ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯೋಜನೆ (ಕೇಂದ್ರ) ವಿಭಾಗ ಮತ್ತು ಬೃಹತ್ ನೀರುಗಾಲುವೆ ವಿಭಾಗದ ಅಡಿಯಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಆಡಳಿತಾಧಿಕಾರಿ ಇಂದು ತಪಾಸಣೆ ನಡೆಸಿದರು.
ಈ ವೇಳೆ ಪೂರ್ವ ವಲಯ ಜಂಟಿ ಆಯುಕ್ತರು (ಪೂರ್ವ) ಪಲ್ಲವಿ.ಕೆ.ಆರ್, ಮುಖ್ಯ ಅಭಿಯಂತರು ಯೋಜನೆ ಕೇಂದ್ರ ಎನ್.ರಮೇಶ್, ಮುಖ್ಯ ಅಭಿಯಂತರರು (ರಸ್ತೆ ಮೂಲಭೂತ ಸೌಕರ್ಯ/ಬೃಹತ್ ನೀರುಗಾಲುವೆ) ಪ್ರಹ್ಲಾದ್, ಮುಖ್ಯ ಅಭಿಯಂತರರು (ಯೋಜನೆ) ರಮೇಶ್, ಮುಖ್ಯ ಅಭಿಯಂತರರು (ಪೂರ್ವ) ಪ್ರಭಾಕರ್ ಮತ್ತು ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಇಂದಿರಾನಗರ 80 ಅಡಿ ರಸ್ತೆ ತಪಾಸಣೆ:
ಇಂದಿರಾನಗರ 80 ಅಡಿ ರಸ್ತೆಯಲ್ಲಿ ಸುಮಾರು 1.87 ಕಿ.ಮೀ. ಉದ್ದದ ರಸ್ತೆಯನ್ನು ವೈಟ್ ಟಾಪಿಂಗ್ ಕಾಮಗಾರಿಯನ್ನು ಕೈಗೊಂಡಿದ್ದು, ರಸ್ತೆಯ ವೈಟ್ ಟಾಪಿಂಗ್ ಅಳವಡಿಸುವ ಕಾಮಗಾರಿ ಪೂರ್ಣಗೊಂಡು ಪಾದಚಾರಿ ಮಾರ್ಗ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿರುತ್ತದೆ. ಪ್ರಸ್ತುತ ಪಾದಚಾರಿ ಮಾರ್ಗದಲ್ಲಿ ಬೆಸ್ಕಾಂ ಇಲಾಖೆಯ ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್ಫಾರ್ಮರ್ಗಳು ಸ್ಥಳಾಂತರಿಸುವುದು ಬಾಕಿ ಉಳಿದಿದೆ.
ಈ ಸಂಬಂಧ ಬೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿ ಕೂಡಲೆ ಕಾಮಗಾರಿಯನ್ನು ಕೈಗೊಳ್ಳಲು ಸೂಚಿಸಿದರು. ಮುಖ್ಯ ಅಭಿಯಂತರರು ಯೋಜನೆ (ಕೇಂದ್ರ) ಮತ್ತು ತಾಂತ್ರಿಕ ನಿರ್ದೇಶಕರು (ಬೆಸ್ಕಾಂ) ಜಂಟಿ ತಪಾಸಣೆ ನಡೆಸಿ ಸದರಿ ಕಂಬಗಳನ್ನು ತೆಗೆದು ಭೂಮಿಯ ಒಳಗೆ ಕೇಬಲ್‌ಗಳನ್ನು ಅಳವಡಿಸುವ ಕುರಿತು ಕ್ರಮ ಕೈಗೊಳ್ಳಬೇಕೆಂದು ತಿಳಿಸುತ್ತಾ, ಬಫರ್ ಝೋನ್‌ನಲ್ಲಿ ಗಿಡಗಳನ್ನು ನೆಡುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಇದೇ ರಸ್ತೆಯಲ್ಲಿ ವಿವಿಧ ಸಮಸ್ಯೆಗಳ ಕುರಿತು ಅಲ್ಲಿನ ನಿವಾಸಿಗಳು ಆಡಳಿತ ಅಧಿಕಾರಿಗೆ ಮನವಿ ಸಲ್ಲಿಸಿ, ಈ ಜಾಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಹಾಗಾಗಿ ಕೂಡಲೇ ಈ ಭಾಗದ ರಸ್ತೆಯನ್ನು ಪೂರ್ಣಗೊಳಿಸಬೇಕೆಂದು ಕೋರಿದರು. ಈ ಬಗ್ಗೆ ಮುಖ್ಯ ಅಭಿಯಂತರರು ಮಾತನಾಡಿ, ಸುಮಾರು 15 ಮೀ. ಕಾಮಗಾರಿ ಬಾಕಿ ಇದ್ದು, ಕಲ್ವರ್ಟ್ ಕೆಲಸ ಮುಕ್ತಾಯವಾದರೆ ರಸ್ತೆ ಪೂರ್ಣಗೊಳಿಸುವುದಾಗಿ ತಿಳಿಸಿದರು. ಈ ಕುರಿತು ಎರಡು ವಿಭಾಗದ ಮುಖ್ಯ ಅಭಿಯಂತರರುಗಳು ಕಲ್ವರ್ಟ್ ಅವಶ್ಯಕತೆಯ ಕುರಿತು ತಾಂತ್ರಿಕವಾಗಿ ಪರಿಶೀಲಿಸಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಇಂದಿರಾನಗರ 100 ಅಡಿ ರಸ್ತೆ ತಪಾಸಣೆ:
ಇಂದಿರಾನಗರ 100 ಅಡಿ ರಸ್ತೆಯಲ್ಲಿ ಸುಮಾರು 2.60 ಕಿ.ಮೀ ಉದ್ದದ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿಯನ್ನು ಕೈಗೊಂಡಿದ್ದು, ಟೆಂಡರ್ ಅನುಮೋದನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಮುಖ್ಯ ಅಭಿಯಂತರರು ತಿಳಿಸಿದರು. ಈ ರಸ್ತೆಯಲ್ಲಿ 4 ಪಥದ ಅಗಲಕ್ಕೆ ರಸ್ತೆಗೆ ವೈಟ್ ಟಾಪಿಂಗ್ ಅಳವಡಿಸಲು ಯೋಜಿಸಿದ್ದು, ಇದರ ವಿನ್ಯಾಸವನ್ನು ಪರಿಶೀಲಿಸಿ 6 ಪಥದ ಅಗಲ ರಸ್ತೆ ಮಾಡಲು ಅವಕಾಶವಿದೆಯೇ ಎಂಬ ಬಗ್ಗೆ ಪರಿಶೀಲಿಸಲು ಸೂಚಿಸಿದರು. ಇದೇ ರಸ್ತೆಯಲ್ಲಿ ರಸ್ತೆ ಮೂಲಭೂತಸೌಕರ್ಯ ವಿಭಾಗದಿಂದ ಬೈಸಿಕಲ್ ಲೇನ್ ಅಳವಡಿಸಲು ವಿನ್ಯಾಸ ಅಂತಿಮಗೊಳಿಸಿ, ವೈಟ್ ಟಾಪಿಂಗ್ ಯೋಜನೆಯ ವಿನ್ಯಾಸದೊಂದಿಗೆ ಸಮೀಕರಿಸಿ ಕಾಮಗಾರಿಯನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪೂರ್ವ ವಲಯದ ಕೋವಿಡ್ ಕಮಾಂಡ್ ಸೆಂಟರ್ ಪರಿಶೀಲನೆ:
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆಡಳಿತಗಾರು, ಪ್ರತಿನಿತ್ಯ ಎಷ್ಟು ಪರೀಕ್ಷೆ ನಡೆಸಲಾಗುತ್ತಿದೆ, ಯಾವ ರೀತಿ ಪರೀಕ್ಷೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಪಡೆದುಕೊಂಡರು. ತದನಂತರ ಪೂರ್ವ ವಲಯದ ಕೋವಿಡ್ ಕಮಾಂಡ್ ಸೆಂಟರ್ಗೆ ಭೇಟಿ ನೀಡಿದ ಆಡಳಿತ ಅಧಿಕಾರಿಗಳು, ಪೂರ್ವ ವಲಯದಲ್ಲಿ ಎಷ್ಟು ಪ್ರಕರಣಗಳು ದಾಖಲಾಗಿವೆ, ಯಾವ ರೀತಿ ಕಾರ್ಯನಿರ್ವಹಿಸಲಾಗುತ್ತಿದೆ, ಕಾಂಟ್ಯಾಕ್ಟ್ ಟ್ರೇಸಿಂಗ್, ಹೋಂ ಐಸೋಲೇಶನ್ನಲ್ಲಿರುವವರ ಮೇಲೆ ನಿಗಾವಹಿಸುವ ಹಾಗೂ ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆಯ ಸರಿಯಾಗಿ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸಿದರು. ಜೊತೆಗೆ ಕಮಾಂಡ್ ಸೆಂಟರ್ನಲ್ಲಿ ಸಿಬ್ಬಂದಿಯ ಕಾರ್ಯವೈಕರಿ ಪರಿಶೀಲನೆ ನಡೆಸಿದರು.
ಕೋರಮಂಗಲ 80 ಅಡಿ ರಸ್ತೆಯ ತಪಾಸಣೆ:
ಕೋರಮಂಗಲ 80 ಅಡಿ ರಸ್ತೆಯಲ್ಲಿ ಬೃಹತ್ ಮಳೆನೀರುಗಾಲುವೆ ಹಾದುಹೋಗಿದ್ದು, ಮಳೆ ಬಂದಾಗ ಸಾಕಷ್ಟು ಸಮಸ್ಯೆಯಾಗುತ್ತಿರುವ ದೂರು ಬಂದ ಹಿನ್ನೆಲೆ ಸದರಿ ಸ್ಥಳವನ್ನು ಪರಿಶೀಲಿಸಿದರು. ಕೋರಮಂಗಲ 4ನೇ ಬ್ಲಾಕ್ ನಿವಾಸಿಗಳ ಸಂಘದ ಪದಾಧಿಕಾರಿಗಳು ಈ ಸಮಯದಲ್ಲಿ ಹಾಜರಿದ್ದು, ಮಳೆ ಬಂದಾಗ ಸಾಕಷ್ಟು ತೊಂದರೆಯಾಗುತ್ತಿದ್ದು, 80 ಅಡಿ ರಸ್ತೆಯ ಪಕ್ಕದಲ್ಲಿರುವ ಕೋರಮಂಗಲ ವ್ಯಾಲಿಯು ಮಳೆ ಬಂದಾಗ ತುಂಬಿ ಬರುತ್ತಿರುವುದರಿಂದ ಸಾಕಷ್ಟು ತೊಂದರೆಯಾಗುತ್ತಿರುವುದಾಗಿ ತಪಾಸಣೆಯಲ್ಲಿ ಅಡಳಿತಾಧಿಕಾರಿಗೆ ಮನವಿ ಮಾಡಿದರು.
ಈ ಕುರಿತು ಮುಖ್ಯ ಅಭಿಯಂತರರು (ಬೃಹತ್ ನೀರುಗಾಲುವೆ) ಪ್ರಹ್ಲಾದ್ ಮಾತನಾಡಿ, ಕೋರಮಂಗಲ ವ್ಯಾಲಿ ಕೆ-100 ಮಳೆ ನೀರನ್ನು ಬೆಳ್ಳಂದೂರು ಕೆರೆಗೆ ಕೊಂಡೊಯುತ್ತಿದ್ದು, ಇದಕ್ಕೆ ಸಂಪರ್ಕಿಸುವ ಸೆಕೆಂಡರಿ ವ್ಯಾಲಿಯಲ್ಲಿ ಮಳೆ ನೀರು ಹೆಚ್ಚಾದಾಗ 80 ಅಡಿ ರಸ್ತೆಯಲ್ಲಿ ನೀರುತುಂಬುವುದರಿಂದ ಕೋರಮಂಗಲ 4ನೇ ಬ್ಲಾಕ್, ಎಸ್.ಟಿ ಬೆಡ್ ಪ್ರದೇಶದಲ್ಲಿ ನೀರು ನಿಲ್ಲುತ್ತಿದೆ. ಇದಕ್ಕೆ ಪರಿಹಾರವಾಗಿ ರಸ್ತೆಯ ಮಧ್ಯಭಾಗದಲ್ಲಿ ಸೆಕೆಂಡರಿ ವ್ಯಾಲಿಗೆ ಸಮನಾಂತರ ಕೊಳವೆಯನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಇದರ ವಿನ್ಯಾಸವನ್ನು ಪರಿಶೀಲಿಸಿ ಒಂದೂವರೆ ತಿಂಗಳಲ್ಲಿ ಕಾಮಗಾರಿಯನ್ನು ಮುಕ್ತಾಯಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಇದೇ ರಸ್ತೆಯಲ್ಲಿ ಸುಮಾರು 1.80 ಕಿ.ಮೀ ಉದ್ದಕ್ಕೆ ವೈಟ್ ಟಾಪಿಂಗ್ ಅಳವಡಿಸಲು ಯೋಜಿಸಿದ್ದು, ಬೃಹತ್ ಮಳೆನೀರಿನ ಕೊಳವೆ ಅಳವಡಿಸುವ ಭಾಗವನ್ನು ಬಿಟ್ಟು ಇನ್ನುಳಿದ ಭಾಗದಲ್ಲಿ ವೈಟ್ ಟಾಪಿಂಗ್ ಕಾರ್ಯವನ್ನು ಕೂಡಲೇ ಪ್ರಾರಂಭಿಸಲು ಸೂಚನೆ ನೀಡಿದರು.
ಕೋರಮಂಗಲದಲ್ಲಿ ಎಲಿವೇಟೆಡ್ ಕಾರಿಡಾರ್ ತಪಾಸಣೆ:
ಈಜಿಪುರ ಮುಖ್ಯರಸ್ತೆ, ಸೋನಿ ವರ್ಲ್ಡ್ ಜಂಕ್ಷನ್ ಮತ್ತು ಕೇಂದ್ರಿಯ ಸದನ ಜಂಕ್ಷನ್‌ಗಳನ್ನು ಸಂಯೋಜಿಸಿ ಸುಮಾರು 2.40 ಕಿಮೀ ಉದ್ದದ ಎಲಿವೇಟೆಡ್ ಕಾರಿಡಾರ್ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿದರು. ಮೇಲು ಸೇತುವೆಯ ಕಾರ್ಯವು ಮಂದಗತಿಯಲ್ಲಿ ಸಾಗುತ್ತಿರುವುದನ್ನು ಕಂಡು ಅಸಮದಾನ ವ್ಯಕ್ತಪಡಿಸಿದರು. ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿರುವುದರಿಂದ ಪ್ರಸ್ತುತ ಮೇಲುಸೇತುವೆ ಕೆಳಭಾಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿರುವ ರಸ್ತೆಯ ಅಗಲವನ್ನು ಹೆಚ್ಚಿಸಿ ಸುರಕ್ಷಿತ ಕ್ರಮಗಳನ್ನು ಕೈಗೊಂಡು ವಾಹನ ಸಂಚಾರಕ್ಕೆ ಅನುವಾಗುವಂತೆ ಕ್ರಮಕೈಗೊಂಡು, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಕ್ತಾಯಗೊಳಿಸಲು ಸಮರ್ಪಕ ವೇಲ್ವಿಚಾರಣೆಯನ್ನು ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.