ಬೆಂಗಳೂರು: ಕರ್ನಾಟಕ ರಾಜ್ಯ ಮಾಹಿತಿ ಆಯೋಗದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಹಾಗೂ ಮಾಹಿತಿ ಆಯುಕ್ತರ ನಡುವೆ ಕಂದಕ ಏರ್ಪಟ್ಟಿದ್ದು, ಈ ಸಂಬಂಧ ಎರಡು ಬಣಗಳಿಂದ ಆರೋಪ ಹಾಗೂ ಪ್ರತ್ಯಾರೋಪದಲ್ಲಿ ಮುಳುಗಿದ್ದಾರೆ.
ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ಅಧಿಕಾರ ದುರುಪಯೋಗ ಖಂಡಿಸಿ ರಾಜ್ಯಪಾಲರಿಗೆ ದೂರು ನೀಡಿದ ನಂತರ ಇಂದು ಮಾಹಿತಿ ಸೌಧದಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದರು. 9 ಮಂದಿ ಮಾಹಿತಿ ಆಯುಕ್ತರು ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಎನ್.ಸಿ.ಶ್ರೀನಿವಾಸ್ ಅವರ ವಿರುದ್ದ ಆರೋಪಗಳ ಸುರಿಮಳೆಯನ್ನೇ ಹರಿಸಿದರು. ಇದಾದ ಬಳಿಕ ಆರೋಪಗಳಿಗೆ ಸ್ಪಷನೆ ನೀಡಿದ ಶ್ರೀನಿವಾಸ್, ಮಾಹಿತಿ ಆಯುಕ್ತರು ಮಾಡಿರುವ ಆಪಾದನೆಯಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ.
ರಾಜ್ಯ ಮಾಹಿತಿ ಆಯುಕ್ತರ ಪರ ಎಚ್.ಪಿ.ಸುಧಾಮ ದಾಸ್ ಮಾತನಾಡಿ, ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ಅಧಿಕಾರ ಸ್ವೀಕರಿಸಿ ನಾಲ್ಕು ತಿಂಗಳು ಕಳೆದರೂ ಈವರೆಗೂ ಒಂದು ಸಭೆ ನಡೆಸಿಲ್ಲ. ತಮ್ಮ ಗಮನಕ್ಕೂ ತರದೇ, ಆಯೋಗದ ಸಿಬ್ಬಂದಿ ಸಭೆ ಕರೆದು ಕಚೇರಿಯ ನಡವಳಿಕೆ ಬಗ್ಗೆ ಸೂಚನೆ ನೀಡಿದ್ದಾರೆ. ಈ ಮೂಲಕ ತಮ್ಮ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಕೆಲಸ ವಿಚಾರದಲ್ಲಿ ನಮ್ಮನ್ನೂ ಜೊತೆಗೆ ಕರೆದುಕೊಂಡು ಹೋಗುತಿಲ್ಲ. ಈ ಸಂಬಂಧ ರಾಜ್ಯಪಾಲರಿಗೆ ಇಂದು ಭೇಟಿಯಾಗಿ ದೂರು ನೀಡಿದ್ದೇವೆ ಎಂದರು.
ಪತ್ರಿಕಾಗೋಷ್ಠಿ ಬಳಿಕ ಆರೋಪಗಳಿಗೆ ಸ್ಪಷ್ಟನೆ ನೀಡಿದ ರಾಜ್ಯ ಮುಖ್ಯ ಮಾಹಿತಿ ಆಯೋಗದ ಆಯುಕ್ತ ಎಲ್.ಸಿ.ಶ್ರೀನಿವಾಸ್, ನನ್ನ ಮೇಲೆ ಮಾಡಿರುವ ಆರೋಪಗಳು ಶುದ್ಧ ಸುಳ್ಳು. ನಾನು ಯಾವುದೇ ಸಿಬ್ಬಂದಿಗೆ ತೀರ್ಪು ಹೀಗೇಯೇ ಬರೆಯಿರಿ ಎಂದು ಹೇಳಿಲ್ಲ. ಸೆಕ್ಷನ್ 15 (4) ಪ್ರಕಾರ ಮಾಹಿತಿ ಆಯೋಗ ಹೇಗೆ ಕೆಲಸ ಮಾಡುತ್ತದೆ ಎಂದು ಹೇಳುತ್ತದೆ. ಸಭೆ ನಡೆಸಿಲ್ಲ ಎಂಬುವುದು ಆಧಾರರಹಿತವಾಗಿದೆ. ನಾನು ಈಗಾಗಲೇ ಎರಡು ಸಭೆಗಳನ್ನು ನಡೆಸಿದ್ದೇನೆ. ನಾಲ್ಕು ತಿಂಗಳ ಹಿಂದೆ ರಾಜ್ಯಪಾಲರಿಂದ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಸಭೆ ಹಾಗೂ ನಂತರ ನನ್ನ ಕೊಠಡಿಯಲ್ಲಿ ಮತ್ತೊಂದು ಸಭೆ ನಡೆಸಿರುವ ಕಡತದಲ್ಲಿ ದಾಖಲಾಗಿವೆ ಎಂದು ಸ್ಪಷ್ಟನೆ ನೀಡಿದರು.
ರಾಜ್ಯಪಾಲರಿಗೆ ದೂರು ನೀಡುವ ಮೂಲಕ ರಾಜ್ಯ ಮಾಹಿತಿ ಆಯೋಗಕ್ಕೆ ಕೆಟ್ಟ ಹೆಸರು ಬರುವಂತೆ ಪ್ರಯತ್ನಿಸಿದ್ದಾರೆ. ಸಭೆ ನಡೆಸಿಲ್ಲ. ದೆಹಲಿ ಸಭೆ ನಮಗೆ ಕರೆದಿಲ್ಲ ಎಂದು ಸಣ್ಣಪುಟ್ಟ ವಿಚಾರ ಇಟ್ಟುಕೊಂಡು ಸುಖಾಸುಮ್ಮನೆ ನನ್ನ ವಿರುದ್ದ ದೂರು ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.