ಬೆಂಗಳೂರು : ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಲಸಿಕೆ ತಪ್ಪಿಹೋದ ಅಥವಾ ಬಿಟ್ಟು ಹೋದ 0.2 ವಯಸ್ಸಿನ ಮಕ್ಕಳಿಗೆ ಹಾಗು ಗರ್ಭಿಣಿಯರಿಗೆ ಲಸಿಕಾಕರಣ ನಡೆಸುವ ತೀವ್ರತರನಾದ ಇಂದ್ರಧನುಷ್ 4.0 ಅಭಿಯಾನ ನಾಳೆಯಿಂದ ನಡೆಯಲಿದೆ.
ಕೇಂದ್ರ ಸರ್ಕಾರ ಮಾರ್ಗಸೂಚಿಯಂತೆ 11 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಈ ಅಭಿಯಾನವನ್ನು ಮಾರ್ಚ್ 7, ಏಪ್ರಿಲ್ 4 ಮತ್ತು ಮೇ 9 ರಂದು, ತಿಂಗಳನಲ್ಲಿ ನಿಗದಿತ ದಿನಾಂಕದಂದು 7 ಕಾರ್ಯದಿನಗಳ ಕಾಲ ನಿಯಮಿತ ಲಸಿಕಾ ದಿನವಾದ ಗುರುವಾರ ಸೇರಿದಂತೆ ಅಭಿಯಾನ ನಡೆಸಲಾಗುತ್ತೆ. ನಾಳೆ ಸಚಿವ ಸುಧಾಕರ್ ಶಿವಾಜಿನಗರದ ಅಟಲ್ ಬಿಹಾರ್ ವಾಜಪೇಯಿ ಮೆಡಿಕಲ್ ಕಾಲೇಜಿನಲ್ಲಿ ಇಂದ್ರಧನುಷ್ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಐಎಂಐ 4.0 ಗಾಗಿ ಆಯ್ಕೆಗೊಂಡ ಜಿಲ್ಲೆಗಳು : ಬಾಗಲಕೋಟೆ, ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಗದಗ, ಕಲಬುರಗಿ, ದಾವಣಗೆರೆ, ಬಿಬಿಎಂಪಿ, ವಿಜಯಪುರ ಜಿಲ್ಲೆಗಳನ್ನು ಹಾಗೂ ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಆಯ್ದುಕೊಳ್ಳಲಾಗಿದೆ. ಮೊದಲನೇ ಸುತ್ತಿನ ಮಕ್ಕಳ ಗುರಿ 30,234 ಮತ್ತು ಗರ್ಭಿಣಿಯರು ಗುರಿ 7,521 ಆಗಿರುವುದಾಗಿ ಪ್ರಕಟಣೆ ಹೊರಡಿಸಿದೆ.
ಅಭಿಯಾನಕ್ಕೆ ಗುರುತಿಸಲಾಗುವ ಪ್ರದೇಶಗಳು :
ತಲುಪಿರದ / ತಲುಪಲಾರದ ಪ್ರದೇಶಗಳು ಮತ್ತು ಕಡಿಮೆ ಪ್ರಗತಿಯ ಪ್ರದೇಶಗಳು
- ಕೋವಿಡ್-19 ನಿಂದಾಗಿ ಸಾರ್ವತ್ರಿಕ ಲಸಿಕಾ ಸತ್ರಗಳು ತಪ್ಪಿರುವ ಹಳ್ಳಿಗಳು ಮತ್ತು ಪ್ರದೇಶಗಳು
- ವಲಸಿಗರನ್ನು ಹೊಂದಿರುವ ನಗರ ಪ್ರದೇಶದ ಸ್ಲಂಗಳು
- ಅಲೆಮಾರಿಗಳು ವಾಸಿಸುವ ಸ್ಥಳಗಳು, ಕುರಿ ಕಾಯುವ ಜನ ಸಮುದಾಯದ ಸ್ಥಳಗಳು
- ಕಟ್ಟಡ ನಿರ್ಮಾಣ ಪ್ರದೇಶಗಳು
- ಮೀನುಗಾರರು ವಾಸಿಸುವ ಸ್ಥಳಗಳು, ಬುಡಕಟ್ಟು ಜನಾಂಗಗಳು, ಗುಡ್ಡಗಾಡು ಪ್ರದೇಶಗಳು
- ನಗರ ಪ್ರದೇಶದ ಸುತ್ತಮುತ್ತಲಿನ ಮೊಹಲ್ಲಾಗಳು
- ದಡಾರ, ಗಂಟಲುಮಾರಿ ಮತ್ತು ಧನುರ್ವಾಯು ಪ್ರಕರಣಗಳು ವರದಿಯಾದ ಪ್ರದೇಶಗಳು
- ನಗರ ಕೊಳೆಗೇರಿಗಳು, ಹೆಚ್ಚು ಸಾಂಕ್ರಾಮಿಕ ರೋಗಗಳು ವರದಿಯಾಗುವ ಪ್ರದೇಶ, ಲಸಿಕೆ ವಿರೋಧ ಅಥವಾ ನಿರಾಕರಣಿ ಪ್ರದೇಶಗಳು, ಇತರೆ ಅಪಾಯದಂಚಿನಲ್ಲಿರುವ ಪ್ರದೇಶಗಳನ್ನ ಗುರುತಿಸಲಾಗಿದೆ.