ಬೆಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಇಂದು ಮಧ್ಯರಾತ್ರಿಯಿಂದಲೇ ನೈಟ್ ಕರ್ಪ್ಯೂ ಜಾರಿಮಾಡಿದ್ದು, ರಾತ್ರಿ 10 ಗಂಟೆಯ ಬದಲಾಗಿ 11ರಿಂದ ಈ ಕರ್ಫ್ಯೂ ಜಾರಿ ಮಾಡಿ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕಲ್.ಎಂ.ಸುಂದರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಾರ್ವಜನಿಕರ ಸಂಚಾರ ಹೆಚ್ಚಾಗಲಿದ್ದು, ಕೊರೊನಾ ಹರಡುವ ಸಾಧ್ಯತೆ ಹೆಚ್ಚಿದೆ ಎಂಬ ಭೀತಿಯಿಂದ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಇದರಿಂದಾಗಿ ವ್ಯಾಪಾರಸ್ಥರಿಗೆ ತೀವ್ರ ನಷ್ಟ ಹಾಗೂ ತೊಂದರೆ ಉಂಟಾಗಲಿದೆ. ಕೊರೊನಾದಿಂದ ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ತುತ್ತಾದ ವ್ಯಾಪಾರಸ್ಥರು, ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಅಂದರೆ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಹೆಚ್ಚೆಚ್ಚು ವ್ಯಾಪಾರ - ವಹಿವಾಟು ನಡೆಯುವ ವೇಳೆ ರಾತ್ರಿ ಕರ್ಪ್ಯೂ ಹೇರುವುದು ದೊಡ್ಡ ಪ್ರಮಾಣದ ನಷ್ಟ ಸಂಭವಿಸಿದಂತೆ ಆಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವ್ಯಾಪಾರಸ್ಥರು ತಮ್ಮ ವ್ಯಾವಹಾರಿಕ ಸಮಯ ಮುಗಿಸುವುದೇ 10 ಗಂಟೆಯಾಗುತ್ತದೆ. ಒಂದೊಮ್ಮೆ ಸರ್ಕಾರ 10 ಗಂಟೆಯಿಂದ ಕರ್ಫ್ಯೂ ಜಾರಿ ಮಾಡಿದರೆ 8 ಗಂಟೆಗೆ ಅಂಗಡಿಗಳನ್ನು ಮುಚ್ಚಬೇಕಾದ ಅನಿವಾರ್ಯತೆ ಎದುರಾಗಲಿದೆ. ಈ ಹಿನ್ನೆಲೆ 10 ಗಂಟೆಯ ಬದಲಾಗಿ 11 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸರ್ಕಾರ ಕರ್ಫ್ಯೂ ಜಾರಿ ಮಾಡಲಿ ಎಂದು ಮನವಿ ಮಾಡಿದ್ದಾರೆ.