೂರಿಗೆ ಬಂದಿರುವುದರ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ತನಿಖೆ ಮುಂದುವರೆಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರು ತಿಳಿಸಿದ್ದಾರೆ.
ಮೂವರ ಬಂಧಿಸಿ ಪಿಸ್ತೂಲ್, 24 ಜೀವಂತ ಗುಂಡುಗಳು ವಶ (ಪ್ರತ್ಯೇಕ ಸುದ್ದಿ): ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಕೆಲ ದಿನಗಳ ಹಿಂದಷ್ಟೇ ಜಾಮೀನು ಪಡೆದು ಜೈಲಿನಿಂದ ಹೊರಬಂದು ಮತ್ತೆ ಹಳೆ ಕಾಯಕ ಮುಂದುವರೆಸಿದ್ದ. ಯಾರಿಗೂ ಗೊತ್ತಾಗದಂತೆ ಮನೆಯಲ್ಲಿ ಪಿಸ್ತೂಲ್ ಖರೀದಿ ವ್ಯವಹಾರದಲ್ಲಿ ತೊಡಗಿದ್ದ ಪ್ರಮುಖ ಆರೋಪಿ ಸೇರಿದಂತೆ ಮೂವರು ಆರೋಪಿಗಳನ್ನು ಅಕ್ರಮ ಪಿಸ್ತೂಲ್ ಮಾರಾಟ ಪ್ರಕರಣದಡಿ ಬಾಣಸವಾಡಿ ಪೊಲೀಸರು (ಜುಲೈ 14-21) ಬಂಧಿಸಿದ್ದರು.
ಸಂಪಿಗೆಹಳ್ಳಿ ರೌಡಿಶೀಟರ್ ಫಯಾಜ್ ವುಲ್ಲಾ, ಶಿವಾಜಿನಗರ ಠಾಣೆ ರೌಡಿಶೀಟರ್ ಮೊಹಮ್ಮದ್ ಅಲಿ ಹಾಗೂ ಸೈಯ್ಯದ್ ಸಿರಾಜ್ ಅಹಮದ್ ಎಂಬುವರನ್ನು ಬಂಧಿಸಿ 3 ಕಂಟ್ರಿ ಮೇಡ್ ಪಿಸ್ತೂಲ್ ಹಾಗೂ 24 ಜೀವಂತ ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದರು.
ಇದನ್ನೂ ಓದಿ: ಅಕ್ರಮ ಪಿಸ್ತೂಲ್ ಮಾರಾಟ: ಮೂವರ ಬಂಧಿಸಿ ಪಿಸ್ತೂಲ್, 24 ಜೀವಂತ ಗುಂಡುಗಳು ವಶ