ಬೆಂಗಳೂರು: ಅವೆಂಜರ್ ಸಿನಿಮಾ ನೋಡಲು ಬಂದಿದ್ದ ಯುವಕನೊಬ್ಬ ರಾಷ್ಟ್ರಗೀತೆ ವೇಳೆ ಎದ್ದು ನಿಲ್ಲದೆ ಅವಮಾನ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾದ ಘಟನೆ ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೇ 7ರಂದು ಸಂಜೆ 5.30ಕ್ಕೆ ನಗರದ ಗರುಡ ಮಾಲ್‌ನಲ್ಲಿ ಅವೆಂಜರ್ ಸಿನಿಮಾ ನೋಡಲು ಬಂದಿದ್ದ ಯುವಕ ಜಿತಿನ್ ಬಂಧನಕ್ಕೊಳಗಾದವ. ಈತ ಸಿನಿಮಾ ಹಾಲ್ನಲ್ಲಿ ರಾಷ್ಟ್ರಗೀತೆ ಆರಂಭವಾದಾಗ ಎದ್ದು ನಿಲ್ಲದೆ ಅಗೌರವ ತೋರಿದ್ದಾನೆ. ಇದನ್ನು ನೋಡಿದ ಸಾರ್ವಜನಿಕರು ಆತನನ್ನು ಪ್ರಶ್ನೆ ಮಾಡಿದ್ದಾರೆ. ಆದರೂ ಕೂಡ ಯಾರ ಮಾತಿಗೂ ತಲೆ ಕೆಡಿಸಿಕೊಳ್ಳದೆ ಸುಮ್ಮನೆ ಕುಳಿತಿದ್ದ ಎನ್ನಲಾಗಿದೆ.
ಈ ಬಗ್ಗೆ ಕೂಡಲೇ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಅಶೋಕನಗರ ಪೊಲೀಸರು, ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಜಿತಿನ್ನನ್ನು ಬಂಧಿಸಿದ್ದರು. ಬಳಿಕ ಜಿತಿನ್ ಜಾಮೀನಿನ ಮೇಲೆ ಹೊರಬಂದಿದ್ದಾನೆ.